ಗುಂಡ್ಲುಪೇಟೆ: ತಮಿಳುನಾಡಿನಲ್ಲಿ ಕೆಲ ಕಿಡಿಗೇಡಿಗಳು ರಾಜ್ಯದ ಶಬರಿಮಲೆ ಯಾತ್ರಾರ್ಥಿಗಳಿದ್ದ ವಾಹನ ತಡೆದು ರಂಪಾಟ ನಡೆಸಿದ್ದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾಕಾರರು ಸಾರಿಗೆ ಬಸ್ ನಿಲ್ದಾಣದ ಮುಂದೆ ರಸ್ತೆ ತಡೆ ನಡೆಸಿ ತಮಿಳಿಗರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಕೇರಳ ಪ್ರವಾಸ ಮುಗಿಸಿದ್ದ ರಾಜ್ಯದ ಶಬರಿ ಮಲೆ ಯಾತ್ರಿಗಳು ತಮಿಳು ನಾಡಿಗೆ ತೆರಳಿದ್ದ ಸಮಯದಲ್ಲಿ ಅಲ್ಲಿನ ಕೆಲವರು ಕನ್ನಡಿಗರ ವಾಹನದ ಮೇಲಿದ್ದ ಕನ್ನಡ ಬಾವುಟ ತೆರವುಗೊಳಿಸಿದ್ದಲ್ಲದೆ ಹಲ್ಲೆಯನ್ನೂ ನಡೆಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿ ತಮಿಳುನಾಡಿನ ಕಿಡಿಗೇಡಿಗಳ ಕೃತ್ಯವನ್ನು ಖಂಡಿಸಿದರು.
ಪ್ರತಿಭಟನೆಯಲ್ಲಿ ಕರವೇ ಮಾಧು, ರಾಜೇಂದ್ರ ನಾಯಕ್, ರಮೇಶ್ ನಾಯಕ್, ನಾಗರಾಜು, ಜವರಶೆಟ್ಟಿ, ವಸಂತ, ಮಂಜುನಾಥ್ ಸೇರಿ ಹಲವರು ಇದ್ದರು.