ರೈತರ ಪಹಣಿಯಲ್ಲಿ ವಕ್ಫ್‌ ಹೆಸರು: ಅಂಕೋಲಾದಲ್ಲಿ ಬಿಜೆಪಿ ಪ್ರತಿಭಟನೆ

KannadaprabhaNewsNetwork |  
Published : Nov 11, 2024, 01:14 AM IST
ಅಂಕೋಲಾದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. | Kannada Prabha

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಜನಸಾಮಾನ್ಯರ ಜಮೀನಿನ ಪಹಣಿ ಪತ್ರದ ಕಾಲಂ ನಂ. 11ರಲ್ಲಿ ವಕ್ಛ್ ಬೋರ್ಡ್ ಹೆಸರು ಬರುವಂತೆ ಹುನ್ನಾರ ನಡೆಸಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದರು.

ಅಂಕೋಲಾ: ರಾಜ್ಯದಲ್ಲಿ ರೈತರ ಮತ್ತು ಹಿಂದೂ ಧಾರ್ಮಿಕ ಕೇಂದ್ರಗಳ ಭೂಮಿಯನ್ನು ವಕ್ಫ್ ಮಂಡಳಿಗೆ ವರ್ಗಾವಣೆ ಮಾಡಲಾಗಿರುವುದನ್ನು ವಿರೋಧಿಸಿ ಬಿಜೆಪಿ ಅಂಕೋಲಾ ಮಂಡಲದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಜೈಹಿಂದ್ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ವಕ್ಫ್ ಸಚಿವ ಜಮೀರ್ ಅಹಮ್ಮದ್ ಅವರು ರಾಜೀನಾಮೆ ನೀಡುವಂತೆ ಆಗ್ರಹಿಸಿದರು.ಬಿಜೆಪಿ ವಕ್ತಾರ ನಾಗರಾಜ ನಾಯಕ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಜನಸಾಮಾನ್ಯರ ಜಮೀನಿನ ಪಹಣಿ ಪತ್ರದ ಕಾಲಂ ನಂ. 11ರಲ್ಲಿ ವಕ್ಛ್ ಬೋರ್ಡ್ ಹೆಸರು ಬರುವಂತೆ ಹುನ್ನಾರ ನಡೆಸಿದ್ದು, ಹಿಂದುಗಳ ಭೂಮಿಯನ್ನು ಸಂಪೂರ್ಣವಾಗಿ ಕಬಳಿಸುವ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದರು.

ಯಾವುದೇ ಮುಸಲ್ಮಾನ ತನ್ನ ಅಸ್ತಿಯನ್ನು ಅಲ್ಲಾಹುವಿನ ಹೆಸರಿನಲ್ಲಿ ದಾನ ಮಾಡಿದರೆ ಅದನ್ನು ವಕ್ಫ್ ಆಸ್ತಿ ಎಂದು ಹೇಳುತ್ತಾರೆ. ಅದಕ್ಕೆ ಯಾರ ಅಭ್ಯಂತರವೂ ಇಲ್ಲ. ಆದರೆ ರಾಜ್ಯದಲ್ಲಿ ಇರುವ ಹಿಂದುಗಳ ಮತ್ತು ಸರ್ಕಾರದ ಆಸ್ತಿಯನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಚಿವ ಜಮೀರ ಅಹಮ್ಮದ್ ಅವರ ಸಾರಥ್ಯದಲ್ಲಿ ವಕ್ಫ್ ಮಂಡಳಿಗೆ ನೀಡಲು ಹೊರಟಿರುವುದು ಖಂಡನೀಯ ಎಂದರು.

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾಧ್ಯಕ್ಷ ರಾಜೇಂದ್ರ ನಾಯ್ಕ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಮ್ಮಕ್ಕಿನಿಂದಲೇ ರಾಜ್ಯದಲ್ಲಿ ರೈತರ ಮತ್ತು ಹಿಂದುಳಿದ ವರ್ಗಗಳ ಜನರ ಅಸ್ತಿಯನ್ನು ವಕ್ಫ್ ಬೋರ್ಡಿಗೆ ಸೇರುವಂತೆ ಮಾಡಲಾಗುತ್ತಿದ್ದು, ಇದು ಬೆಳಕಿಗೆ ಬಂದು ನಂತರ ಇದೀಗ ನೋಟಿಸ್ ಹಿಂತೆಗೆದುಕೊಳ್ಳುವ ಮಾತು ಕೇಳಿ ಬರತೊಡಗಿದೆ ಎಂದರು.ಬಿಜೆಪಿ ಪ್ರಮುಖ ನಿತ್ಯಾನಂದ ಗಾಂವಕರ್ ಮಾತನಾಡಿ, ತಾಲೂಕಿನ ಬೊಬ್ರವಾಡ ಗ್ರಾಮದ ಎರಡು ಸರ್ವೇ ನಂಬರ್ಗಳ ಅಸ್ತಿಯನ್ನು ಅತಿಕ್ರಮಣ ಮಾಡಲಾಗಿದೆ. ತಾಲೂಕಿನಲ್ಲಿ ವಕ್ಫ್ ಮಂಡಳಿ ಆಸ್ತಿ ಎಷ್ಟಿದೆ ಎಂದು ತಹಸೀಲ್ದಾರರು ಬಹಿರಂಗಪಡಿಸಬೇಕು ಎಂದರು.

ಬಿಜೆಪಿ ಮಂಡಲಾಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಮಾಧ್ಯಮ ವಕ್ತಾರ ಜಗದೀಶ ನಾಯಕ ಮೊಗಟಾ ಮಾತನಾಡಿದರು. ಮುಖರುಗಳಾದ ಭಾಸ್ಕರ ನಾರ್ವೇಕರ್, ಚಂದ್ರಕಾಂತ ನಾಯ್ಕ, ಸೂರಜ ನಾಯ್ಕ, ಬಿಂದೇಶ ನಾಯಕ, ಹುವಾ ಖಂಡೇಕರ್, ಶೀಲಾ ಶೆಟ್ಟಿ, ತಾರಾ ಗಾಂವಕರ್, ಸಂಜಯ ನಾಯ್ಕ, ನಾಗೇಂದ್ರ ನಾಯ್ಕ, ನೀಲೇಶ ನಾಯ್ಕ, ರಾಮಚಂದ್ರ ಹೆಗಡೆ, ವಿ.ಎಸ್. ಭಟ್ಟ ಕಲ್ಲೇಶ್ವರ ಉಪಸ್ಥಿತರಿದ್ದರು. ತಹಸೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''
ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ