ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಜೀವ ಜಲ ನೀರು ಅತ್ಯಂತ ಅಮೂಲ್ಯ. ವ್ಯರ್ಥ ಮಾಡದೇ ಹಿತ ಮಿತವಾಗಿ ಬಳಸಬೇಕು ಎಂದು ಅಪರ ಸಿವಿಲ್ ನ್ಯಾಯಾಧೀಶರಾದ ಆರ್. ಶಕುಂತಲಾ ಕರೆ ನೀಡಿದರು.ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ವಿಶ್ವ ಜಲ ದಿನಾಚರಣೆ ಅಂಗವಾಗಿ ವಿವಿಧ ಬಗೆಯ ಹೂವು ಮತ್ತು ಹಣ್ಣಿನ ಸಸಿಗಳನ್ನು ನೆಟ್ಟು ನೀರೆರೆದು ಮಾತನಾಡಿ, ವಿಶ್ವದಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗಾಗಿ ಮಹಾಯುದ್ಧವು ನಡೆದರೆ ನಾವು ಆಶ್ಚರ್ಯ ಪಡಬೇಕಾಗಿಲ್ಲ ಎಂದರು.
ನೀರು ಚಿನ್ನಕ್ಕಿಂತಲೂ ಶ್ರೇಷ್ಠ. ಮಾನವರಾದ ನಾವು ಸೇರಿದಂತೆ ಪಶು ಪಕ್ಷಿಗಳು ಜೀವಸಂಕುಲಗಳು ನೀರಿಲ್ಲದಿದ್ದರೆ ಜೀವನ ನಡೆಸುವುದೇ ಕಷ್ಟವಾಗಲಿದೆ. ಆದ್ದರಿಂದ ನೀರನ್ನು ವ್ಯರ್ಥವಾಗಿ ಪೋಲು ಮಾಡದೇ ಎಚ್ಚರಿಕೆಯಿಂದ ಬಳಸಬೇಕು ಎಂದು ಮನವಿ ಮಾಡಿದರು.ಜೆಎಂಎಫ್ ಸಿ ಸಿವಿಲ್ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧಿಶರಾದ ಸುಧೀರ್, ಅಪರ ಸಿವಿಲ್ ನ್ಯಾಯಾಧಿಶರಾದ ದೇವರಾಜು, ಅರ್ಪಿತಾ, ತಾಲೂಕು ವಲಯ ಅರಣ್ಯ ಅಧಿಕಾರಿ ಅನಿತಾ ಸಸಿಗಳನ್ನು ನೆಟ್ಟು ನೀರೆರೆದರು.
ವಕೀಲರ ಸಂಘದ ಮಾಜಿ ಅಧ್ಯಕ್ಷ ಎನ್. ಆರ್.ರವಿಶಂಕರ್ ಮಾತನಾಡಿ, ಜೀವ ಜಲ ನೀರು ನಮ್ಮ ಬದುಕಿನ ಸಂಜೀವಿನಿ. ಶ್ರೀಸಾಮಾನ್ಯರು, ಮಕ್ಕಳು ಸೇರಿದಂತೆ ನಾಗರೀಕ ಸಮಾಜದಲ್ಲಿ ವಾಸ ಮಾಡುವ ಪ್ರತಿಯೊಬ್ಬರೂ ಶುದ್ಧವಾದ ನೀರನ್ನು ಕುಡಿಯಲು ಬಳಸುವ ಮೂಲಕ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ನಾಂದಿ ಹಾಡಬೇಕು ಎಂದು ಮನವಿ ಮಾಡಿದರು.ಈ ವೇಳೆ ಸಹಾಯಕ ಸರ್ಕಾರಿ ಅಭಿಯೋಜಕ ಸುರೇಂದ್ರ, ವಕೀಲರ ಸಂಘದ ಅಧ್ಯಕ್ಷ ನಾಗೇಗೌಡ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಸಾಧುಗೋನಹಳ್ಳಿ ಮಂಜೇಗೌಡ, ವಲಯ ಅರಣ್ಯಾಧಿಕಾರಿ ಅನಿತ ಸೇರಿದಂತೆ ವಕೀಲರ ಸಂಘದ ಪದಾಧಿಕಾರಿಗಳು, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.