ಮುಂಡಗೋಡ: ಕನ್ನಡ ಪ್ರತಿಯೊಬ್ಬರಿಗೂ ಆಶ್ರಯ ನೀಡಿದ ಒಂದು ಸುಂದರ ಸ್ವರ್ಗದ ತವರಿದ್ದಂತೆ. ಇಲ್ಲಿ ಎಲ್ಲ ಜಾತಿ, ಧರ್ಮದ ಜನಾಂಗ ಸಹಬಾಳ್ವೆಯಿಂದ ಜೀವನ ಸಾಗಿಸುವುದರಿಂದಲೇ ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟ ಎನ್ನಲಾಗುತ್ತದೆ ಎಂದು ಮುಂಡಗೋಡ ಸರ್ಕಾರಿ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲ ಪ್ರಸನ್ನಸಿಂಗ್ ಹಜೇರಿ ತಿಳಿಸಿದರು.ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದ ಸಹಯೋಗದಲ್ಲಿ ಕನ್ನಡ ಕಾರ್ತಿಕದ ಅಂಗವಾಗಿ ಕನ್ನಡವೇನೆ ಕುಣಿದಾಡವೆನ್ನದೆ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಪ್ರತಿಯೊಬ್ಬರ ಉಸಿರಾಗಬೇಕು. ಎಲ್ಲರೂ ಪ್ರೀತಿಸಬೇಕು ಮತ್ತು ಗೌರವಿಸಬೇಕು. ಅಲ್ಲದೆ ಪ್ರತಿ ಮನೆಗಳಲ್ಲಿ ಕನ್ನಡದ ಬಳಕೆ ಮಾಡಿ ಕನ್ನಡ ಉಳಿಸಿ ನಾಡಿನ ಗೌರವ ಎತ್ತಿ ಹಿಡಿಯುವ ಕೆಲಸ ಎಲ್ಲರಿಂದ ಆಗಲಿ. ಕನ್ನಡ ಅತ್ಯಂತ ಪುರಾತನ ಭಾಷೆಯಾಗಿದ್ದು, ಅದನ್ನು ಗೌರವಿಸಿ ಬೆಳಸೋಣ ಎಂದ ಅವರು, ಮುಂದಿನ ದಿನಗಳಲ್ಲಿ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಕನ್ನಡದ ಅಸ್ಮಿತೆ, ಸಾಹಿತ್ಯದ ಅಭಿರುಚಿ ಬೆಳೆಸುವ ಕುರಿತಾದ ಕಾರ್ಯಕ್ರಮಗಳನ್ನು ಸಂಘಟಿಸುವ ಚಿಂತನೆ ಮಾಡಲಾಗುವುದು ಎಂದರು.ಮಳಗಿ ಕೆಪಿಎಸ್ ಶಾಲೆಯ ಕನ್ನಡ ಅಧ್ಯಾಪಕ ಗಂಗಾಧರ ನಾಯ್ಕ ಪುರದಮಠ ಮಾತನಾಡಿ, ಕನ್ನಡ ಎಂದರೆ ಕೇವಲ ಭಾಷೆಗಷ್ಟೆ ಸೀಮಿತವಲ್ಲ, ಇಲ್ಲಿನ ನೆಲ ಜಲ ಗಡಿ ಸಾಹಿತ್ಯ ಸಂಸ್ಕೃತಿ ಕಲೆ ಎಲ್ಲವನ್ನು ಒಳಗೊಂಡಿದೆ ಕನ್ನಡ ಕನ್ನಡ ಎಂದರೆ ಬನ್ನಿ ನಮ್ಮ ಸಂಗಡ ಎಂಬ ಕವಿವಾಣಿಯ ಮಹತ್ವ ತಿಳಿಸಿದರು. ಕರ್ನಾಟಕ ಏಕೀಕರಣ ಕಾಲದಿಂದ ಸಾಹಿತ್ಯಕವಾಗಿ ಸಾಂಸ್ಕೃತಿಕವಾಗಿ ನಡೆದು ಬಂದ ಹಾದಿಯನ್ನು ವಿವರಿಸಿದರುಕನ್ನಡ ಸಾಹಿತ್ಯ ಪರಿಷತ್ತು ಮುಂಡಗೋಡ ಘಟಕದ ಅಧ್ಯಕ್ಷ ವಸಂತ ಕೋಣಸಾಲಿ ಮಾತನಾಡಿ, ಕನ್ನಡ ಉಳಿಯಬೇಕಾದರೆ ಅದನ್ನು ಬಳಸಿ ಬೆಳೆಸಬೇಕು. ಪರಭಾಷಿಕರು ಸಿಕ್ಕಾಗ ಅವರ ಭಾಷೆಯಲ್ಲಿ ಮಾತನಾಡದೆ ಕನ್ನಡದಲ್ಲಿ ಮಾತನಾಡಬೇಕು. ಆಗ ಮಾತ್ರ ಕನ್ನಡದ ಅಸ್ಮಿತೆ ಉಳಿಯುತ್ತದೆ ಎಂದರು. ಮಹೇಶ್ ಮಳೇಕರ, ಪ್ರಸನ್ನ ಸಿಂಗ್ ಬಿ. ಹಜೇರಿ ಅವರನ್ನು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು. ಕಾಲೇಜಿನ ವಿದ್ಯಾರ್ಥಿ ಪರ್ವೀನ್ ಕಾರ್ಯಕ್ರಮ ನಿರೂಪಿಸಿದರು. ಡಾ. ಪಿ.ಪಿ. ಛಬ್ಬಿ ಮಾತನಾಡಿದರು. ಇದೇ ವೇಳೆ ಕನ್ನಡದ ಇತಿಹಾಸ ಕುರಿತು ಮಾತನಾಡಿದ ವಿದ್ಯಾರ್ಥಿನಿ ಜ್ಞಾನೇಶ್ವರಿ ದಾನಪ್ಪನವರ ಮಾತುಗಳು ಸಭಿಕರಿಂದ ಮೆಚ್ಚುಗೆ ಪಡೆಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಎಸ್.ಡಿ. ಮುಡೆಣ್ಣವರ, ಕೋಶಾಧ್ಯಕ್ಷ ನಾಗರಾಜ ಅರ್ಕಸಾಲಿ, ಪ್ರಥಮದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ನಾಗರಾಜ ಹರಿಜನ್ ಸೇರಿದಂತೆ ಕಾಲೇಜಿನ ಉಪನ್ಯಾಸಕರಾದ ಮಧುಶ್ರೀ ಕೆ. ಮತ್ತು ಅಧ್ಯಾಪಕ ವರ್ಗ ಹಾಗೂ ಸಂಗಪ್ಪ ಕೋಳೂರು, ಎಸ್.ಬಿ. ಹೂಗಾರ, ಚಿದಾನಂದ ಪಾಟೀಲ, ಗೌರಮ್ಮ ಕೊಳ್ಳಾನವರ ನೂರಾರು ಸಂಖ್ಯೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.