ಕರ್ನಾಟಕ ಬ್ಯಾಂಕಿನ ಯಲ್ಲಾಪುರ ಶಾಖೆಯ ೧೪ನೇ ವಾರ್ಷಿಕೋತ್ಸವ

KannadaprabhaNewsNetwork |  
Published : Jun 25, 2025, 11:47 PM IST
ಫೋಟೋ ಜೂ.೨೩ ವೈ.ಎಲ್.ಪಿ. ೦೭ | Kannada Prabha

ಸಾರಾಂಶ

ಬ್ಯಾಂಕು ಉತ್ತಮ ಪ್ರಗತಿಯಾಗಬೇಕಾದರೆ ಹೇಗೆ ಠೇವುದಾರರು ಬೇಕೋ, ಹಾಗೇ ಉತ್ತಮ ಸಾಲಗಾರರೂ ಬೇಕಾಗುತ್ತಾರೆ.

ಯಲ್ಲಾಪುರ: ಕರ್ನಾಟಕ ಬ್ಯಾಂಕು ಉತ್ತಮ ಸೇವೆ ನೀಡಿ, ಜನರ ಪ್ರೀತಿಗೆ ಪಾತ್ರವಾಗಿದೆ ಎಂದು ಗಾಯತ್ರಿ ಕಂಪನಿಯ ಭಾಗೀದಾರ ಉಮೇಶ ಭಟ್ಟ ಹೇಳಿದರು.

ಅವರು ಕರ್ನಾಟಕ ಬ್ಯಾಂಕಿನ ಯಲ್ಲಾಪುರ ಶಾಖೆಯ ೧೪ನೇ ವಾರ್ಷಿಕೋತ್ಸವ ಆಚರಣೆ ಮತ್ತು ಗ್ರಾಹಕರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಬ್ಯಾಂಕು ಉತ್ತಮ ಪ್ರಗತಿಯಾಗಬೇಕಾದರೆ ಹೇಗೆ ಠೇವುದಾರರು ಬೇಕೋ, ಹಾಗೇ ಉತ್ತಮ ಸಾಲಗಾರರೂ ಬೇಕಾಗುತ್ತಾರೆ. ನಿಮ್ಮ ಬ್ಯಾಂಕಿನ ಕೆಲವು ನಿಯಮಾವಳಿಯಿಂದ ಗ್ರಾಹಕರಿಗೆ ತೊಂದರೆಯಾಗುತ್ತಿದೆ. ಪ್ರತಿ ವ್ಯವಹಾರಕ್ಕೂ ಕೇಂದ್ರ ಕಚೇರಿಗೆ ಫೈಲ್ ಹೋಗಿ ತೀರ್ಮಾನವಾಗಬೇಕು. ಇದರಿಂದ ಗ್ರಾಹಕರಿಗೆ ತ್ವರಿತ ಸೇವೆ ಅಸಾಧ್ಯ. ಮೊದಲಿನಂತೆ ಶಾಖಾಧಿಕಾರಿಗಳಿಗೆ ಕೆಲವು ಅಧಿಕಾರ ನೀಡಬೇಕು. ಇಲ್ಲದೇ ಇದ್ದರೆ ಉಳಿದ ದೊಡ್ಡ ದೊಡ್ಡ ಬ್ಯಾಂಕುಗಳಿಗೆ ನಿಮ್ಮ ಗ್ರಾಹಕರು ಹೋದಾರು ಎಂದು ಎಚ್ಚರಿಸಿದರು.

ಬ್ಯಾಂಕಿನ ಕೇಂದ್ರ ಕಚೇರಿಯ ಪ್ರಧಾನ ವ್ಯವಸ್ಥಾಪಕ ರಂಜಿತ್ ಶೆಟ್ಟಿ ಮಾತನಾಡಿ, ನಮ್ಮ ಬ್ಯಾಂಕು ೧೦೦ ವರ್ಷ ಕಳೆದು ದೇಶಾದ್ಯಂತ ೯೫೦ಕ್ಕೂ ಹೆಚ್ಚಿನ ಶಾಖೆ ಹೊಂದಿ, ೮೦೦೦ ಕ್ಕೂ ಅಧಿಕ ಸಿಬ್ಬಂದಿ ಕಾರ್ಯ ಗ್ರಾಹಕರಿಗೆ ದೊರೆಯುತ್ತಿದೆ. ದೇಶದಲ್ಲಿ ಶತಮಾನ ದಾಟಿದ ಕೆಲವೇ ಕೆಲವು ಸಂಸ್ಥೆಗಳಲ್ಲಿ ನಮ್ಮದು ಒಂದು. ಇದು ಟಾಟಾ ಬಿರ್ಲಾದ ಹಾಗೆ ಕಾರ್ಪೋರೇಟ್ ವ್ಯವಸ್ಥೆಯಿಲ್ಲ. ಸಮಾನ ಮನಸ್ಕರು ೧೯೨೪ರಲ್ಲಿ ಸೇರಿ ಈ ಬ್ಯಾಂಕನ್ನು ಸ್ಥಾಪಿಸಿದ್ದಾರೆ. ನಮ್ಮ ಷೇರುದಾರರಿಗೆ ಉತ್ತಮ ಡಿವಿಡೆಂಡ್ ನೀಡುತ್ತಿದ್ದೇವೆ. ಸರ್ಕಾರದ ನಿಯಮದಂತೆ ಸಿ.ಎಸ್.ಆರ್. ಹಣವನ್ನು ಸಮಾಜದ ಅಭಿವೃದ್ಧಿ ಕಾರ್ಯಕ್ಕೆ ವಿನಿಯೋಗಿಸುತ್ತಿದ್ದೇವೆ. ಏನೇ ಸಲಹೆ ಸೂಚನೆಗಳಿದ್ದರೂ ನೇರವಾಗಿ ನಮ್ಮ ವ್ಯವಸ್ಥಾಪಕರನ್ನು ಭೇಟಿಯಾಗಿ ತಿಳಿಸಬಹುದು ಎಂದರು.

ತೆರಿಗೆ ಸಲಹೆಗಾರ ಎಸ್.ಎಂ.ಭಟ್ಟ ಗ್ರಾಹಕರ ಪರವಾಗಿ ಮಾತನಾಡಿ, ಇಂದು ದೊಡ್ಡ ದೊಡ್ಡ ಬ್ಯಾಂಕುಗಳು ಬಂದಿವೆ. ಸ್ಪರ್ಧಾ ಜಗತ್ತಿನಲ್ಲಿದ್ದೇವೆ. ಯಾವುದೇ ಅಗತ್ಯವಾದ ಸಾಲ ಇತ್ಯಾದಿ ವ್ಯವಹಾರಕ್ಕೆ ಉಳಿದೆಲ್ಲ ಬ್ಯಾಂಕುಗಳಿಗಿಂತ ಅತಿ ಹೆಚ್ಚು ದಾಖಲೆ ಕೇಳಲಾಗುತ್ತಿದೆ. ಅಲ್ಲದೇ ಜನರಿಗೆ ಇಂದು ತಾಳ್ಮೆಯಿಲ್ಲ. ನಿಮ್ಮಿಂದ ತ್ವರಿತ ಸೇವೆ ಇಲ್ಲದಿದ್ದರೆ ಬೇರೆ ಬ್ಯಾಂಕಿಗೆ ಹೋಗುತ್ತಾರೆ. ಹಾಗಾಗಿ ನಿಮ್ಮ ಬ್ಯಾಂಕಿನ ವ್ಯವಸ್ಥೆ ಸರಳೀಕರಣಗೊಳ್ಳಬೇಕು ಎಂದರು.

ಅನಿತಾ ಆರ್.ಹೆಗಡೆ ಪ್ರಾರ್ಥಿಸಿದರು. ಬ್ಯಾಂಕಿನ ವ್ಯವಸ್ಥಾಪಕ ಪೃಥ್ವಿ ಎ.ಎನ್ ಸ್ವಾಗತಿಸಿದರು. ಸಹಾಯಕ ವ್ಯವಸ್ಥಾಪಕ ಕಿರಣ ಭಟ್ಟ ನಿರ್ವಹಿಸಿ, ವಂದಿಸಿದರು.

ಕರ್ನಾಟಕ ಬ್ಯಾಂಕಿನ ಯಲ್ಲಾಪುರ ಶಾಖೆಯ ೧೪ನೇ ವಾರ್ಷಿಕೋತ್ಸವ ನಡೆಯಿತು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌