ಕಾರ್ಕಳ : ಇಲ್ಲಿನ ಮಾಳ ಗೇಟ್‌ನಿಂದ ಎಸ್.ಕೆ. ಬಾರ್ಡರ್ ಮೂಲಕ ಶೃಂಗೇರಿಯ ತನಿಕೋಡು ಗೇಟ್‌ವರೆಗಿನ 29 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಕುರಿತು ಸಂಬಂಧಿತ ಅಧಿಕಾರಿಗಳೊಂದಿಗೆ ಶುಕ್ರವಾರ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಚರ್ಚೆ ನಡೆಸಿದರು.
ಇದೇ ವೇಳೆ ಇಲಾಖೆ ಮಾಹಿತಿ ಪ್ರಕಾರ ಹಿಂದೆ ಗುಲಗುಂಜಿ ಮನೆ, ಕೊರ್ಕನಹಳ್ಳಿ ಸೇರಿದಂತೆ ಮೂರು ಸೇತುವೆಗಳು ಮಂಜೂರಾಗಿದ್ದರೂ ಅರಣ್ಯ ಇಲಾಖೆ ಅನುಮತಿ ಸಿಗದ ಕಾರಣ ಕಾಮಗಾರಿ ರದ್ದಾಗಿತ್ತು. ಇದೀಗ ಅಗತ್ಯ ಅನುಮತಿ ದೊರಕುವ ನಿರೀಕ್ಷೆಯಲ್ಲಿ ರಸ್ತೆ ಇಕ್ಕೆಲಗಳಲ್ಲಿ ಗಡಿ ಗುರುತು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಮತ್ತು ಕಂದಾಯ ಇಲಾಖೆ ಪ್ರಸ್ತಾಪಿತ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿದರೆ 1999ರಿಂದ ಅಂದರೆ ಸುಮಾರು 25 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಮಾಳ-ತನಿಕೋಡು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಶೀಘ್ರ ಚಾಲನೆ ಸಿಗಲಿದೆ ಎಂದು ಸಂಸದ ಕೋಟ ವಿಶ್ವಾಸ ವ್ಯಕ್ತಪಡಿಸಿದರು.ರಾ.ಹೆ. ಇಲಾಖೆಯ ನವೀನ್ ರಾಜ್, ಅರಣ್ಯ ಇಲಾಖೆಯ ಅರುಣ್, ಸತೀಶ್ ನಾಯಕ್, ಸುಬ್ರಹ್ಮಣ್ಯ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.