ಗದಗ:ಕನ್ನಡಿಗರ ಮೇಲೆ ಎಂಇಎಸ್ ಕಾರ್ಯಕರ್ತರು ಮಾಡುತ್ತಿರುವ ಕಿರುಕುಳ ಮತ್ತು ಕನ್ನಡ ವಿರೋಧಿ ನಡವಳಿಕೆಯನ್ನು ಖಂಡಿಸಿ ವಿವಿಧ ಸಂಘಟನೆಗಳು ಶನಿವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಗದಗ ಜಿಲ್ಲೆಯಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನಜೀವನ, ವ್ಯಾಪಾರ ವಹಿವಾಟು ಸೇರಿದಂತೆ ಎಲ್ಲವೂ ಎಂದಿನಂತೆ ನಡೆಯಿತು.
ವ್ಯಾಪಾರ ವಹಿವಾಟು ಎಂದಿನಂತೆ: ಜಿಲ್ಲಾ ಕೇಂದ್ರವಾದ ಗದಗ ನಗರದಲ್ಲಿ ಶನಿವಾರ ಬೆಳಗ್ಗೆಯಿಂದಲೇ ವ್ಯಾಪಾರ ವಹಿವಾಟು ಸಾಂಗವಾಗಿಯೇ ನಡೆಯಿತು. ಅದರಲ್ಲಿಯೂ ಶನಿವಾರ ಗದಗದಲ್ಲಿ ಸಂತೆ ದಿನವಾದ ಹಿನ್ನೆಲೆಯಲ್ಲಿ ಅಕ್ಕ ಪಕ್ಕದ ಗ್ರಾಮಗಳು ಮತ್ತು ಜಿಲ್ಲೆಯ ವಿವಿಧ ತಾಲೂಕುಗಳಿಂದ ಸಾವಿರಾರು ಸಂಖ್ಯೆಯ ಜನರು ತಮ್ಮ ನಿತ್ಯದ ಕೆಲಸ ಕಾರ್ಯಗಳಿಗೆ ಆಗಮಿಸಿದ್ದರು. ಅವಳಿ ನಗರದ ಎಲ್ಲಾ ಮಾರುಕಟ್ಟೆಗಳು ಯಥಾವತ್ತಾಗಿಯೇ ನಡೆದವು.
ಬಸ್ ಸಂಚಾರ ಸಹಜ: ಗದಗ-ಬೆಟಗೇರಿ ಅವಳಿ ನಗರದಲ್ಲಿಯೂ ಆಟೋ ಸೇವೆ ಎಂದಿನಂತಿತ್ತು. ಜಿಲ್ಲಾ ಕೇಂದ್ರಗಳಿಂದ ತಾಲೂಕು ಕೇಂದ್ರಗಳಿಗೆ ಮತ್ತು ಅಕ್ಕ ಪಕ್ಕದ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ಬಸ್ ಸಂಚಾರ ಎಂದಿನಂತೆ ನಡೆದಿದ್ದು, ಬೆಳಗಿನ ಜಾವ ಮಾತ್ರ ಪಕ್ಕದ ರಾಜ್ಯಗಳಿಂದ ಬರುವ ವಾಹನಗಳು ಬೈಪಾಸ್ ಮೂಲಕವೇ ಸಂಚರಿಸಿದ್ದು, 10 ಗಂಟೆಯ ನಂತರ ಎಲ್ಲವೂ ಸಹಜವಾಗಿಯೇ ನಡೆದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕರ್ನಾಟಕ ಬಂದ್ ಇದೆಯೋ ಇಲ್ಲವೋ ಎನ್ನುವಷ್ಟು ಜನದಟ್ಟಣೆ ಇತ್ತು.ಹೋಟೆಲ್, ಶಾಲಾ ಕಾಲೇಜು ಎಂದಿನಂತೆ: ಬಂದ್‌ಗೆ ಯಾವುದೇ ಸಂಘಟನೆಗಳು ಬೆಂಬಲ ನೀಡದೇ ಇರುವ ಹಿನ್ನೆಲೆಯಲ್ಲಿ ಜನರು ನಿರಾತಂಕವಾಗಿಯೇ ಓಡಾಡಿದರು, ಶನಿವಾರವಾದ ಹಿನ್ನೆಲೆಯಲ್ಲಿ ಶಾಲೆಗಳು ಬೆಳಗ್ಗೆಯೇ ಪ್ರಾರಂಭವಾಗಿದ್ದು ನಿರಾಂತಕವಾಗಿ ನಡೆದವು, ಅವಳಿ ನಗರದ ಎಲ್ಲಾ ಹೋಟೆಲ್‌ಗಳಲ್ಲೂ ದಿನನಿತ್ಯದಂತೆ ವಹಿವಾಟು ನಡೆಯಿತು.