ಕನ್ನಡಪ್ರಭ ವಾರ್ತೆ ರಾಮನಗರ
ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ನೂರಾರು ಕಾರ್ಯಕರ್ತರು ರಾಮನಗರದಿಂದ ಬೆಂಗಳೂರು ವಿಧಾನಸೌಧಕ್ಕೆ ಪಾದಯಾತ್ರೆ ಪ್ರಾರಂಭಿಸಿದರು.ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ನೂರಾರು ಕಾರ್ಯಕರ್ತರು ನಗರದ ಐಜೂರು ವೃತ್ತದಲ್ಲಿ ಸೇರಿದರು. ಅಲ್ಲಿಂದ ಪಾದಯಾತ್ರೆ ಆರಂಭಿಸಿದ ಕಾರ್ಯಕರ್ತರು, ಎಂ.ಜಿ.ರಸ್ತೆ ಮಾರ್ಗವಾಗಿ ಹಳೆ ಬಸ್ ನಿಲ್ದಾಣ ಬಳಿಯ ವೃತ್ತಕ್ಕೆ ತೆರಳಿ ಕೆಂಗಲ್ ಹನುಮಂತಯ್ಯ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಆನಂತರ ‘ನಮ್ಮ ನೀರು ... ನಮ್ಮ ಹಕ್ಕು’, ‘ಇದು ಜೀವಜಲಕ್ಕಾಗಿ ಹೋರಾಟ’ ಎಂದು ಪಾದಯಾತ್ರೆ ಮುಂದುವರಿಸಿದ ಕಾರ್ಯಕರ್ತರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು. ರಾಮನಗರದಿಂದ ಮಧ್ಯಾಹ್ನ ಸಂಗಬಸವನದೊಡ್ಡಿ ತಲುಪಿದ ಪಾದಯಾತ್ರೆ, ಸಂಜೆ ವೇಳೆಗೆ ಬಿಡದಿ ಪ್ರವೇಶಿಸಿತು.ಪಾದಯಾತ್ರೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂಘಟನೆ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ, ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ರವರು ಮೇಕೆದಾಟು ಯೋಜನೆ ಜಾರಿಗಾಗಿ ಬೃಹತ್ ಪ್ರಮಾಣದಲ್ಲಿ ಪಾದಯಾತ್ರೆ ನಡೆಸಿದ್ದರು. ಈಗ ಅವರದೇ ಪಕ್ಷ ಅಧಿಕಾರಕ್ಕೆ ಬಂದಿದ್ದರೂ ಮೇಕೆದಾಟು ವಿಚಾರವಾಗಿ ಚಕಾರ ಎತ್ತುತ್ತಿಲ್ಲ ಎಂದು ಟೀಕಿಸಿದರು.
ಈ ಯೋಜನೆಗೆ ಕಾಂಗ್ರೆಸ್ ನಾಯಕರ ಮಿತ್ರರಾಗಿರುವ ಸ್ಟ್ಯಾಲಿನ್ ರವರು ಅಡ್ಡಿ ಪಡಿಸುತ್ತಿದ್ದಾರೆ. ಆದರೆ, ಡಿ.ಕೆ.ಶಿವಕುಮಾರ್ ಅವರೊಂದಿಗೆ ಸ್ಟ್ಯಾಲಿನ್ ಉತ್ತಮ ಸ್ನೇಹಿತರು. ಅವರೊಂದಿಗೆ ಚರ್ಚಿಸಿ ಮೇಕೆದಾಟು ಯೋಜನೆ ಜಾರಿಗಿರುವ ಸಮಸ್ಯೆ ನಿವಾರಿಸಬೇಕು. ಮಾಜಿ ಪ್ರಧಾನಿ ದೇವೇಗೌಡ ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿರವರು ಪ್ರಧಾನಿ ಮೋದಿ ಅವರೊಂದಿಗೆ ಚರ್ಚಿಸಿ ಯೋಜನೆ ಜಾರಿಗೆ ಪ್ರಯತ್ನಿಸಬೇಕು. ಲೋಕಾಸಭಾ ಸದಸ್ಯರು ಪ್ರಧಾನಿ ಅವರೊಂದಿಗೆ ಮಾತನಾಡಬೇಕು ಎಂದು ಆಗ್ರಹಿಸಿದರು.ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ನಟ್ಟು, ಬೋಲ್ಟ್ ಟೈಟ್ ಮಾಡುವುದಾಗಿ ಹೇಳಿದ್ದಾರೆ. ಕನ್ನಡಿಗರ ಮೇಲೆ ದಾಳಿ ಮಾಡುತ್ತಿರುವ ಎಂಇಎಸ್ ಪುಂಡರು ಹಾಗೂ ನೀರಾವರಿ ಯೋಜನೆ ಜಾರಿಗೆ ಅಡ್ಡಿಯಾಗಿರುವ ಸ್ಟ್ಯಾಲಿನ್ ರವರ ನಟ್ಟು ಬೋಲ್ಟ್ ಟೈಟ್ ಮಾಡಬೇಕು ಎಂದು ಒತ್ತಾಯಿಸಿದರು.
ಸಂಸದರು ಲೋಕಸಭಾ ಅಧಿವೇಶನದಲ್ಲಿ ಕನ್ನಡ ಭಾಷೆಯಲ್ಲಿ ಮಾತನಾಡಿದ್ದಕ್ಕೆ ನಾವೆಲ್ಲರೂ ಖುಷಿ ಪಡುತ್ತೇವೆ. ಆದರೆ, ಅವರ್‍ಯಾರೂ ಮಹದಾಯಿ, ಕಳಸಾಬಂಡೂರಿ, ಮೇಕೆದಾಟು ಯೋಜನೆ , ಗಡಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತಿಲ್ಲ. ಈ ಸಮಸ್ಯೆ ಬಗೆಹರಿದು ಹೋದರೆ ವೋಟು ಬೀಳುವುದಿಲ್ಲ, ಮಣ್ಣಿನ ಋಣ ತೀರಿ ಹೋಗುತ್ತದೆ ಎಂಬ ಆತಂಕ ಕಾಡುತ್ತಿದೆ.ಗಡಿ ಭಾಗದ ರಾಜಕಾರಣಿಗಳು ಮರಾಠಿಗರನ್ನು ನೋಡಿದರೆ ಮಣ್ಣಿನ ಋಣ, ಅನ್ನದ ಋಣ ಮರೆತು ವೋಟಿನ ಋಣ ಇಟ್ಟುಕೊಂಡು ಅವರೊಂದಿಗೆ ಮರಾಠಿ ಭಾಷೆಯಲ್ಲಿಯೇ ಮಾತನಾಡುತ್ತಾರೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮೇಕೆದಾಟು ಯೋಜನೆ ಜಾರಿಗಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಪ್ರವೀಣ್ ಶೆಟ್ಟಿ ತಿಳಿಸಿದರು.
ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆ ಸೇರಿದಂತೆ ಬಯಲು ಸೀಮೆ ಜಿಲ್ಲೆಗಳಿಗೆ ಕುಡಿಯಲು ಮತ್ತು ಕೃಷಿ ಚಟುವಟಿಕೆಗೆ ನೀರು ಪೂರೈಸಲು ಮೇಕೆದಾಟು ಯೋಜನೆ ಜಾರಿಗೆ ತರುವುದು ಅತ್ಯಗತ್ಯವಾಗಿದೆ. ರಾಜಕಾರಣಿಗಳನ್ನು ಎಚ್ಚರಿಸಲು ಈ ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ಪ್ರವೀಣ್ ಶೆಟ್ಟಿ ಹೇಳಿದರು.ಪಾದಯಾತ್ರೆಯಲ್ಲಿ ಜಿಲ್ಲಾಧ್ಯಕ್ಷ ಎಂ.ಎನ್ .ಆರ್ .ರಾಜು, ಜಿಲ್ಲಾ ಉಸ್ತುವಾರಿ ಅಧ್ಯಕ್ಷ ಕನ್ನಡ ಮಂಜು, ತಾಲೂಕು ಅಧ್ಯಕ್ಷ ಪ್ರತಾಪ್ ಗೌಡ, ಕಾರ್ಯಾಧ್ಯಕ್ಷ ಆರ್ .ಬಿ.ಎಲ್ .ಲೋಕೇಶ್ ಮತ್ತಿತರರು ಭಾಗವಹಿಸಿದ್ದರು.