ಕನ್ನಡಪ್ರಭ ವಾರ್ತೆ ಮೇಲುಕೋಟೆ
ಉತ್ಸವ ಮುಗಿದ ನಂತರದ ಚೆಲುವನಾರಾಯಣಸ್ವಾಮಿಯವರ ಅಶ್ವವಾಹನೋತ್ಸವಕ್ಕಾಗಿ ತಡರಾತ್ರಿಯಾದರೂ ಕಾದು ಕುಳಿತ ಸಹಸ್ರಾರು ಭಕ್ತ ಸಮೂಹ ಅಶ್ವವಾಹನೋತ್ಸವ ದರ್ಶನ ಮಾಡಿದ ನಂತರವೇ ನಿರ್ಗಮಿಸಿದರು.
ಶ್ರೀದೇವಿ-ಭೂದೇವಿಯರ ಅಂಗಮಣಿ ಉತ್ಸವ ರಾತ್ರಿ 8.30ಕ್ಕೆ ಆರಂಭವಾಯಿತು. ನಡೆಮುಡಿಯೊಂದಿಗೆ ಸಾಗಿದ ದೇವಿಯರ ಉತ್ಸವ ಅಂಗಮಣಿ ಮಂಟಪ ತಲುಪಿದ ವೇಳೆ ಕರಗಂ ಗುರುಪೀಠದ ವತಿಯಿಂದ ಸ್ಥಾನಾಚಾರ್ಯ ಕೃಷ್ಣಯ್ಯಂಗಾರ್ ದೇವಿಕಾ ದಂಪತಿಗಳು ಮತ್ತು ಸಜ್ಜೆಹಟ್ಟಿ ಗುರುಪೀಠದ ಪರವಾಗಿ ಸ್ಥಾನಾಚಾರ್ಯ ತಿರುನಾರಾಯಣ ಅಯ್ಯಂಗಾರ್ ಮಾರ್ಗದರ್ಶನದಲ್ಲಿ ನರಸಿಂಹರಂಗನ್ ದಂಪತಿಗಳು ದೇವಿಯರಿಗೆ ಅನೂಚಾನ ಸಂಪ್ರದಾಯದಂತೆ ಮಡಿಲು ತುಂಬುವ ಕೈಂಕರ್ಯ ನೆರವೇರಿಸಿದ ಭವ್ಯಕ್ಷಣಗಳನ್ನು ಕಿಕ್ಕಿರಿದು ತುಂಬಿದ್ದ ಸಹಸ್ರಾರು ಭಕ್ತರು ಕಣ್ತುಂಬಿಕೊಂಡರು.ತವರು ಮನೆಗೆ ಹೋಗಿ ತಡವಾಗಿ ದೇವಾಲಯಕ್ಕೆ ಬಂದ ಶ್ರೀದೇವಿ-ಭೂದೇವಿಯರೊಂದಿಗೆ ಮುನಿಸಿಕೊಂಡ ಚೆಲುವನಾರಾಯಣ ಸ್ವಾಮಿ ಧೀರ ನಡಿಗೆಯೊಂದಿಗೆ ಆಗಮಿಸುವ ವಿಶಿಷ್ಟನಡಿಗೆಯ ಉತ್ಸವ ದರ್ಶನ ಮಾಡಿದ ಭಕ್ತರು ಪುಳಕಿತರಾಗಿ ಗೋವಿಂದ ಗೋವಿಂದ ಎಂದು ಮೊಳಗಿಸಿದ ಜಯಘೋಷ ಮುಗಿಲು ಮುಟ್ಟಿತ್ತು.
ನಂತರ ಸ್ವಾಮಿ ಅಶ್ವವಾಹನೋತ್ಸವದಲ್ಲಿ ಸಾಗುವ ವಿಶೇಷ ಕ್ಷಣಗಳನ್ನು ಸಹಸ್ರಾರು ಭಕ್ತರು ಕಣ್ತುಂಬಿಕೊಂಡರು. ತಡ ರಾತ್ರಿ 12 ಗಂಟೆಗೆ ನಡೆದ ಈ ವೈಶಿಷ್ಠಪೂರ್ಣ ಕ್ಷಣಗಳಿಗಾಗಿ ಕಾಯ್ದು ಕುಳಿತಿದ್ದ ಸಹಸ್ರಾರು ಸಂಖ್ಯೆಯ ಭಕ್ತರು ಅಶ್ವವಾಹನೋತ್ಸವನ್ನು ಹಿಂಬಾಲಿಸಿ ಮೊಲ ಅಡ್ಡಬಿಡುವ ಕ್ಷಣಗಳಿಗೂ ಸಾಕ್ಷಿಯಾದರು.ದೇವಿಯರೊಂದಿಗೆ ಮುನಿಸಿಕೊಂಡು ಹೊರಟ ಚೆಲುವರಾಯನಿಗೆ ಮೂರು ಮೊಲ ಅಡ್ಡಬಂದಾಗ ಸ್ವಾಮಿ ಮರಳಿ ದೇವಾಲಯಕ್ಕೆ ಹಿಂದಿರುಗಿದರು ಎಂಬ ಪ್ರತೀತಿ, ಅಂಗಮಣಿಯ ಉತ್ಸವದಲ್ಲಿ ಪ್ರಮುಖ ಘಟ್ಟವಾಗಿದ್ದು. ಕುದುರೆ ವಾಹನದೊಂದಿಗೆ ಸಾಗಿದ ಸಹಸ್ರಾರು ಭಕ್ತರು ಮೊಲ ಅಡ್ಡಬಂದ ಸಂಭ್ರಮದ ಕ್ಷಣಗಳನ್ನು ಕಣ್ತುಂಬಿಕೊಂಡರು.
ನಂತರ ಚೆಲುವನಾರಾಯಣಸ್ವಾಮಿಯ ಉತ್ಸವ ದೇವಾಲಯಕ್ಕೆ ಹಿಂತಿರುಗಿತು. ದೇವಿಯರಿಗೆ ಅರ್ಪಿಸಿದ ಹಣ್ಣು ತರಕಾರಿಗಳಿಂದ ಶನಿವಾರ ಕದಂಬ ಮತ್ತು ಪಾಯಸ ರಸಾಯನ ಮೊಸರನ್ನ ಮಾಡಿ ಸಹಸ್ರಾರು ಭಕ್ತರಿಗೆ ವಿತರಿಸಲಾಯಿತು. ಸಂಕ್ರಾಂತಿ ಮತ್ತು ಅಂಗಮಣಿ ಉತ್ಸವ ಪ್ರಯುಕ್ತ ದೇವಾಲಯದ ರಾಜಗೋಪುರಕ್ಕೆ ಅಂಗಮಣಿಮಂಟಪಕ್ಕೆ ದೀಪಾಲಂಕಾರ ಮಾಡಲಾಗಿತ್ತು. ದೇಗುಲದ ಇಒ ಶೀಲಾ ಮಾರ್ಗದರ್ಶನದಲ್ಲಿ ಪಾರುಪತ್ತೇಗಾರ್ ಸ್ಥಾನಾಚಾರ್ಯಶ್ರೀನಿವಾಸನರಸಿಂಹನ್ ಗುರೂಜಿ ಉತ್ಸವ ನಡೆಸಿದರೆ. ಮೇಲುಕೋಟೆ ಇನ್ಸ್‌ಪೆಕ್ಟರ್ ಪ್ರಮೋದ್ ನೇತೃತ್ವದಲ್ಲಿ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು.ಶಾಸಕರು, ಡೀಸಿ, ಎಡೀಸಿ ಹಲವು ಭಾರಿ ಎಚ್ಚರಿಸಿದರೂ ಉತ್ಸವ ಬೀದಿಗಳಲ್ಲಿ ವಿಶೇಷ ಉತ್ಸವಗಳು ಮತ್ತು ರಜಾದಿನಗಳಂದು ಪಾರ್ಕಿಂಗ್ ನಿಷೇಧಿಸದ ಕಾರಣ ಭಕ್ತರು ವಾಹನಗಳನ್ನು ನಿಲುಗಡೆ ಮಾಡಿ ಅವ್ಯವಸ್ಥೆಗೆ ಕಾರಣವಾದ ಘಟನೆಯೂ ಜರುಗಿದು.