7000 ಶಿಕ್ಷಕರ ನೇಮಿಸದಿದ್ದರೆ ಹೋರಾಟ

KannadaprabhaNewsNetwork |  
Published : Jan 13, 2024, 01:35 AM ISTUpdated : Jan 13, 2024, 01:36 AM IST

ಸಾರಾಂಶ

ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ 7,129 ಶಿಕ್ಷಕರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಇಲ್ಲದಿದ್ದರೆ ವಿದ್ಯಾರ್ಥಿಗಳು, ಪಾಲಕರೊಂದಿಗೆ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಕರ್ನಾಟಕ ರಾಜ್ಯ ಅನುದಾನಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಸರ್ಕಾರಕ್ಕೆ ತಿಳಿಸಿದೆ.

ಶಿಕ್ಷಣ ಸಂಸ್ಥೆಗಳ ಒಕ್ಕೂಟ ಎಚ್ಚರಿಕೆ । ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳು

- ಬಿಇಒ, ಶಿಕ್ಷಣ ಇಲಾಖೆ ಕಚೇರಿಗಳಲ್ಲಿ ಭ್ರಷ್ಟಾಚಾರ: ತಾಳಿಕಟ್ಟೆಕನ್ನಡಪ್ರಭ ವಾರ್ತೆ ಬೆಂಗಳೂರು

ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ 7,129 ಶಿಕ್ಷಕರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಇಲ್ಲದಿದ್ದರೆ ವಿದ್ಯಾರ್ಥಿಗಳು, ಪಾಲಕರೊಂದಿಗೆ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಕರ್ನಾಟಕ ರಾಜ್ಯ ಅನುದಾನಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಸರ್ಕಾರಕ್ಕೆ ತಿಳಿಸಿದೆ. ಶುಕ್ರವಾರ ನಗರದ ಗಾಂಧಿಭವನದಲ್ಲಿ ಸಭೆ ನಡೆಸಿದ ಒಕ್ಕೂಟದ ಪದಾಧಿಕಾರಿಗಳು, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವಂತೆ 2023ರ ಆಗಸ್ಟ್‌ನಲ್ಲಿ ರಾಜ್ಯ ಹೈಕೋರ್ಟ್ ನೀಡಿರುವ ಆದೇಶವನ್ನು ಕೂಡಲೇ ಪಾಲಿಸುವಂತೆ ಒತ್ತಾಯಿಸಲು ನಿರ್ಣಯ ತೆಗೆದುಕೊಂಡರು. ಬಳಿಕ ಸುದ್ದಿಗೋಷ್ಠಿ ನಡೆಸಿದ ಒಕ್ಕೂಟದ ಅಧ್ಯಕ್ಷ ವೈ.ಎಚ್. ಹುಚ್ಚಯ್ಯ, ರಾಜ್ಯದಲ್ಲಿರುವ 3,700 ಅನುದಾನಿತ ಶಾಲೆಗಳಲ್ಲಿ 7 ಲಕ್ಷ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಅದರಲ್ಲಿ ಬಹುತೇಕ ಗ್ರಾಮಾಂತರ ಪ್ರದೇಶಗಳ ಬಡ, ಮಧ್ಯಮ ವರ್ಗದವರು, ಸಮಾಜದ ಹಿಂದುಳಿದ ಸಮುದಾಯದ ವರ್ಗಗಳ ಮಕ್ಕಳಿದ್ದಾರೆ. ಆದರೆ, ಈ ಶಾಲೆಗಳಲ್ಲಿ 2015ರ ನಂತರ ಯಾವುದೇ ನೇಮಕಾತಿ ಆಗಿಲ್ಲ. ಹೀಗಾಗಿ, ಇಂಗ್ಲಿಷ್, ವಿಜ್ಞಾನ, ಗಣಿತ ಸೇರಿದಂತೆ ಅನೇಕ ಹುದ್ದೆಗಳಿಗೆ ಶಿಕ್ಷಕರೇ ಇಲ್ಲ. ಕೆಲವು ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರಿದ್ದಾರೆ. ಗುಣಮಟ್ಟದ ಶಿಕ್ಷಣದಿಂದ ಬಡ ಮಕ್ಕಳು ವಂಚಿತರಾಗುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಹಣ ನೀಡುತ್ತಿರುವ ಸರ್ಕಾರ, ಶಿಕ್ಷಣಕ್ಕೂ ಆದ್ಯತೆ ನೀಡಬೇಕು ಎಂದರು.ಹೊಸ ಸರ್ಕಾರ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿನ ಶಿಕ್ಷಕರ ನೇಮಕಾತಿ ಮಾಡುತ್ತದೆ ಎಂಬ ನಿರೀಕ್ಷೆ ಇತ್ತು. ಏಳು ತಿಂಗಳಾದರೂ ಯಾವುದೇ ಕ್ರಮವಾಗದೇ ನಿರೀಕ್ಷೆ ಹುಸಿಯಾಗಿದೆ. ರಾಜೀನಾಮೆ, ಮರಣ ಮತ್ತು ನಿವೃತ್ತಿಯಿಂದ ಖಾಲಿಯಾಗಿರುವ ಹುದ್ದೆಗಳಿಗೂ ನೇಮಕಾತಿ ಮಾಡಿಕೊಳ್ಳುತ್ತಿಲ್ಲ. ಶಿಕ್ಷಕರನ್ನು ಪ್ರತಿನಿಧಿಸುವ ಎಂಎಲ್‌ಸಿಗಳು ನಿರ್ಜೀವಿಗಳಾಗಿದ್ದಾರೆ. ಇದರಿಂದಾಗಿ ನಾವು ಅನಿವಾರ್ಯವಾಗಿ ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ ಎಂದು ಒಕ್ಕೂಟದ ಕಾರ್ಯದರ್ಶಿ ದೇವರಾಜಯ್ಯ ಹೇಳಿದರು.ಶಿಕ್ಷಣ ಇಲಾಖೆಯಲ್ಲಿನ ಭ್ರಷ್ಟಾಚಾರದ ವಿರುದ್ಧ ಕಳೆದ ಮೂರು ವರ್ಷಗಳಿಂದ ಹೋರಾಡುತ್ತಿದ್ದೇವೆ. ಬಿಇಒ ಕಚೇರಿ ಸೇರಿದಂತೆ ಇನ್ನಿತರ ಶಿಕ್ಷಣ ಇಲಾಖೆಯ ಕಚೇರಿಗಳಲ್ಲಿ ಪ್ರತಿ ತಿಂಗಳು ವಂತಿಗೆ ಕೊಡಬೇಕಾದ ಪರಿಸ್ಥಿತಿ ಇದೆ. ಹೊಸ ಸರ್ಕಾರ ಬಂದ ಮೇಲೂ ಪರಿಸ್ಥಿತಿ ಬದಲಾಗಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಲೊಕೇಶ್ ತಾಳಿಕಟ್ಟೆ ಅಸಮಾಧಾನ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೆಜೆಸ್ಟಿಕ್‌ನಲ್ಲಿ ಸಿಂಗಾಪುರ ಮೀರಿಸುವ ಪ್ರಾಜೆಕ್ಟ್‌ ಮೆಜೆಸ್ಟಿಕ್‌
ಬೀಗ ಹಾಕಿದ ಮನೆಗಳಿಗೆ ಕನ್ನಹಾಕುತ್ತಿದ್ದ ಐವರು ಕಳ್ಳರ ಸೆರೆ