ಕೆಆರ್‌ಎಸ್‌ಗೆ ಇಂದು ಸಿಎಂ,ಡಿಸಿಎಂ ಬಾಗಿನ ಸಮರ್ಪಣೆ

KannadaprabhaNewsNetwork |  
Published : Jun 30, 2025, 12:35 AM IST
29ಕೆಎಂಎನ್ ಡಿ21,22,23 | Kannada Prabha

ಸಾರಾಂಶ

ಕರ್ನಾಟಕದಲ್ಲಿ ಅತಿ ಹೆಚ್ಚು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದವರಲ್ಲಿ ಒಬ್ಬರಾಗಿರುವ ಸಿಎಂ ಸಿದ್ದರಾಮಯ್ಯನವರಿಗೆ ಇದೀಗ ಹೊಸದೊಂದು ದಾಖಲೆ ಬರೆಯುವ ಸುವರ್ಣ ಅವಕಾಶ ಒದಗಿ ಬಂದಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜ ಸಾಗರ ಜಲಾಶಯಕ್ಕೆ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿಯೊಬ್ಬರು ಜೂನ್ ತಿಂಗಳಲ್ಲಿಯೇ ಬಾಗಿನ ಅರ್ಪಿಸಲಿದ್ದಾರೆ.

ಶನಿವಾರವೇ ಗರಿಷ್ಠ 124 ಅಡಿಗೆ ತಲುಪಿದ ಕೆಆರ್‌ಎಸ್‌ ಅಣೆಕಟ್ಟೆಯಲ್ಲಿನ ನೀರಿನ ಮಟ್ಟ

ದಶಕಗಳ ಬಳಿಕ ಜೂನ್‌ನಲ್ಲೇ ಡ್ಯಾಂ ಭರ್ತಿ. ಜೂನ್‌ನಲ್ಲಿ ಸಿಎಂ ಬಾಗಿನ ಇದೇ ಮೊದಲು

ಮಧ್ಯಾಹ್ನ 12ಕ್ಕೆ ಕಾವೇರಿ ಪ್ರತಿಮೆಗೆ ಸಿಎಂ ಸೇರಿ ಗಣ್ಯರಿಂದ ಪೂಜೆ, ಬಳಿಕ ಬಾಗಿನ

ಬಾಗಿನ ಸಮರ್ಪಣೆ ಹಿನ್ನೆಲೆ ಪೂಜಾ ಸ್ಥಳದಲ್ಲಿ ಭಾರೀ ಶೃಂಗಾರ, ರೈತರಲ್ಲಿ ಸಂಭ್ರಮ

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕರ್ನಾಟಕದಲ್ಲಿ ಅತಿ ಹೆಚ್ಚು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದವರಲ್ಲಿ ಒಬ್ಬರಾಗಿರುವ ಸಿಎಂ ಸಿದ್ದರಾಮಯ್ಯನವರಿಗೆ ಇದೀಗ ಹೊಸದೊಂದು ದಾಖಲೆ ಬರೆಯುವ ಸುವರ್ಣ ಅವಕಾಶ ಒದಗಿ ಬಂದಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜ ಸಾಗರ ಜಲಾಶಯಕ್ಕೆ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿಯೊಬ್ಬರು ಜೂನ್ ತಿಂಗಳಲ್ಲಿಯೇ ಬಾಗಿನ ಅರ್ಪಿಸಲಿದ್ದಾರೆ.

ಜೂನ್‌ ಆರಂಭದಿಂದ ಅಬ್ಬರಿಸುತ್ತಿರುವ ಮುಂಗಾರು ಮಳೆಯಿಂದಾಗಿ ಜೂನ್‌ ತಿಂಗಳಲ್ಲೇ ಕೆಆರ್‌ಎಸ್‌ (124.80 ಅಡಿ) ಭರ್ತಿಯಾಗಿದೆ. ಹೀಗಾಗಿ, ಜೂನ್‌ 28, ಶನಿವಾರವೇ ಡ್ಯಾಂ ಭರ್ತಿಯಾಗಿದ್ದು, ಜೂನ್ 30ರಂದು ಸೋಮವಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಕೆಆರ್​ಎಸ್ ಡ್ಯಾಂಗೆ ಬಾಗಿನ ಅರ್ಪಿಸಲಿದ್ದಾರೆ. ವೇದಬ್ರಹ್ಮ ಡಾ.ಭಾನುಪ್ರಕಾಶ್ ಶರ್ಮ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿವೆ.

ಸೋಮವಾರ ಬೆಳಗ್ಗೆ ಆಗಮಿಸಲಿರುವ ಸಿದ್ದರಾಮಯ್ಯ, ಮಧ್ಯಾಹ್ನ 12 ಗಂಟೆಯ ಅಭಿಜಿನ್‌ ಮುಹೂರ್ತದಲ್ಲಿ ಅಣೆಕಟ್ಟೆಯ ಮಧ್ಯಭಾಗದಲ್ಲಿನ ಕಾವೇರಿ ಮಾತೆಯ ಪ್ರತಿಮೆಗೆ ಪೂಜೆ ಸಲ್ಲಿಸಿ, ಅಣೆಕಟ್ಟೆಗೆ ಬಾಗಿನ ಅರ್ಪಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಸಚಿವರಾದ ಎನ್.ಎಸ್. ಬೋಸರಾಜು, ಕೆ.ವೆಂಕಟೇಶ್, ಸ್ಥಳೀಯ ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಹಾಗೂ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮನೆ ಮಾಡಿದ ಸಂಭ್ರಮ:

ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಣೆಕಟ್ಟೆ ಬಳಿ ಸಂಭ್ರಮ ಮನೆ ಮಾಡಿದೆ. ಡ್ಯಾಂನ್ನು ಮಧುವಣಗಿತ್ತಿಯಂತೆ ಶೃಂಗಾರಗೊಳಿಸಲಾಗಿದೆ. ಅಣೆಕಟ್ಟೆ ಮೇಲ್ಬಾಗದಲ್ಲಿನ ಗೋಡೆಗಳಿಗೆ ಸುಣ್ಣ-ಬಣ್ಣ ಬಳಿದು, ಕನ್ನಡ ಬಾವುಟ ಕಟ್ಟಿ, ತೋರಣಗಳಿಂದ ಸಿಂಗರಿಸಲಾಗಿದೆ. ಸಚಿವ ಸಂಪುಟದ ಸದಸ್ಯರು, ಶಾಸಕರು ಬಾಗಿನ ಅರ್ಪಿಸುವ ಜಾಗದಲ್ಲಿ ಕೆಂಪು ಬಣ್ಣದ ಮ್ಯಾಟ್ ಹೊದಿಸಿ ಪುಟ್ಟ ವೇದಿಕೆ ನಿರ್ಮಿಸಲಾಗಿದೆ. ಬಾಗಿನ ಅರ್ಪಿಸುವ ಜಾಗದ ಸುತ್ತಲೂ ಅಣೆಕಟ್ಟೆಗೆ ಹೊಂದಿಕೊಳ್ಳುವಂತೆ ಬೊಂಬುಗಳಿಂದ ಕಟ್ಟಿ ಬಿಗಿ ಭದ್ರತೆ ಒದಗಿಸಲಾಗಿದೆ. ಸಿಎಂ, ಸಚಿವರು ಆಗಮಿಸುವ ಹಿನ್ನೆಲೆಯಲ್ಲಿ ಅಣೆಕಟ್ಟೆ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಕೆಇಆರ್‌ಎಸ್ ಸಂಶೋಧನಾ ಕೇಂದ್ರದ ಆವರಣದಲ್ಲಿ ಹೆಲಿಕಾಪ್ಟರ್ ಇಳಿಯಲು ಸ್ಥಳವಕಾಶ ಮಾಡಲಾಗಿದೆ. ಈ ಸ್ಥಳವನ್ನು ಜೆಸಿಬಿ ಮೂಲಕ ಸ್ವಚ್ಛಗೊಳಿಸಲಾಗಿದೆ. ಹೆಲಿಕಾಪ್ಟರ್‌ನಿಂದ ಇಳಿದ ಬಳಿಕ ಕಾರಿನ ಮೂಲಕ ಸಿದ್ದರಾಮಯ್ಯ ಬರುವ ಮಾರ್ಗದಲ್ಲಿ ರಸ್ತೆಯ ಎರಡೂ ಬದಿಯಲ್ಲಿ ವಿವಿಧ ಬಗೆಯ ಸ್ವಾಗತ ಕಮಾನು, ಕಟೌಟ್‌ಗಳನ್ನು ಅಳವಡಿಸಲಾಗಿದೆ.

ಕೆಆರ್​ಎಸ್ ಡ್ಯಾಂ ಸಾಮಾನ್ಯವಾಗಿ ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗುತ್ತದೆ. ನಂತರ ಮುಖ್ಯಮಂತ್ರಿಗಳು ಬಾಗಿನ ಅರ್ಪಿಸುತ್ತಾರೆ. ಆದರೆ, ಈ ಬಾರಿ ಅವಧಿಪೂರ್ವ ಮುಂಗಾರು ಮಳೆ ಚೆನ್ನಾಗಿ ಬಿದ್ದಿದೆ. ಜೊತೆಗೆ, ಕಾವೇರಿ ಜಲಾನಯನ ಪ್ರದೇಶದಲ್ಲಿ ಕಳೆದೊಂದು ತಿಂಗಳಿನಿಂದ ಭಾರಿ ಮಳೆಯಾಗುತ್ತಿದೆ. ಹೀಗಾಗಿ, ಜೂನ್ ಕೊನೆಯ ವಾರದಲ್ಲೇ ಡ್ಯಾಂ ಭರ್ತಿಯಾಗಿದೆ.

124.80 ಅಡಿ ಗರಿಷ್ಠ ಮಟ್ಟ ಇರುವ ಜಲಾಶಯದಲ್ಲಿ ಪ್ರಸ್ತುತ 124.80 ಅಡಿ ನೀರು ಸಂಗ್ರಹ ಮಾಡಲಾಗಿದೆ. 46,501 ಕ್ಯುಸೆಕ್ ಒಳಹರಿವಿದ್ದು, 21,463 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಪ್ರಸ್ತುತ ಅಣೆಕಟ್ಟೆಯಲ್ಲಿ 49.452 ಟಿಎಂಸಿ ನೀರು ಸಂಗ್ರಹವಾಗಿದೆ.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ