ಕಾರ್ಕಳ: ಕಾರ್ಕಳ ತಾಲೂಕು ಬೀಡಿ ಕಾರ್ಮಿಕರ ಸಂಘದ ಆಶ್ರಯದಲ್ಲಿ ಕಾರ್ಕಳ ಕಾರ್ಮಿಕ ಇಲಾಖೆಯು ಕೊಡಮಾಡಿದ ಸ್ಮಾರ್ಟ್ ಕಾರ್ಡ್‌ಗಳನ್ನು ಶನಿವಾರ ಕಾರ್ಕಳದ ಸಿಐಟಿಯು ಕಚೇರಿಯಲ್ಲಿ ಬೀಡಿ ಕಾರ್ಮಿಕರಿಗೆ ವಿತರಣೆ ಮಾಡಲಾಯಿತು.
ಸದ್ಯ ಈ ಸ್ಮಾರ್ಟ್ ಕಾರ್ಡ್ ಯೋಜನೆಯಲ್ಲಿ ಅಪಘಾತ ಪರಿಹಾರ ಸೌಲಭ್ಯಗಳು, ಸಹಜ ಮರಣ ಪರಿಹಾರ ಮತ್ತು ಅಂತ್ಯಕ್ರಿಯೆ ವೆಚ್ಚಗಳು ದೊರಕಲಿದೆ. ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಕಳ ತಾಲೂಕು ಬೀಡಿ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಕವಿರಾಜ್ ಎಸ್. ಕಾಂಚನ್, ಸರ್ಕಾರ ಹೆಚ್ಚಿನ ಸವಲತ್ತುಗಳನ್ನು ಈ ಯೋಜನೆಯ ಮೂಲಕ ನೀಡಬೇಕು. ಕರ್ನಾಟಕ ರಾಜ್ಯದಲ್ಲಿ ಲಕ್ಷಾಂತರ ಬೀಡಿ ಕಾರ್ಮಿಕರು ಕಡಿಮೆ ವೇತನದಲ್ಲಿ ದುಡಿಯುತ್ತಿದ್ದು ಅವರಿಗೆ ಈ ಕಾರ್ಡ್ ತುಂಬಾ ಸಹಕಾರಿಯಾಗಲಿದೆ. ಮುಂದಿನ ದಿನಗಳಲ್ಲಿ ಈ ಯೋಜನೆ ಸಮರ್ಪಕವಾಗಿ ಜಾರಿ ಮಾಡಲು ಹೆಚ್ಚಿನ ಸವಲತ್ತುಗಳನ್ನು ಪಡೆಯಲು ಹೋರಾಟದ ಅಗತ್ಯವು ಇದೆ ಎಂದು ಹೇಳಿದರು.
ಕಾರ್ಕಳ ಬೀಡಿ ಕಾರ್ಮಿಕ ಸಂಘದ ಅಧ್ಯಕ್ಷರಾದ ಸುನೀತಾ ಶೆಟ್ಟಿ ಮತ್ತು ಸಿಐಟಿಯು ಮುಖಂಡರಾದ ಪುಷ್ಪ ಮತ್ತಿತರರು ಉಪಸ್ಥಿತರಿದ್ದರು.