ಮಾಂಸದಂಗಡಿ ತೆರವುಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ

KannadaprabhaNewsNetwork |  
Published : Jul 26, 2024, 01:32 AM IST
25ಕೆಆರ್ ಎಂಎನ್ 3.ಜೆಪಿಜಿರಾಮನಗರ ಜಿಲ್ಲಾ ಕಚೇರಿಗಳ ಸಂಕೀರ್ಣದ ಎದುರು ಬಿಜೆಪಿ , ಹಿಂದೂ ಜಾಗರಣ ವೇದಿಕೆ ಹಾಗೂ ನಾಗರೀಕರ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಶ್ರೀ ಚಾಮುಂಡೇಶ್ವರಿ ಕರಗ ಮಹೋತ್ಸವದ ಅಂಗವಾಗಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ತೆರೆದಿರುವ ಮಾಂಸಾಹಾರದ ಮಳಿಗೆ ತೆರವುಗೊಳಿಸುವಂತೆ ಒತ್ತಾಯಿಸಿ ಬಿಜೆಪಿ, ಹಿಂದೂ ಜಾಗರಣ ವೇದಿಕೆ ಹಾಗೂ ನಾಗರೀಕರ ವೇದಿಕೆ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಶ್ರೀ ಚಾಮುಂಡೇಶ್ವರಿ ಕರಗ ಮಹೋತ್ಸವದ ಅಂಗವಾಗಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ತೆರೆದಿರುವ ಮಾಂಸಾಹಾರದ ಮಳಿಗೆ ತೆರವುಗೊಳಿಸುವಂತೆ ಒತ್ತಾಯಿಸಿ ಬಿಜೆಪಿ, ಹಿಂದೂ ಜಾಗರಣ ವೇದಿಕೆ ಹಾಗೂ ನಾಗರೀಕರ ವೇದಿಕೆ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾ ಕಚೇರಿಗಳ ಸಂಕೀರ್ಣದ ಎದುರು ಜಿಲ್ಲಾಡಳಿತ ಹಾಗೂ ಶಾಸಕ ಇಕ್ಬಾಲ್ ಹುಸೇನ್ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು ಕೂಡಲೇ ಮಾಂಸಾಹಾರದ ಅಂಗಡಿ ಮಳಿಗೆ ತೆರವುಗೊಳಿಸದಿದ್ದರೆ ಪ್ರತಿಭಟನೆ ತೀವ್ರಗೊಳಿಸುವುದಾಗಿ ಎಚ್ಚರಿಸಿ ಜಿಲ್ಲಾಧಿಕಾರಿಗಳ ಸಹಾಯಕ ಅಧಿಕಾರಿಗೆ ಮನವಿ ಸಲ್ಲಿಸಿದರು.

ಐತಿಹಾಸಿಕ ಚಾಮುಂಡೇಶ್ವರಿ ಕರಗ ಮಹೋತ್ಸವವನ್ನು ಪಾವಿತ್ರ್ಯತೆ, ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ. ಹಬ್ಬಗಳ ಶುದ್ಧತೆ ಮತ್ತು ಪಾವಿತ್ರ್ಯತೆ ತಿಳಿಯದವರ ಕೈಗೆ ಅಧಿಕಾರ ಹೋದರೆ ಇಂತಹ ಅನಾಚಾರಗಳು ಆಗುತ್ತವೆ. ಮಾಂಸಾಹಾರ ಮಳಿಗೆ ತೆರೆಯಲು ಅವಕಾಶ ನೀಡುವ ಮೂಲಕ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿರುವ ಶಾಸಕ ಇಕ್ಬಾಲ್ ಹುಸೇನ್ ರವರು ಕೂಡಲೇ ಜನರಲ್ಲಿ ಕ್ಷಮೆಯಾಚನೆ ಮಾಡಬೇಕು ಎಂದು ಒತ್ತಾಯಿಸಿದರು.

ರಾಮನಗರದಲ್ಲಿ ಹಲವಾರು ವರ್ಷಗಳಿಂದ ನಗರ ದೇವತೆಗಳಾದ ಚಾಮುಂಡೇಶ್ವರಿ ಹಾಗೂ ಬನ್ನಿ ಮಹಂಕಾಳಿ ಅಮ್ಮನವರ ಕರಗಗಳು ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿವೆ. ಇದೇ ಸಂದರ್ಭದಲ್ಲಿ ರಾಜ್ಯ ವ್ಯಾಪಿ ಹಲವಾರು ಊರುಗಳಿಂದ ಭಕ್ತರು ರಾಮನಗರಕ್ಕೆ ಭೇಟಿಕೊಟ್ಟು, ಶ್ರದ್ಧಾ- ಭಕ್ತಿಗಳಿಂದ ಪಾಲ್ಗೊಳ್ಳುತ್ತಾರೆ. ಮನರಂಜನೆ ಕಾರ್ಯಕ್ರಮವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಹಲವಾರು ರೀತಿಯ ಮಳಿಗೆಗಳು, ಆಟೋಟಗಳು, ತಿಂಡಿ- ತಿನಿಸುಗಳ ಮಳಿಗೆಗಳು ತೆರೆಯುತ್ತವೆ. ಹಿಂದುಗಳ ಭಾವನೆಗಳಿಗೆ ಯಾವುದೇ ಧಕ್ಕೆ ಬಾರದ ರೀತಿಯಲ್ಲಿ ಇಷ್ಟು ವರ್ಷವೂ ನಡೆಯುತ್ತಾ ಬಂದಿದೆ.

ಈ ವರ್ಷ ಎಲ್ಲಾ ಶಿಷ್ಟಾಚಾರಗಳನ್ನು ಗಾಳಿಗೆ ತೂರಿ, ಜಿಲ್ಲಾ ಕ್ರೀಡಾಂಗಣದಲ್ಲಿ ಮಾಂಸಾಹಾರದ ಮಳಿಗೆ ತೆರೆಯುವ ಮೂಲಕ ಸಮಸ್ತ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವುದರ ಜೊತೆಗೆ ಕರಗ ಮಹೋತ್ಸವವನ್ನು ಅಪವಿತ್ರಗೊಳಿಸುವ ಕೆಲಸ ನಡೆದಿದೆ ಎಂದು ದೂರಿದರು.

ಮಾಂಸಾಹಾರ ಮಳಿಗೆ ತೆರೆಯಲು ಒಪ್ಪಿಗೆ ಸೂಚಿಸಿರುವುದು ತುಂಬಾ ದುರಾದೃಷ್ಟಕರ. ಇದರಿಂದ ಹಿಂದೂ ಬಾಂಧವರ ಭಾವನೆಗಳಿಗೆ ಧಕ್ಕೆಯಾಗಿದೆ. ಈ ಕೂಡಲೇ ಇದನ್ನು ತೆರವುಗೊಳಿಸಿ, ಜಿಲ್ಲೆಯ ಗೌರವವನ್ನು ಕಾಪಾಡಬೇಕು. ಇದನ್ನು ಹೀಗೆ ಮುಂದುವರೆಸಿದಲ್ಲಿ, ಮುಂದಿನ ದಿನಗಳಲ್ಲಿ ಜಿಲ್ಲಾ ಕ್ರೀಡಾಂಗಣ ಕಬಾಬ್ ಸೆಂಟರ್ ಗಳು, ಬಿರಿಯಾನಿ ಸೆಂಟರ್ ಗಳಾಗಿ ಮಾರ್ಪಾಡಾಗುತ್ತವೆ. ಜಿಲ್ಲಾಡಳಿತ ಕೂಡಲೇ ಎಚ್ಚೆತ್ತು ಇದರ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ನಗರ ಘಟಕ ಅಧ್ಯಕ್ಷ ದರ್ಶನ್ ರೆಡ್ಡಿ, ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ಅನಿಲ್ ಬಾಬು, ಮುಖಂಡರಾದ ಗೌತಮ್ ಗೌಡ, ಮುರಳೀಧರ್, ಎಸ್.ಆರ್ .ನಾಗರಾಜು, ರುದ್ರದೇವರು, ಶಿವಾನಂದ, ಕಾಳಯ್ಯ, ನಾಗರೀಕ ವೇದಿಕೆ ಮುಖಂಡ ಉಮೇಶ್ ಮತ್ತಿತರರು ಭಾಗವಹಿಸಿದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ