ಫಲಾನುಭವಿಗಳನ್ನು ಭೇಟಿ ಮಾಡಿ ಸಮಸ್ಯೆ ಆಲಿಸಿ

KannadaprabhaNewsNetwork |  
Published : Oct 31, 2024, 01:04 AM IST
ಪೊಟೊ: 29ಎಸ್‌ಎಂಜಿಕೆಪಿ09 ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಅನುಷ್ಟಾನ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್ ಮಾತನಾಡಿದರು. | Kannada Prabha

ಸಾರಾಂಶ

ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಪದಾಧಿಕಾರಿಗಳು ಗ್ರಾ.ಪಂ ಮತ್ತು ವಾರ್ಡುವಾರು ಫಲಾನುಭವಿಗಳನ್ನು ಭೇಟಿ ಮಾಡಿ ಕುಂದು ಕೊರತೆ ಆಲಿಸಿ ಪಟ್ಟಿ ಮಾಡಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಸಿ.ಎಸ್. ಚಂದ್ರಭೂಪಾಲ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಪದಾಧಿಕಾರಿಗಳು ಗ್ರಾ.ಪಂ ಮತ್ತು ವಾರ್ಡುವಾರು ಫಲಾನುಭವಿಗಳನ್ನು ಭೇಟಿ ಮಾಡಿ ಕುಂದು ಕೊರತೆ ಆಲಿಸಿ ಪಟ್ಟಿ ಮಾಡಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಸಿ.ಎಸ್. ಚಂದ್ರಭೂಪಾಲ್ ತಿಳಿಸಿದರು.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಗ್ಯಾರಂಟಿ ಯೋಜನೆ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಕಂಡುಬರುತ್ತಿರುವ ಲೋಪಗಳ ಕುರಿತು ರಾಜ್ಯ ಸರ್ಕಾರದ ಗಮನಕ್ಕೆ ತರಲಾಗುವುದು. ಹಾಗೂ ರಾಜ್ಯ ಮಟ್ಟದ ಸಭೆ ಕರೆದಾಗ ಚರ್ಚಿಸಲಾಗುವುದು ಎಂದು ತಿಳಿಸಿದರು.

ಪಂಚಾಯಿತಿ ಮತ್ತು ವಾರ್ಡ್ ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ನೋಡಿಕೊಳ್ಳಲು ಪ್ರಜಾ ಪ್ರತಿನಿಧಿಗಳನ್ನು ನೇಮಿಸಲಾಗುವುದು. ಹಾಗೂ ಪ್ರತಿ ಯೋಜನೆಯ ಉಸ್ತುವಾರಿ ನೋಡಿಕೊಳ್ಳಲು ಓರ್ವ ನೋಡಲ್ ಅಧಿಕಾರಿಯನ್ನು ನೇಮಿಸಲಾಗುವುದು ಎಂದರು.

ನಮ್ಮ ಗ್ಯಾರಂಟಿ ನಮ್ಮ ಮನೆಗೆ: ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ದೂರುಗಳು ಮತ್ತು ಸಮಸ್ಯೆಗಳನ್ನು ಸ್ವೀಕರಿಸಿ ಸಾಧ್ಯವಾದರೆ ಸ್ಥಳದಲ್ಲೇ ಬಗೆಹರಿಸಲು ಹಾಗೂ ಫಲಾನುಭವಿಗಳನ್ನು ಹತ್ತಿರದಿಂದ ಕಂಡು ಸರ್ಕಾರದ ಯೋಜನೆಗಳನ್ನು ವಿವರಿಸಿ ಸ್ಪಂದಿಸಲು ಪ್ರಥಮ ಬಾರಿಗೆ ‘ನಮ್ಮ ಗ್ಯಾರಂಟಿ ನಮ್ಮ ಮನೆಗೆ’ ಎಂಬ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲು ಪ್ರಾಧಿಕಾರ ಉದ್ದೇಶಿಸಿದೆ ಎಂದು ತಿಳಿಸಿದರು.

ಜನಪರವಾದ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾದದ್ದು ಪ್ರಾಧಿಕಾರದ ಕರ್ತವ್ಯ. ಈ ಯೋಜನೆಗಳಿಂದ ಹೊರಗುಳಿದ ಅರ್ಹ ಫಲಾನುಭವಿಗಳು ಸಲ್ಲಿಸಿರುವ ವಿವರಗಳು, ಮಾಹಿತಿಯಲ್ಲಿ ಸಣ್ಣ ಪುಟ್ಟ ಸಮಸ್ಯೆಗಳಿದ್ದಲ್ಲಿ, ತಾಂತ್ರಿಕ ತಪ್ಪುಗಳನ್ನು ಸರಿಪಡಿಸಿ ಅರ್ಹ ಫಲಾನುಭವಿಗಳಿಗೆ ಯೋಜನೆಗಳ ಲಾಭ ದೊರಕಿಸಿಕೊಡುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಕಾರ್ಯಸಿದ್ಧರಾಗಬೇಕುಗೆಂದು ಸೂಚಿಸಿದರು.ಸಭೆಯಲ್ಲಿ ಶಿಕಾರಿಪುರ ತಾಲೂಕು ಸಮಿತಿ ಅಧ್ಯಕ್ಷ ಎಸ್.ಪಿ. ನಾಗರಾಜಗೌಡ ಮಾತನಾಡಿ, ತಾಲೂಕುಗಳ ಸಭೆ ಸಮಾರಂಭಗಳಿಗೆ ತಾಲೂಕು ಅಧ್ಯಕ್ಷರನ್ನು ಆಹ್ವಾನಿಸಲಾಗುತ್ತಿಲ್ಲ. ಕೆಲವು ತಾಲೂಕುಗಳ ಪತ್ರಿಕೆಗಳಲ್ಲಿ ತಾಲೂಕು ಅಧ್ಯಕ್ಷರ ಹೆಸರನ್ನು ಮುದ್ರಿಸಲಾಗುತ್ತಿದೆ. ತಾಲೂಕು ಅಧ್ಯಕ್ಷರಿಗೂ ಶಿಷ್ಟಾಚಾರ ಅನ್ವಯವಾಗುತ್ತದೆಯೇ ಎಂಬ ಬಗ್ಗೆ ಸ್ಪಷ್ಟನೆ ಕೋರಿದರು.

ಆಹಾರ ಇಲಾಖೆ ಉಪ ನಿರ್ದೇಶಕ ಅವಿನ್ ಮಾತನಾಡಿ, ಈವರೆಗೆ ವಾರ್ಷಿಕ ಆದಾಯ ₹1.20 ಲಕ್ಷ ಮೀರಿದೆ. ಐಟಿ ತುಂಬುವ ಮತ್ತು ಸರ್ಕಾರಿ ನೌಕರರು ಸೇರಿ ಒಟ್ಟು 53 ಸಾವಿರ ಪಡಿತರ ಕಾರ್ಡ್ ಅನರ್ಹಗೊಳಿಸಿ, ಎಪಿಎಲ್ ಆಗಿ ಪರಿವರ್ತಿಸುವಂತೆ ಆದೇಶ ಬಂದಿದೆ. ಹಾಗೂ 80 ವರ್ಷ ಮೇಲ್ಪಟ್ಟ 80 ಜನರಿಗೆ ಅವರ ಮನೆಗೆ ಪಡಿತರ ನೀಡಲಾಗುತ್ತಿದೆ ಎಂದು ತಿಳಿಸಿದರು.

ಕುಟುಂಬದಲ್ಲಿ 80 ವರ್ಷ ತುಂಬಿದ ಒಬ್ಬರಿಗೆ ಮಾತ್ರ ಈ ರೀತಿ ವ್ಯವಸ್ಥೆ ಇದೆ. ಬಯೋಮೆಟ್ರಿಕ್ ಸಾಧ್ಯವಾಗದ 2370 ಪಡಿತರ ಚೀಟಿದಾರರಿಗೆ ಬಯೋಮೆಟ್ರಿಕ್‌ನಿಂದ ವಿನಾಯಿತಿ ನೀಡಲಾಗಿದೆ. ಇದೀಗ ಅಂತಹವರ ಮೊಬೈಲ್ ನಂಬರ್ ತೆಗೆದುಕೊಂಡು ಅಪ್‌ಡೇಟ್ ಮಾಡುವ ವ್ಯವಸ್ಥೆ ಬಂದಿದೆ ಎಂದು ಮಾಹಿತಿ ನೀಡಿದರು.

ಸದಸ್ಯರು, ವಾರ್ಷಿಕ ಆದಾಯದ ಕಾರಣಕ್ಕೆ ಕೆಲವರ ಬಿಪಿಎಲ್ ಕಾರ್ಡುಗಳು ಎಪಿಎಲ್‌ಗೆ ಬದಲಾಗಿದ್ದು, ಈ ಬಗ್ಗೆ ಹಲವು ಗೊಂದಲಗಳಿವೆ. ಇದನ್ನು ಇನ್ನೊಮ್ಮೆ ಪರಿಶೀಲಿಸಬೇಕು. ಹಾಗೂ ಮುಂದಿನ ಸಭೆಗೆ ಐಟಿ ಮತ್ತು ಜಿಎಸ್‌ಟಿಗೆ ಸಂಬಂಧಿಸಿದ ಅಧಿಕಾರಿಗಳನ್ನು ಸಭೆಗೆ ಕರೆಯಬೇಕೆಂದು ಕೋರಿದರು.

ಕೌಶಲ್ಯಾಭಿವೃದ್ದಿ ಇಲಾಖೆಯಲ್ಲಿ ಎಸ್‌ಎಸ್‌ಎಲ್‌ಸಿ ಆದವರಿಗೆ ತರಬೇತಿ ನೀಡಲಾಗುವುದು. ಮುಂದಿನ ದಿನಗಳಲ್ಲಿ ಯುವನಿಧಿ ಯೋಜನೆಯ ಫಲಾನುಭವಿಗಳಿಗೆ ಡೇಟಾಬೇಸ್, ಡೇಟಾಸೈನ್ಸ್ ಇತರೆ ವಿಷಯ ಕುರಿತು ತರಬೇತಿ ನೀಡಲಾಗುವುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಸುರೇಶ್ ತಿಳಿಸಿದರು.

ಹೊಸನಗರ ತಾಲೂಕು ಅಧ್ಯಕ್ಷ ಚಿದಂಬರ್ ಮಾತನಾಡಿ, ತಾಲೂಕಿನಲ್ಲಿ ಅನ್ನಭಾಗ್ಯ ಯೋಜನೆ ಫಲಾನುಭವಿಗಳ ಕುರಿತು ಸರ್ವೇ ನಡೆಸಲಾಗಿದ್ದು, ಇಲಾಖೆಯ ಫಲಾನುಭವಿಗಳು ಮತ್ತು ಸರ್ವೇಯಲ್ಲಿ ಕೆಲ ವ್ಯತ್ಯಾಸವಿದೆ. ಈ ಬಗ್ಗೆ ಸ್ಪಷ್ಟನೆ ಬೇಕು. ಹಾಗೂ ವ್ಯತ್ಯಾಸಗಳನ್ನು ಸರಿಪಡಿಸಲು ಎಲ್ಲ ಕಾರ್ಡುದಾರರ ಇಕೆವೈಸಿ ಮಾಡಿಸಬೇಕೆಂದು ಎಂದು ಸೂಚಿಸಿದರು.

ಭದ್ರಾವತಿ ತಾಲೂಕು ಹಾಗೂ ಶಿವಮೊಗ್ಗ ತಾಲೂಕು ಅಧ್ಯಕ್ಷರಾದ ಮಣಿಶೇಖರ್ ಮತ್ತು ಮಧು ಅವರು ಸಹ ತಾಲೂಕು ಅಧ್ಯಕ್ಷರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಲು ಶಿಷ್ಟಾಚಾರದ ಕುರಿತು ಸ್ಪಷ್ಟನೆ ಕೋರಿದರು. ಸಭೆಯಲ್ಲಿ ಸಮಿತಿ ಉಪಾಧ್ಯಕ್ಷ ಶಿವಣ್ಣ ಮಾತನಾಡಿ, ಪ್ರಾಧಿಕಾರದ ಸದಸ್ಯರಿಗೆ ಯೋಜನೆಗಳ ಅನುಷ್ಠಾನ ಮಾಡುವ ಅಧಿಕಾರಿಗಳ ಸಂಪರ್ಕ ಸಂಖ್ಯೆ ನೀಡಬೇಕು ಎಂದರು.

ಫಲಾನುಭವಿಗಳಿಗೆ ಆಗುತ್ತಿರುವ ತಾಂತ್ರಿಕ ತೊಂದರೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾದ ವಿಷಯಗಳ ನಿರ್ಣಯವನ್ನು ರಾಜ್ಯ ಸರ್ಕಾರಕ್ಕೆ ಮಂಡಿಸಬೇಕು. ಉಪಾಧ್ಯಕ್ಷರಾದ ರಮೇಶ್ ಇಕ್ಕೇರಿ, ಯೋಜನೆ ಅನುಷ್ಠಾನದಲ್ಲಿ ಫಲಾನುಭವಿಗಳ ಸಣ್ಣ ಪುಟ್ಟ ದೋಷಗಳಿದ್ದರೆ ಅಧಿಕಾರಿಗಳು ಸರಿಪಡಿಸಬೇಕು, ಅಲೆದಾಡಿಸಬಾರದು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಪ್ರಾಧಿಕಾರದ ಉಪಾಧ್ಯಕ್ಷರುಗಳು, ತಾಲೂಕು ಸಮಿತಿಯ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ