ಬಿಎಸ್‌ಎನ್‌ಎಲ್ ತುಮಕೂರು ಮತ್ತು ಹಾಸನ ಜಿಲ್ಲೆಗಳಲ್ಲಿ ೪ಜಿ ಸೇವೆ ಪ್ರಾರಂಭಿಸಿದೆ
ಕನ್ನಡಪ್ರಭ ವಾರ್ತೆ ತುಮಕೂರು
ಖಾಸಗಿ ವಲಯದ ಪೈಪೋಟಿಯ ನಡುವೆ ಬಿಎಸ್‌ಎನ್‌ಎಲ್ ಬಿದ್ದೇ ಹೋಯಿತು ಎನ್ನುವ ಸಂದರ್ಭದಲ್ಲಿ ಈಗ ಮತ್ತೆ ಪುಟಿದೆದ್ದು ನಿಂತಿದೆ. ಇದೀಗ ಬಿಎಸ್‌ಎನ್‌ಎಲ್ ತುಮಕೂರು ಮತ್ತು ಹಾಸನ ಜಿಲ್ಲೆಗಳಲ್ಲಿ ೪ಜಿ ಸೇವೆ ಪ್ರಾರಂಭಿಸಿದೆ. ಪರಿಣಾಮವಾಗಿ ಬಿಎಸ್‌ಎನ್‌ಎಲ್‌ನಿಂದ ಬೇರೆ ಕಡೆಗೆ ಹೋಗಿದ್ದ ಗ್ರಾಹಕರು ಮರಳಿ ಬಿಎಸ್‌ಎನ್‌ಎಲ್‌ನತ್ತ ವಾಪಸ್ ಬರುತ್ತಿದ್ದಾರೆ ಎಂದು ಹಿರಿಯ ಮ್ಯಾನೇಜರ್ ದಿಗಂಬರ್ ಕುಮಾರ್ ಹೇಳಿದರು. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈವರೆಗೆ ತುಮಕೂರು ಮತ್ತು ಹಾಸನ ಜಿಲ್ಲೆಗಳಲ್ಲಿ 2ಜಿ, 3ಜಿ ಸೇವೆಗಳನ್ನು ಮಾತ್ರ ಒದಗಿಸಲಾಗುತ್ತಿತ್ತು. ಇದೀಗ 4ಜಿ ಸೇವೆ ಒದಗಿಸಲಾಗುತ್ತಿದೆ. ತುಮಕೂರು ಮತ್ತು ಹಾಸನ ವ್ಯಾಪಾರ ವಹಿವಾಟಿನ ವಲಯದಲ್ಲಿ ಜುಲೈನಿಂದಲೇ ಈ ಸೇವೆ ಆರಂಭಗೊಂಡಿದ್ದು, ಪ್ರಸ್ತುತ ತುಮಕೂರಿನಲ್ಲಿ 50 ಮತ್ತು ಹಾಸನದಲ್ಲಿ 20 ಸೈಟ್‌ಗಳು 4ಜಿ ಸೇವೆಯಲ್ಲಿ ಕಾರ್ಯಾರಂಭಗೊಂಡಿವೆ. ಜು. ಅಂತ್ಯದ ವೇಳೆಗೆ 100 ಮತ್ತು 50 ಕ್ರಮವಾಗಿ ತುಮಕೂರು ಮತ್ತು ಹಾಸನದಲ್ಲಿ ಇರುತ್ತವೆ. ಅಕ್ಟೋಬರ್ ವೇಳೆಗೆ ತುಮಕೂರಿನ 286 ಮತ್ತು ಹಾಸನದಲ್ಲಿ 194 ಅಸ್ತಿತ್ವದಲ್ಲಿರುವ ಮತ್ತು ಹೊಸ ಸೈಟ್‌ಗಳು ೪ಜಿಗೆ ಹೊಂದಿಕೆಯಾಗಲಿವೆ ಎಂದರು.
ಈಗಾಗಲೇ ಬಿಎಸ್‌ಎನ್‌ಎಲ್ ಸಿಮ್ ಪಡೆದು ಕಾರಣಾಂತರಗಳಿಂದ ಸ್ಥಗಿತಗೊಳಿಸಿರುವ ಗ್ರಾಹಕರು ಕೂಡಲೇ ಬಿಎಸ್‌ಎನ್‌ಎಲ್ ಸೇವೆ ಪಡೆಯಬಹುದಾಗಿದೆ. ೪ಜಿ ಸಿಮ್‌ನ್ನು ಗ್ರಾಹಕರಿಗೆ ಉಚಿತವಾಗಿ ವಿತರಿಸಲಾಗುವುದು. ಹೊಸ ಗ್ರಾಹಕರು ಹತ್ತಿರದ ಸಿಎಸ್‌ಸಿ ಸಂಪರ್ಕಿಸಬಹುದಾಗಿದೆ ಎಂದರು. 2024ರ ಡಿಸೆಂಬರ್ 24ರ ವೇಳೆಗೆ ಎಲ್ಲ 4ಜಿ ಸೈಟ್‌ಗಳನ್ನು ಎರಡೂ ಜಿಲ್ಲೆಗಳಲ್ಲಿ 5ಜಿ ತಂತ್ರಜ್ಞಾನಕ್ಕೆ ಅಪ್‌ಗ್ರೇಡ್ ಮಾಡಲಾಗುತ್ತದೆ. ಅದು ಸಾಫ್ಟವೇರ್ ಆಧಾರಿತವಾಗಿದೆ. ಇದೇ ಮೊದಲ ಬಾರಿಗೆ ಬಿಎಸ್‌ಎನ್‌ಎಲ್ 4ಜಿಗೆ ಮೇಕಿನ್ ಇಂಡಿಯಾ ಉಪಕರಣಗಳನ್ನು ಮಾತ್ರ ಬಳಸುತ್ತಿದೆ. ಇದಕ್ಕೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಸಹಾಯ ಮಾಡುತ್ತಿದೆ ಎಂದರು.ಪ್ರಸ್ತುತ ತುಮಕೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಪ್ರತಿ ತಿಂಗಳು 5ಸಾವಿರ ಹೊಸ ಗ್ರಾಹಕರು ಬಿಎಸ್‌ಎನ್‌ಎಲ್‌ಗೆ ಸೇರುತ್ತಿದ್ದಾರೆ. ಇತರೆ ಅಪರೇಟರ್‌ಗಳು ಸುಂಕವನ್ನು ಶೇ.25 ರಿಂದ 30ರಷ್ಟು ಹೆಚ್ಚಿಸಿದ್ದರೂ ಸಹ ಬಿಎಸ್‌ಎನ್‌ಎಲ್ ಮಾತ್ರ ಸುಂಕವನ್ನು ಹೆಚ್ಚಿಸಿಲ್ಲ. ಮುಂದೆಯೂ ಹೆಚ್ಚಿಸುವ ಯಾವುದೇ ಪ್ರಸ್ತಾಪ ಇಲ್ಲ ಎಂದವರು ಸ್ಪಷ್ಟಪಡಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.