ಎಂಡಿಎ ಹಗರಣ ಸಿಬಿಐ ತನಿಖೆಗೆ ವಹಿಸಿ

KannadaprabhaNewsNetwork | Published : Aug 13, 2024 12:51 AM

ಸಾರಾಂಶ

ಎಂಡಿಎಯಲ್ಲಿ ಸಾವಿರಾರು ಕೋಟಿ ಹಗರಣ ಆಗಿದ್ದರೂ ರಾಜ್ಯದ ಆಡಳಿತ ಮತ್ತು ವಿರೋಧ ಪಕ್ಷಗಳು ರಾಜಕೀಯ ದೊಂಬರಾಟವಾಡುತ್ತಿವೆ.

ಕನ್ನಡಪ್ರಭ ವಾರ್ತೆ ಮೈಸೂರು

ಬಹುಕೋಟಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಎಂಡಿಎ) ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಸೇನಾ ಪಡೆಯವರು ಮೈಸೂರಿನ ಹಳೆಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸೋಮವಾರ ಪ್ರತಿಭಟಿಸಿದರು.

ಎಂಡಿಎಯಲ್ಲಿ ಸಾವಿರಾರು ಕೋಟಿ ಹಗರಣ ಆಗಿದ್ದರೂ ರಾಜ್ಯದ ಆಡಳಿತ ಮತ್ತು ವಿರೋಧ ಪಕ್ಷಗಳು ರಾಜಕೀಯ ದೊಂಬರಾಟವಾಡುತ್ತಿವೆ. ವಿಪಕ್ಷಗಳ ರಾಜಕೀಯ ಕೆಸರೆರಚಾಟ ನೋಡಿ ರಾಜ್ಯದ ಜನತೆಗೆ ಬೇಸರವಾಗಿದೆ. ವಾಲ್ಮೀಕಿ ನಿಗಮ ಹಾಗೂ ಎಂಡಿಎ ಹಗರಣ ರಾಜ್ಯದ ಜನರ ನಿದ್ದೆ ಕೆಡಿಸಿದೆ ಎಂದು ಅವರು ದೂರಿದರು.

80 ಸಾವಿರ ಜನ ಎಂಡಿಎ ನಿವೇಶನಕ್ಕೆ ಕಾದು ಕುಳಿತಿದ್ದರೆ ಸರ್ಕಾರ ಹಾಗೂ ಎಂಡಿಎ ಅಧಿಕಾರಿಗಳು ನಿವೇಶನಗಳನ್ನು ನುಂಗಿ ನೀರು ಕುಡಿದಿದ್ದಾರೆ. ನಗರಾಭಿವೃದ್ಧಿ ಸಚಿವರು, ಎಂಡಿಎ ಹಿಂದಿನ ಆಯುಕ್ತರನ್ನು ಅಮಾನತು ಮಾಡಿ, ವಿಚಾರಣೆಗೊಳಪಡಿಸದೆ, ರಾಜ ಮರ್ಯಾದೆಯಿಂದ ವರ್ಗಾವಣೆ ಮಾಡಿ ಕಳಿಸಿರುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಅಧಿಕಾರಿಕ್ಕೆ ಬಂದಾಗಿನಿಂದ ನೀರಾವರಿ ಯೋಜನೆಗಳು ಸಂಪೂರ್ಣ ಹಿಂದುಳಿದಿವೆ. ಅಭಿವೃದ್ಧಿ ಕೆಲಸಗಳು ನಡೆಯದೆ, ರಸ್ತೆ ಗುಂಡಿಗಳನ್ನು ಮುಚ್ಚಲೂ ಸರ್ಕಾರದಿಂದ ಸಾಧ್ಯವಾಗಿಲ್ಲ. ಅಹಿಂದ ಸಮುದಾಯಗಳಿಗೆ ಸವಲತ್ತು ಕೊಡುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದ ಸರ್ಕಾರ ವಾಲ್ಮೀಕಿ ನಿಗಮ, ಎಂಡಿಎಯಲ್ಲಿ ಹಗರಣ ನಡೆಸಿದೆ. ಹೀಗಾಗಿ ಕೂಡಲೇ ರಾಜ್ಯಪಾಲರು ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಿ ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಕರ್ನಾಟಕ ಸೇನಾ ಪಡೆಯ ಜಿಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಮುಖಂಡರಾದ ಸುರೇಶ್, ಪ್ರಭುಶಂಕರ್, ಕೃಷ್ಣಪ್ಪ, ಶಿವಲಿಂಗಯ್ಯ, ನಾಗಣ್ಯ, ಶಾಂತಕುಮಾರ್ ಗೌಡ, ನಾಗರಾಜ್, ಕೃಷ್ಣೇಗೌಡ, ಮಂಜುಳಾ, ಪ್ರಜೀಶ್, ಶಿವಕುಮಾರ್, ಭಾಗಮ್ಮ, ಸಿದ್ದೇಗೌಡ, ಪದ್ಮಾ, ಶಾಂತರಾಜೇ ಅರಸ್, ನಂದಕುಮಾರ್, ನಾರಾಯಣಗೌಡ, ರಾಮಕೃಷ್ಣೇಗೌಡ, ರವೀಶ್, ರಾಮಣ್ಯ, ರಾಧಾಕೃಷ್ಣ, ಹನುಮಂತಯ್ಯ, ಚಂದ್ರು, ಸ್ವಾಮಿಗೌಡ, ಪ್ರಭಾಕರ್ ಮೊದಲಾದವರು ಇದ್ದರು.

Share this article