ಹೃದಯಾಘಾತದಿಂದ ಬಿಜೆಪಿ ಮುಖಂಡ ನಿಧನ । ಗಣ್ಯರ ಸಂತಾಪ
ಕನ್ನಡಪ್ರಭ ವಾರ್ತೆ ಕಾರ್ಖಳಕಾರ್ಕಳದ ಬಿಜೆಪಿ ಹಿರಿಯ ಮುಖಂಡ, ವಕೀಲ ಹಾಗೂ ಸಮಾಜಸೇವಕ ಎಂ.ಕೆ. ವಿಜಯಕುಮಾರ್ (82) ಅವರು ಶುಕ್ರವಾರ ತಡರಾತ್ರಿ ಹೃದಯಾಘಾತದಿಂದ ನಿಧನರಾದರು. ಮನೆಯಲ್ಲಿ ಅಸ್ವಸ್ಥರಾಗಿ ಕುಸಿದು ಬಿದ್ದ ಅವರನ್ನು ತಕ್ಷಣ ಕಾರ್ಕಳದ ರೋಟರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ.ಮಾಜಿ ಮುಖ್ಯಮಂತ್ರಿ ಡಾ. ಎಂ.ವೀರಪ್ಪ ಮೊಯ್ಲಿ, ಆಂಧ್ರಪ್ರದೇಶ ರಾಜ್ಯಪಾಲ ಅಬ್ದುಲ್ ನಜೀರ್, ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ಅಭಯಚಂದ್ರ ಜೈನ್, ಉಡುಪಿ ಬಿಜೆಪಿ ಅಧ್ಯಕ್ಷ ನವೀನ್ ಕುತ್ಯಾರ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಬೋಳ ಪ್ರಶಾಂತ್ ಕಾಮತ್, ಮುನಿಯಾಲು ಉದಯಕುಮಾರ್ ಶೆಟ್ಟಿ, ಶುಭದರಾವ್, ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಪಿ.ಎಲ್. ಧರ್ಮ, ವಿ.ಹಿಂ.ಪ. ದಕ್ಷಿಣ ಪ್ರಾಂತ್ಯದ ಗೋ ರಕ್ಷಕ್ ಪ್ರಮುಖ್ ಸುನಿಲ್ ಕೆ.ಆರ್., ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್, ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಅಂತಿಮ ನಮನ ಸಲ್ಲಿಸಿದರು.ಕಾರ್ಕಳದ ಬಾಹುಬಲಿ ಪ್ರವಚನ ಮಂದಿರದ ಬಳಿ ಸಾರ್ವಜನಿಕ ದರ್ಶನಕ್ಕೆ ಪಾರ್ಥೀವ ಶರೀರವನ್ನು ಇಡಲಾಗಿದ್ದು, ನೂರಾರು ಮಂದಿ ಶ್ರದ್ಧಾಂಜಲಿ ಸಲ್ಲಿಸಿದರು.
ಕಾರ್ಕಳದಲ್ಲಿ ಬಿಜೆಪಿಯ ಅಡಿಪಾಯವನ್ನು ಬಲಪಡಿಸಿದ್ದ ಅವರು, ಪ್ರಚಾರ ಮತ್ತು ಪ್ರಶಂಸೆಯಿಂದ ದೂರ ಉಳಿದು ತಾವು ನಂಬಿದ ಧ್ಯೇಯಕ್ಕಾಗಿ ಬದುಕನ್ನು ಅರ್ಪಿಸಿದರು. ಉತ್ತಮ ವಾಗ್ಮಿಯಾಗಿ ತಮ್ಮದೇ ಶೈಲಿಯಲ್ಲಿ ಜನರನ್ನು ಸೆಳೆಯುತ್ತಿದ್ದ ಅವರು, ರಾಜಕೀಯ ಮತ್ತು ಸಮಾಜ ಜೀವನದಲ್ಲಿ ಅನೇಕರಿಗೆ ಮಾದರಿಯಾಗಿದ್ದರು.ಅವರು ಇವರು ಇಬ್ಬರು ಪುತ್ರರನ್ನು ಅಗಲಿದ್ದಾರೆ.ವಿಜಯ ಕುಮಾರ್ ಅವರು, ಪಕ್ಷದ ನಿಷ್ಠಾವಂತ ಹೋರಾಟಗಾರರಾಗಿದ್ದರು ಎಂದು ವಿ.ಸುನೀಲ್ ಕುಮಾರ್ ಸಂತಾಪ ಸೂಚಿಸಿದ್ದಾರೆ.ಡಾ. ವೀರೇಂದ್ರ ಹೆಗ್ಗಡೆ ಸಂತಾಪ:
ಕಾರ್ಕಳದ ಹಿರಿಯ ವಕೀಲ ಎಂ.ಕೆ. ವಿಜಯಕುಮಾರ್ ನಿಧನರಾದ ಸುದ್ದಿ ತಿಳಿದು ವಿಷಾದವಾಯಿತು. ಜೈನ ಧರ್ಮದ ಬಗ್ಗೆ ಆಳವಾದ ಅಧ್ಯಯನ ಮಾಡಿದ್ದ ಅವರು ಉತ್ತಮ ವಾಗ್ಮಿಯಾಗಿ ಚಿರಪರಿಚಿತರಾಗಿದ್ದರು. ರಾಜಕೀಯ ರಂಗ, ಕಾನೂನು ಸೇವೆ, ಶಿಕ್ಷಣ ಹಾಗೂ ಸಮಾಜ ಸೇವೆಯಲ್ಲಿಯೂ ಉತ್ತಮ ಸೇವೆ-ಸಾಧನೆ ಮಾಡಿದ್ದಾರೆ.ಕಾರ್ಕಳದಲ್ಲಿ ನಡೆದ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಸಮಿತಿಯ ಕಾರ್ಯದರ್ಶಿಯಾಗಿ ಉತ್ತಮ ಸೇವೆ ಮಾಡಿದ್ದರು. ಧರ್ಮಸ್ಥಳದ ಭಕ್ತರೂ, ಅಭಿಮಾನಿಯೂ ಆಗಿದ್ದ ಅವರು ನಮ್ಮ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯ ಸಹಕಾರ ನೀಡಿದ್ದರು.ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ. ಅವರ ಅಗಲುವಿಕೆಯಿಂದ ಕುಟುಂಬ-ವರ್ಗದವರಿಗೆ ಉಂಟಾದ ದು:ಖವನ್ನು ಶಕ್ತಿ ತಾಳ್ಮೆಯನ್ನಿತ್ತು ಭಗವಾನ್ ಶ್ರೀ ಚಂದ್ರನಾಥಸ್ವಾಮಿ ಹಾಗೂ ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸುತ್ತೇನೆ ಎಂದು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸಂತಾಪ ಸೂಚಿಸಿದ್ದಾರೆ.