ಇಮಾಮಸಾಬ್‌ ವಲ್ಲೆಪ್ಪನವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

KannadaprabhaNewsNetwork |  
Published : Oct 31, 2024, 01:04 AM IST
30ಡಿಡಬ್ಲೂಡಿ4 | Kannada Prabha

ಸಾರಾಂಶ

ಅಕ್ಷರಜ್ಞಾನ ಇರದಿದ್ದರೂ ಜಾನಪದ ಉಳಿವಿಗೆ ಟೊಂಕಟ್ಟಿದ ಇಮಾಮಸಾಬ್, ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಗೊಟಗೋಡಿಯ ಜಾನಪದ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ.

ಧಾರವಾಡ:

ರಾಜ್ಯ ಸರ್ಕಾರವು ಬುಧವಾರ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದ್ದು, ಜಿಲ್ಲೆಯ ಪರವಾಗಿ ರಾಜ್ಯೋತ್ಸವ ಪ್ರಶಸ್ತಿಗೆ ಖ್ಯಾತ ಜನಪದ ಗಾಯಕ ಇಮಾಮಸಾಬ್ ವಲ್ಲೆಪ್ಪನವರ ಅವರ ಹೆಸರನ್ನು ಪ್ರಕಟಿಸಿದೆ.

ನವಲಗುಂದ ತಾಲೂಕಿನ ನಾಗನೂರ ಗ್ರಾಮದ ಮಹಮ್ಮದಸಾಬ್-ಸೈದಮ್ಮ ವಲ್ಲೆಪ್ಪನವರ ದಂಪತಿ ಉದರದಲ್ಲಿ ಜು. 28ರಂದು 1956ರಲ್ಲಿ ಜನಿಸಿದ ಇಮಾಮಸಾಬ್, ಬಡತನದಿಂದ ಶಿಕ್ಷಣದಿಂದ ವಂಚಿತರಾದರು. ಚಿಕ್ಕವರಿದ್ದಾಗ ಆಡು-ಕುರಿ, ದನಕರು ಕಾಯುತ್ತ ಜನಪದ ಗಾಯನ ಕಲಿತಿದ್ದು ಅದ್ಭುತ. ಯೌವನದಲ್ಲಿ ಟೇಲರಿಂಗ್ ವೃತ್ತಿ ಜತೆಜತೆಗೆ ಐ.ಎಂ. ಪಟೇಲರ ಜಾನಪದ ಕಲಾವಿದ ಅಂತಲೂ ಅವರು ಜನಮನ ಸೆಳೆದರು.

ಅಕ್ಷರಜ್ಞಾನ ಇರದಿದ್ದರೂ ಜಾನಪದ ಉಳಿವಿಗೆ ಟೊಂಕಟ್ಟಿದ ಇಮಾಮಸಾಬ್, ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಗೊಟಗೋಡಿಯ ಜಾನಪದ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಜಿಲ್ಲೆ ಅಥವಾ ಹೊರ ಜಿಲ್ಲೆಗಳಲ್ಲಿ ಯಾವುದೇ ಜಾತ್ರೆ, ಉತ್ಸವ, ಸಾಹಿತ್ಯ ಸಮ್ಮೇಳನ, ಕೃಷಿ ಮೇಳ, ಧಾರ್ಮಿಕ, ಅಧ್ಯಾತ್ಮ... ಹೀಗೆ ಅನೇಕ ಕಾರ್ಯಕ್ರಗಳಲ್ಲಿ ತಮ್ಮ ಕಂಚಿನ ಕಂಠದಿಂದ ಜನಪದ ಹಾಡಿನ ಮೂಲಕ ಭಾವೈಕ್ಯದ ಸಂದೇಶ ಸಾರಿರುವುದು ವಿಶೇಷ.

ಕರ್ನಾಟಕದ ಗಡಿ ಪ್ರದೇಶಗಳು, ನಾಗಾಲ್ಯಾಂಡ್‌, ಗುವಾಹಾಟಿ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಹಾಗೂ ದೇಶ-ವಿದೇಶಗಳಲ್ಲಿ ತಮ್ಮ ಹಾಡಿನ ಮೂಲಕ ಅಪಾರ ಅಭಿಮಾನಗಳನ್ನೂ ಸಂಪಾದಿಸಿದ್ದಾರೆ. ಕಳೆದ 58 ವರ್ಷಗಳಲ್ಲಿ ನಗರ ಹಾಗೂ ಹಳ್ಳಿಗಳು, ರಾಜ್ಯ ಹಾಗೂ ಹೊರರಾಜ್ಯ ಸುತ್ತಿರುವ ಇಮಾಮಸಾಬ್ ವಲ್ಲೆಪ್ಪನವರ ಸೇರಿ 15 ಸಾವಿರಕ್ಕೂ ಅಧಿಕ ಕಾರ್ಯಕ್ರಮ ನೀಡಿರುವುದು ವೈಶಿಷ್ಟ್ಯ.

ಸಂದ ಪ್ರಶಸ್ತಿಗಳು:

ಇಮಾಮಸಾಬ್ ಅವರಿಗೆ ಬಸವ ಪ್ರಶಸ್ತಿ, ಜಾನಪದ-ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಬಸವರಾಜ ಮನಸೂರ ಪ್ರಶಸ್ತಿ, ಸಂಗೊಳ್ಳಿ ರಾಯಣ್ಣ ಪ್ರಶಸ್ತಿ, ಕಿತ್ತೂರು ಚೆನ್ನಮ್ಮ ಪ್ರಶಸ್ತಿ, ಹೀಗೆ ಅನೇಕ ಪ್ರಶಸ್ತಿಗಳು ಸಂದಿವೆ. ಇಮಾಮಸಾಬ್ ವಲ್ಲಪ್ಪನವರ ಸೇವೆ ಹಾಗೂ ಸಾಧನೆ ಗುರುತಿಸಿದ ಕರ್ನಾಟಕ ಸರ್ಕಾರ ಈ ಜಾನಪದ ಜಂಗಮನಿಗೆ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಮಾಡಿರುವುದು ಸ್ತುತ್ಯಾರ್ಹ.ಜನಪದ ನಶಿಸಬಾರದು. ಇದೇ ಕಾರಣಕ್ಕೆ ನಾನೊಬ್ಬ ನಿರಕ್ಷರಿ ಆಗಿದ್ದರೂ ಅನುಭವದ ಜ್ಞಾನದ ಮೂಲಕ ಮಕ್ಕಳಿಗೆ ಪಾಠ ಮಾಡಿದ್ದೇನೆ. ಜನಪದ ಕ್ಷೇತ್ರದ ನನ್ನ ಸಾಧನೆ-ಸೇವೆ ಗುರುತಿಸಿ, ರಾಜ್ಯೋತ್ಸವ ಪ್ರಶಸ್ತಿ ನೀಡಿದ ಸರ್ಕಾರಕ್ಕೆ ಕೃತಜ್ಞತೆಗಳು ಎಂದು ಇಮಾಮಸಾಬ್ ವೆಲ್ಲಪ್ಪನವರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ