ವಿಘ್ನೇಶ್ ಎಂ. ಭೂತನಕಾಡು
ಕನ್ನಡಪ್ರಭ ವಾರ್ತೆ ಮಡಿಕೇರಿವಿರಾಜಪೇಟೆಯ ತಾಲೂಕು ಸರ್ಕಾರಿ ಆಸ್ಪತ್ರೆ ಇನ್ನು ಮುಂದೆ ಜಿಲ್ಲಾಸ್ಪತ್ರೆಯಂತೆ ಮೇಲ್ದರ್ಜೆಗೇರಲಿದ್ದು, ಪ್ರಸ್ತುತ 105 ಹಾಸಿಗೆ ಸಾಮರ್ಥ್ಯವುಳ್ಳ ಆಸ್ಪತ್ರೆ ಸುಮಾರು 400 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗಾಗಿ ಅಭಿವೃದ್ಧಿಯಾಗಲಿದೆ.
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರ ಪ್ರಯತ್ನದ ಫಲವಾಗಿ ವಿರಾಜಪೇಟೆ ತಾಲೂಕು ಆಸ್ಪತ್ರೆ ಮೇಲ್ದರ್ಜೆಗೇರಲಿದೆ. ಕಳೆದ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರಾಜಪೇಟೆಯಲ್ಲಿ ಸುಮಾರು 400 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಸ್ಥಾಪಿಸುವುದಾಗಿ ಘೋಷಣೆ ಮಾಡಿದ್ದರು.ಅದರಂತೆ ಈಗಾಗಲೇ ನೂತನ ಆಸ್ಪತ್ರೆ ಕಟ್ಟಡ ಕಾಮಗಾರಿಗೆ ಸರ್ಕಾರ ಅನುಮೋದನೆಯನ್ನು ನೀಡಿದ್ದು, ಮೊದಲ ಹಂತದ ಕಾಮಗಾರಿಗೆ 95.60 ಕೋಟಿ ರು. ಅನುದಾನ ಬಿಡುಗಡೆಗೊಂಡಿದೆ. ನವೆಂಬರ್ ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎನ್ನಲಾಗುತ್ತಿದೆ.
ಮೊದಲ ಹಂತದಲ್ಲಿ 250 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಆರಂಭವಾಗಲಿದೆ. ಇದೀಗ ಪ್ರಸ್ತುತ ಇರುವ ಆಸ್ಪತ್ರೆಯ ಹಿಂಬದಿಲ್ಲೇ ಈ ಹೊಸ ಕಟ್ಟಡದ ಕಾಮಗಾರಿ ಆರಂಭಗೊಳ್ಳಲಿದೆ. ಮುಂದಿನ ಹಂತದಲ್ಲಿ 400 ಹಾಸಿಗೆ ಆಸ್ಪತ್ರೆ ಕೂಡ ಆಗಲಿದೆ.ಜಿಲ್ಲೆಯಲ್ಲಿ ಕೊಡಗು ವೈದ್ಯಕೀಯ ಕಾಲೇಜು ಆರಂಭವಾದಲ್ಲಿಂದ ಜಿಲ್ಲೆಯ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ. ವಿರಾಜಪೇಟೆ ದೊಡ್ಡ ಪಟ್ಟಣ ಕೂಡ ಆಗಿದೆ. ಈ ಭಾಗದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಆನೆ ಹಾವಳಿ, ಹುಲಿ ಹಾವಳಿ ಹೆಚ್ಚಾಗಿದೆ. ಅಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಬುಡಕಟ್ಟು ಜನರು ಕೂಡ ವಾಸವಿದ್ದಾರೆ. ಅಲ್ಲದೆ ಬಹುತೇಕ ಕಾಫಿ ತೋಟಗಳಲ್ಲಿ ಕೂಲಿ ಕಾರ್ಮಿಕರು ಕೂಡ ಇದ್ದಾರೆ. ಇವರಿಗೆ ತಾಲೂಕು ಆಸ್ಪತ್ರೆಯೇ ಆಸರೆಯಾಗಿದೆ. ಇದೀಗ ತಾಲೂಕು ಆಸ್ಪತ್ರೆ ಉನ್ನತೀಕರಣವಾಗುತ್ತಿರುವುದರಿಂದ ಈ ಭಾಗದ ಜನರಿಗೆ ಮತ್ತಷ್ಟು ಅನುಕೂಲವಾಗಲಿದೆ.
ಜಿಲ್ಲಾಸ್ಪತ್ರೆಯಂತೆ ತಾಲೂಕು ಆಸ್ಪತ್ರೆ ಮೇಲ್ದರ್ಜೆಗೆ ಏರುವುದರಿಂದ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವು ಆಧುನಿಕ ಉಪಕರಣಗಳು ಕೂಡ ಲಭ್ಯವಾಗಲಿದೆ. ಇದೀಗ ತಾಲೂಕು ಆಸ್ಪತ್ರೆಯಲ್ಲಿ ಪ್ರಸ್ತುತ ವಿವಿಧ ವಿಭಾಗಗಳಲ್ಲಿ 11 ಮಂದಿ ತಜ್ಞ ವೈದ್ಯರಿದ್ದಾರೆ. ಜಿಲ್ಲಾಸ್ಪತ್ರೆಯಂತೆ ಮೇಲ್ದರ್ಜೆಗೇರಿದಲ್ಲಿ ವೈದ್ಯರ ಸಂಖ್ಯೆ 38ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. 26 ಆಡಳಿತ ಅಧಿಕಾರಿಗಳು, 200ಕ್ಕೂ ಅಧಿಕ ನರ್ಸ್ ಗಳು ಮತ್ತು ಪ್ಯಾರಾ ಮೆಡಿಕಲ್ ಸೇರಿದಂತೆ 300ಕ್ಕೂ ಅಧಿಕ ಸಿಬ್ಬಂದಿಗಳು ಹೆಚ್ಚಾಗಲಿದೆವಿರಾಜಪೇಟೆ ತಾಲೂಕು ಆಸ್ಪತ್ರೆಯನ್ನು, 400 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಸರ್ಕಾರ ನೀಡಿದ ಅನುಮೋದನೆಯ ಮೊದಲ ಹಂತದ, ರು.95.6 ಕೋಟಿ ವೆಚ್ಚದಲ್ಲಿ 250 ಹಾಸಿಗೆಗಳ ಮೇಲ್ದರ್ಜೆ ಕಾರ್ಯ ಸದ್ಯದಲ್ಲೇ ಆರಂಭವಾಗಲಿದೆ. ಈ ಕಾಮಗಾರಿಯ ಸಂಪೂರ್ಣ ರೂಪರೇಷಾ ಸಿದ್ಧಗೊಂಡಿದೆ. ಆಸ್ಪತ್ರೆಯಲ್ಲಿ ಜನತೆಗೆ ಬೇಕಾದ ಎಲ್ಲಾ ರೀತಿಯ ಆಧುನಿಕ ಸೌಲಭ್ಯಗಳು ದೊರಕಲಿದ್ದು, ಬಹುತೇಕ ನವಂಬರ್ ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಈ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವ ಕಾರ್ಯಕ್ರಮವಿದೆ.
-ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರುಶಾಸಕರ ಪ್ರಯತ್ನದಿಂದಾಗಿ ವಿರಾಜಪೇಟೆಯಲ್ಲಿನ ಆಸ್ಪತ್ರೆ ಜಿಲ್ಲಾಸ್ಪತ್ರೆಯಂತೆ ಮೇಲ್ದರ್ಜೆಗೇರಲಿದೆ. ಇದೀಗ ಪ್ರಸ್ತುತ 105 ಹಾಸಿಗೆ ವ್ಯವಸ್ಥೆಯಿದೆ. ಮೊದಲ ಹಂತದ ಕಾಮಗಾರಿಯಾಗಿ 250 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಕಾಮಗಾರಿ ಆಸ್ಪತ್ರೆಯ ಹಿಂಬದಿಯ ಜಾಗದಲ್ಲೇ ನಿರ್ಮಾಣವಾಗಲಿದೆ.
-ಡಾ. ಕೆ.ಎಂ. ಸತೀಶ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ