ಹೊಸಪೇಟೆ: ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಎಲ್ಲ ಸಮಾಜದವರು ಭಾವೈಕ್ಯದಿಂದ ಬಾಳುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
ಚುನಾವಣೆ ವೇಳೆಯಲ್ಲಿ ಗ್ಯಾರಂಟಿಗಳನ್ನು ಘೋಷಣೆ ಮಾಡಿ ಅದರಂತೆ ಐದು ಗ್ಯಾರಂಟಿ ಯೋಜನೆಗಳಿಗೆ ಚಾಲನೆ ನೀಡಿ ಅನುಷ್ಠಾನ ಮಾಡಲಾಗಿದೆ. ನಾವು ಆರನೇ ಗ್ಯಾರಂಟಿ ಘೋಷಣೆ ಮಾಡಿಲ್ಲ. ಆದರೆ ಅದು ಬಡ ಜನರ, ವಸತಿ ರಹಿತರ ಕಾಳಜಿಗೆ ವಿಶೇಷವಾಗಿ ಮನೆಗಳನ್ನು ನೀಡುವ ಚಿಂತನೆ ಮಾಡಲಾಗಿದೆ. ಸ್ಲಂ ಬೋರ್ಡ್ ನಿಂದ 1,80,253 ಮನೆಗಳು ಮತ್ತು ರಾಜೀವ್ ಗಾಂಧಿ ವಸತಿ ನಿಗಮದಿಂದ 47,860 ಮನೆಗಳು ಸೇರಿ 2,030,900 ಮನೆಗಳನ್ನು ಈ ಹಿಂದಿನ ನಮ್ಮ ಸರ್ಕಾರದಲ್ಲಿ ಮಂಜೂರು ಮಾಡಲಾಗಿತ್ತು. ಇವುಗಳು ಕಾರಣಾಂತರದಿಂದ ಹಂಚಿಕೆಯಾಗಿರಲಿಲ್ಲ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಮಂಜೂರು ಮಾಡಲಾಗುತ್ತದೆ ಎಂದರು.
ವಸತಿ ರಹಿತರ ಸಮಸ್ಯೆಗಳಿಗೆ ಸ್ಪಂದಿಸಿ ಕಳೆದ ಫೆಬ್ರವರಿಯಲ್ಲಿ 36799 ಮನೆಗಳನ್ನು ನೀಡಿ ಇದಕ್ಕಾಗಿ ₹500 ಕೋಟಿ ಬಿಡುಗಡೆ ಮಾಡಲಾಗಿತ್ತು. ಬರುವ ಒಂದು ತಿಂಗಳಲ್ಲಿ ಮತ್ತೆ 38000 ಮನೆಗಳನ್ನು ನೀಡುವ ಮೂಲಕ ವಸತಿ ರಹಿತರಿಗೆ ಸೂರು ಕಲ್ಪಿಸಲಾಗುತ್ತದೆ ಎಂದರು.ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ, ಮಧ್ಯಮ ವರ್ಗದವರಿಗೆ ಸಾಕಷ್ಟು ಅನುಕೂಲಗಳಾಗಿದ್ದು ಯಾವುದೇ ಕಾರಣಕ್ಕೂ ಯೋಜನೆಗಳು ಸ್ಥಗಿತವಾಗುವುದಿಲ್ಲ. ಈ ಯೋಜನೆಗಳಿಂದ ಜನರಿಗೆ ಸಾಕಷ್ಟು ಅನುಕೂಲವಾಗಿದ್ದು ಆರ್ಥಿಕ ಮಟ್ಟ ಸುಧಾರಣೆಯಾಗಿದೆ ಎಂದರು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಕ್ರೀಡಾಂಗಣದಲ್ಲಿ ಪೊಲೀಸ್ ಇಲಾಖೆ, ಮಹಿಳಾ ಪೇದೆ, ಗೃಹ ರಕ್ಷಕದಳ, ಎನ್‍ಸಿಸಿ, ಸೇವಾದಳ, ಪೌರ ಕಾರ್ಮಿಕರ ತಂಡದಿಂದ ಆಕರ್ಷಕ ಪಥಸಂಚಲನ ನಡೆಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಜಿಲ್ಲಾಧಿಕಾರಿ ಕಚೇರಿ ಮುಂದೆ ಕನ್ನಡದ ಮೊಟ್ಟ ಮೊದಲ ಶಿಲಾ ಶಾಸನವಾದ ಹಲ್ಮಿಡಿ ಶಾಸನದ ಸ್ಮಾರಕ ಸ್ಥಾಪನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಲೋಕಾರ್ಪಣೆಗೊಳಿಸಿದರು.ಶಾಸಕ ಎಚ್.ಆರ್. ಗವಿಯಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ಜಿಪಂ ಸಿಇಒ ಅಕ್ರಮ್ ಷಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅರ್ಸಲನ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.