ಕನ್ನಡಪ್ರಭ ವಾರ್ತೆ ಉಡುಪಿ
ಸ್ವತಃ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ವಿಧಾನಸಭೆಯಲ್ಲಿ ಆರೋಪಿಸಿರುವ, ಕಾರ್ಕಳದ ಪರಶುರಾಮ ಥೀಂ ಪಾರ್ಕ್ ನಿರ್ಮಾಣ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದಲ್ಲಿ ಕಾಮಗಾರಿಯನ್ನು ನಿರ್ವಹಿಸಿದ ನಿರ್ಮಿತ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಅವರನ್ನು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಅಮಾನತುಗೊಳಿಸಿದ್ದಾರೆ.ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾರ್ಕಳ ತಾಲೂಕಿನ ಬೈಲೂರು ಗ್ರಾಮದ ಉಮಿಕಲ್ ಬೆಟ್ಟದ ಮೇಲೆ ಪರಶುರಾಮ ಥೀಮ್ ಪಾರ್ಕ್ ನಿರ್ಮಿಸಿದ್ದು, ಅದರಲ್ಲಿ ಪರಶುರಾಮ ದೇವರ ಪ್ರತಿಮೆಯನ್ನು ಸ್ಥಾಪಿಸಿ, ಕಳೆದ ವಿಧಾನಸಭಾ ಚುನಾವಣೆಗೆ ಕೆಲವೇ ದಿನ ಮೊದಲು ತರಾತುರಿಯಲ್ಲಿ ಆಗಿನ ಸಿಎಂ ಬಸವರಾಜ ಬೊಮ್ಮಯಿ ಅವರು ಉದ್ಘಾಟಿಸಿದ್ದರು.
ಥೀಮ್ ಪಾರ್ಕ್ ಮತ್ತು 33 ಅಡಿ ಎತ್ತರದ ಪರಶುರಾಮನ ಕಂಚಿನ ವಿಗ್ರಹ ಸ್ಥಾಪನೆಯ ಕಾಮಗಾರಿಯನ್ನು ಉಡುಪಿಯ ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿತ್ತು. 11.05 ಕೋಟಿ ರು. ಅಂದಾಜು ಮೊತ್ತದ ಈ ಕಾಮಗಾರಿಗೆ 6.72 ಕೋಟಿ ರು. ಅನುದಾನ ಈಗಾಗಲೇ ಬಿಡುಗಡೆಯಾಗಿದೆ.ಇತ್ತೀಚೆಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಿರ್ಮಿತಿ ಕೇಂದ್ರವು ಕೆಲವೇ ತಿಂಗಳಲ್ಲಿ ಪರಶುರಾಮ ವಿಗ್ರಹವನ್ನು ದುರಸ್ತಿಗೆ ತೆರವು ಮಾಡಿದಾಗ ವಿವಾದ ಆರಂಭವಾಯಿತು. ಈ ವಿಗ್ರಹ ಕಂಚಿನದಲ್ಲ, ಇದು ನಕಲಿ ವಿಗ್ರಹ, ಪರಶುರಾಮದ ಭಕ್ತರ ಧಾರ್ಮಿಕ ಭಾವನೆಗಳಿಗೆ ಅಪಚಾರವಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಸದ್ಯ ಪ್ರಕರಣವು ಉಚ್ಚ ನ್ಯಾಯಾಲಯದಲ್ಲಿದೆ, ಜೊತೆಗೆ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನ್ ದಾಸ್ ನೇತೃತ್ವದ ಆಯೋಗ ಕೂಡ ತನಿಖೆ ನಡೆಸುತ್ತಿದೆ. ಈ ನಡುವೆ ರಾಜ್ಯ ಸರ್ಕಾರ ಪ್ರಕರಣವನ್ನು ಸಿಓಡಿಗೆ ಒಪ್ಪಿಸಿದೆ.ಈ ಥೀಮ್ ಪಾರ್ಕನ್ನು ಪೂರ್ಣಗೊಳಿಸದ, ಸಂಬಂಧಿತ ಪ್ರವಾಸೋದ್ಯಮ ಇಲಾಖೆಗೂ ಹಸ್ತಾಂತರಿಸದ ಮತ್ತು ಕಾಮಗಾರಿಯ ಗುಣಮಟ್ಟದ ಬಗ್ಗೆ ಆರೋಪ ಹೊತ್ತಿರುವ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಅವರು ತನಿಖೆಗೆ ಅಡ್ಡಿ ಉಂಟು ಮಾಡುವ ಅಥವಾ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವ ಸಾಧ್ಯತೆಗಳಿದೆ ಎಂದು ಅವರನ್ನು ಜಿಲ್ಲಾಧಿಕಾರಿ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದಾರೆ.
ಅವರ ಸ್ಥಾನಕ್ಕೆ ಉಡುಪಿ ನಿರ್ಮಿತಿ ಕೇಂದ್ರದ ಸಹಾಯಕ ಯೋಜನಾ ನಿರ್ದೇಶಕರಾಗಿರುವ ದಿವಾಕರ ಪಿ. ಅವರಿಗೆ ಹೆಚ್ಚುವರಿ ಪ್ರಭಾರ ನೀಡಲಾಗಿದೆ.