ಜಿಲ್ಲೆಯಲ್ಲಿ ಕರ್ನಾಟಕ ಬಂದ್‌ ನೀರಸ

KannadaprabhaNewsNetwork | Published : Mar 23, 2025 1:31 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಮಹಾರಾಷ್ಟ್ರದ ಎಂಇಎಸ್ ಪುಂಡಾಟಿಕೆ ಖಂಡಿಸಿ ವಾಟಾಳ ನಾಗರಾಜ್‌ ನೇತೃತ್ವದ ಕನ್ನಡಪರ ಸಂಘಟನೆಗಳ ಒಕ್ಕೂಟ ಕರೆ ನೀಡಿದ್ದ ರಾಜ್ಯ ಬಂದ್‌ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ್‌ ಬೆಂಬಲಿಸಿ ವಿಜಯಪುರ ಜಿಲ್ಲೆಯ ವಿವಿಧ ಕನ್ನಡಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಮಹಾರಾಷ್ಟ್ರದ ಎಂಇಎಸ್ ಪುಂಡಾಟಿಕೆ ಖಂಡಿಸಿ ವಾಟಾಳ ನಾಗರಾಜ್‌ ನೇತೃತ್ವದ ಕನ್ನಡಪರ ಸಂಘಟನೆಗಳ ಒಕ್ಕೂಟ ಕರೆ ನೀಡಿದ್ದ ರಾಜ್ಯ ಬಂದ್‌ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ್‌ ಬೆಂಬಲಿಸಿ ವಿಜಯಪುರ ಜಿಲ್ಲೆಯ ವಿವಿಧ ಕನ್ನಡಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರ ಸೇರಿದಂತೆ ಜಿಲ್ಲೆಯಲ್ಲಿ ಎಲ್ಲಿಯೂ ಬಂದ್ ವಾತಾವರಣ ಕಂಡು ಬರಲಿಲ್ಲ. ಆದರೆ, ಕನ್ನಡಪರ ಸಂಘಟನೆಯ ನೂರಾರು ಕಾರ್ಯಕರ್ತರು ಪ್ರತಿಭಟನೆಗೆ ಅಣಿಯಾಗಿ ಎಂಇಎಸ್ ವಿರುದ್ಧ ಘೋಷಣೆ ಮೊಳಗಿಸಿದರು. ಶನಿವಾರ ಹಿನ್ನೆಲೆಯಲ್ಲಿ ಬ್ಯಾಂಕುಗಳು ಸೇವೆ ಸ್ಥಗಿತಗೊಳಿಸಿದ್ದವು. ಆದರೆ ಬಸ್ ಸಂಚಾರ ಎಂದಿನಂತೆ ಇತ್ತು.

ನಗರದ ಡಾ.ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ಸೇರಿದ ಕರವೇ (ಶಿವರಾಮೇಗೌಡ) ಬಣದ ಪದಾಧಿಕಾರಿಗಳು ಎಂಇಎಸ್ ಪ್ರತಿಕೃತಿ ದಹಿಸಿ ಎಂಇಎಸ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಎಂಇಎಸ್ ಪುಂಡಾಟಿಕೆ ಕೊನೆಗಾಣಲಿ, ನಾಡದ್ರೋಹಿ ಎಂಇಎಸ್‌ಗೆ ಧಿಕ್ಕಾರ, ಎಂಇಎಸ್ ಹತ್ತಿಕ್ಕುವವರೆಗೂ ಹೋರಾಟ ನಿಲ್ಲದು ಎಂಬ ಘೋಷಣೆಗಳನ್ನು ಮೊಳಗಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಕರವೇ ಜಿಲ್ಲಾಧ್ಯಕ್ಷ ಶೇಷರಾವ್ ಮಾನೆ ಮಾತನಾಡಿ, ಕನ್ನಡಿಗರಿಗೆ ರೈಲ್ವೆ ಇಲಾಖೆಯಿಂದ, ಬ್ಯಾಂಕ್ ಉದ್ಯೋಗ ಸೇರಿದಂತೆ ಇನ್ನಿತರ ಅನೇಕ ಕೇಂದ್ರ ಸರ್ಕಾರದ ಉದ್ಯೋಗಾವಕಾಶ ವಂಚನೆಯಿಂದ ಹಾಗೂ ಕಾವೇರಿ, ಕೃಷ್ಣೆ, ಮಹಾದಾಯಿ ಯೋಜನೆಯಿಂದ ವಂಚಿತರಾದ ಕನ್ನಡಿಗರ ಅಸ್ಮಿತೆಯ ಹಿತದೃಷ್ಟಿಯಿಂದ ಕನ್ನಡಪರ ಸಂಘಟನೆಗಳು ಮಾಡುವ ಹೋರಾಟ ೭ ಕೋಟಿ ಕನ್ನಡಿಗರ ಬೇಡಿಕೆಗಳನ್ನು ಶೀಘ್ರದಲ್ಲಿ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಕನ್ನಡ ಪರ ಹೋರಾಟಗಾರ ಸಂಘಟನೆಯ ಜಿಲ್ಲಾ ಗೌರವಾಧ್ಯಕ್ಷ ಎಂ.ಎಂ. ಖಲಾಸಿ ಮಾತನಾಡಿ, ಕನ್ನಡ ಅಸ್ಮಿತೆ ಉಳಿಯಲು ಬೆಳೆಯಲು ಜನ್ಮತಳೆದ ರಾಜ್ಯದ ಕನ್ನಡಪರ ಸಂಘಟನೆಗಳು ನಾಡು, ನುಡಿ, ಜಲ, ಪರಿಸರ ಸಂರಕ್ಷಣೆಗೆ ಬದ್ದವಾಗಿ ಶಾಂತಿಯುತ ಕಾರ್ಯಾಚರಣೆ ಸಹಿಸದೆ ಎಮ್.ಇ.ಎಸ್. ಪುಂಡರ ಗೂಂಡಾವರ್ತನೆಯನ್ನು ಉಗ್ರವಾಗಿ ಖಂಡಿಸಿದರು. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಬೌಮ, ಇದಕ್ಕೆ ಧಕ್ಕೆ ತಂದ ಎಮ್.ಇ.ಎಸ್. ಹತ್ತಿಕ್ಕಿವ ನಿಟ್ಟಿನಲ್ಲಿ ನಾವು ಕನ್ನಡಿಗರು ಸುಮ್ಮನಿರಲು ಸಾಧ್ಯವಿಲ್ಲ. ಇನ್ನು ಮುಂದೆ ನಮ್ಮ ತಾಳ್ಮೆಯನ್ನು ಪರೀಕ್ಷಸಿದರೆ ರಾಜ್ಯ ಮಟ್ಟದ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವದು ಎಂದು ಎಚ್ಚರಿಕೆ ನೀಡಿದರು.

ಸಾಹಿತಿ ಇಂದುಮತಿ ಲಮಾಣಿ ಮಾತನಾಡಿ, ನಾಡಲ್ಲಿ ಎಮ್.ಇ.ಎಸ್‌ನವರ ಪುಂಡಾಟಿಕೆ ನೋಡಿಕೊಂಡು ಕೆಲವು ಕನ್ನಡಪರ ಸಂಘಟನೆಗಳು ನೋಡಿ ನೋಡದಂತೆ ಮೌನ ವಹಿಸುವದು ಖಂಡನೀಯ. ಇಂತಹ ಪುಂಡಾಟಿಕೆಯ ಸಂಘಟನೆಯನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಸಂಚಾಲಕ ಸಾಧಿಕ ಶೇಖ, ಜಿಲ್ಲಾ ಮುಖಂಡರಾದ ಮೈನುದ್ದೀನ ವಾಲಿಕಾರ, ಡಾ.ಎನ್.ಐ.ಪಟೇಲ, ಆರ್.ಎಚ್.ಕೇಶವಾಪೂರ, ವಸಂತರಾವ ಕುಲಕರ್ಣಿ, ಕೆ.ಕೆ.ಬನ್ನಟ್ಟಿ, ಪ್ರಕಾಶ ನಡುವಿನಕೇರಿ, ಹಾಗೂ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಭಾರತಿ ಟಂಕಸಾಲಿ, ಜಿಲ್ಲಾ ಪದಾಧಿಕಾರಿಗಳಾದ ಜಯಶ್ರೀ ಸುರಪೂರ, ವಿಜಯಾ ಬಿರಾದಾರ, ಮಂಗಲಾ ರಾಠೋಡ, ಕವಿತಾ ರಾಠೋಡ, ರೇಣುಕಾ ಕಟ್ಟಿ, ಕಲ್ಲವ್ವ ಹೊಸಮನಿ, ಜಯಶ್ರೀ ನಂದಿಕೋಲ, ಕಲ್ಪನಾ ಹೊಸಮನಿ, ಭಾರತಿ ಕುಂದನಗಾರ, ಸುರೇಶ ಹೊಸಮನಿ, ಮೋಹನ ರಾಠೋಡ, ಪ್ರೊ.ದೊಡ್ಡಣ್ಣ ಭಜಂತ್ರಿ ಮುಂತಾದವರು ಇದ್ದರು.

Share this article