ಪ್ರಸ್ತುತ 1.50 ಲಕ್ಷ ವಿದ್ಯಾರ್ಥಿಗಳು ವಿವಿಧ ಕೋರ್ಸ್ ಗಳನ್ನು ಅಧ್ಯಯನ ಮಾಡುತ್ತಿದ್ದಾರೆ. 2026ರ ಜುಲೈ ಆವೃತ್ತಿ ಪ್ರವೇಶಾತಿ ಜೂನ್ 22 ರಿಂದ ಆರಂಭವಾಗಿದ್ದು, ಈವರೆಗೂ 10 ಸಾವಿರ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದಾರೆ. ಸೆಪ್ಟಂಬರ್ 15 ರವರೆಗೆ ಕಾಲಾವಕಾಶ ಇದೆ.
ಕನ್ನಡಪ್ರಭ ವಾರ್ತೆ ಮೈಸೂರು
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ 2026- 27ನೇ ಜುಲೈ ಆವೃತ್ತಿಯ ಪ್ರವೇಶ ಆರಂಭವಾಗಿದ್ದು, ಈ ಪ್ರವೇಶಾತಿಯಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ, ಆನ್ ಲೈನ್ ಕೋರ್ಸ್, ಡಿಪ್ಲೊಮಾ ಕೋರ್ಸ್ ಗಳಿಂದ 80 ಸಾವಿರ ಅಭ್ಯರ್ಥಿಗಳ ಪ್ರವೇಶಾತಿ ಗುರಿ ಹೊಂದಲಾಗಿದೆ ಎಂದು ಕುಲಪತಿ ಪ್ರೊ.ಎ.ಪಿ.ಜ್ಞಾನಪ್ರಕಾಶ್ ತಿಳಿಸಿದರು.
ಪ್ರಸ್ತುತ 1.50 ಲಕ್ಷ ವಿದ್ಯಾರ್ಥಿಗಳು ವಿವಿಧ ಕೋರ್ಸ್ ಗಳನ್ನು ಅಧ್ಯಯನ ಮಾಡುತ್ತಿದ್ದಾರೆ. 2026ರ ಜುಲೈ ಆವೃತ್ತಿ ಪ್ರವೇಶಾತಿ ಜೂನ್ 22 ರಿಂದ ಆರಂಭವಾಗಿದ್ದು, ಈವರೆಗೂ 10 ಸಾವಿರ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದಾರೆ. ಸೆಪ್ಟಂಬರ್ 15 ರವರೆಗೆ ಕಾಲಾವಕಾಶ ಇದೆ. ಯುಜಿಸಿ ಅನುಮೋದಿ ಕೋರ್ಸ್ ಗಳ ಪ್ರವೇಶಾತಿಯಿಂದ 50 ಸಾವಿರ ಮತ್ತು ಆನ್ ಲೈನ್ ಕೋರ್ಸ್ ಗಳಿಂದ 30 ಸಾವಿರ ಸೇರಿದಂತೆ ಸುಮಾರು 80 ಸಾವಿರ ವಿದ್ಯಾರ್ಥಿಗಳ ಪ್ರವೇಶಾತಿ ನಿರೀಕ್ಷಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಯುಜಿಸಿ ಅನುಮೋದಿತ 65 ಕೋರ್ಸ್ ಗಳು, 10 ಆನ್ ಲೈನ್ ಕೋರ್ಸ್, 75 ಅಕಾಡೆಮಿಕ್ ಪ್ರೋಗ್ರಾಂ, 30 ಪಿಜಿ ಕೋರ್ಸ್ ಗಳು ಲಭ್ಯವಿವೆ. ಈ ಸಾಲಿನಿಂದ ಬಿ.ಇಡಿ ಕೋರ್ಸ್ ಆರಂಭಗೊಂಡಿದ್ದು, 500 ಅಭ್ಯರ್ಥಿಗಳಿಗೆ ಅವಕಾಶ ಇದೆ. ಎಲ್ಲಾ ಪ್ರಾದೇಶಿಕ ಕೇಂದ್ರಗಳಲ್ಲಿ ಪ್ರವೇಶಾತಿ ಮಾಡಿಕೊಳ್ಳಲಾಗುತ್ತಿದೆ. https://www.ksoumysuru.ac.in/ ವೆಬ್ ಸೈಟ್ ಮೂಲಕವೂ ಪ್ರವೇಶಾತಿ ಪಡೆಯಬಹುದಾಗಿದೆ ಎಂದರು.
ದೂರ ಶಿಕ್ಷಣ ನೀಡುವ ರಾಜ್ಯದ ಏಕಮಾತ್ರ ವಿಶ್ವವಿದ್ಯಾನಿಲಯ ಮೂರು ದಶಕಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಮುನ್ನಡೆಯುತ್ತಿದೆ. ಯುಜಿಸಿ ಮ್ಯಾನತೆ ಹೊಂದಿದ ಶಿಕ್ಷಣ ಕಾರ್ಯಕ್ರಮಗಳಿಗೆ ಪ್ರವೇಶಾತಿ ನೀಡುತ್ತಿದೆ. ನ್ಯಾಕ್ ನಿಂದ ಎ+, ಎನ್‌ಐಆರ್ ಎಫ್ 2ನೇ ರ್ಯಾಂ ಕ್, ಕೌಶಲ್ಯಾಭಿವೃದ್ಧಿ ತರಬೇತಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.
ಲ್ಯಾಟರಲ್ ಪ್ರವೇಶ:
ಸಾಂಪ್ರದಾಯಿಕ ವ್ಯವಸ್ಥೆಯಡಿ ಇತರ ಕಾಲೇಜಿನಲ್ಲಿ ರೆಗ್ಯುಲರ್ ಆಗಿ ಓದುತ್ತಿರುವ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಂದುವರೆಸಲು ಸಾಧ್ಯವಾಗದವರು 2ನೇ ಮತ್ತು 3ನೇ ವರ್ಷಕ್ಕೆ ರಾಜ್ಯ ಮುಕ್ತ ವಿವಿಯಲ್ಲಿ ಲ್ಯಾಟರಲ್ ಪ್ರವೇಶ ಅಥವಾ ನೇರ ಪ್ರವೇಶ ಆಯ್ಕೆ ಮಾಡಿಕೊಳ್ಳುವ ಅವಕಾಶ ಇದೆ ಎಂದು ತಿಳಿಸಿದರು.
ಯುಜಿಸಿ ನಿಯಮಾವಳಿ ಪ್ರಕಾರ ಪೂರ್ಣಾವಧಿಯಲ್ಲಿ ಒಂದು ಪದವಿ, ದೂರ ಶಿಕ್ಷಣದಲ್ಲಿ ಇನ್ನೊಂದು ಕೋರ್ಸ್ ಅನ್ನು ಏಕಕಾಲದಲ್ಲೇ ಮಾಡಲು ಅವಕಾಶ ನೀಡಲಾಗಿದೆ ಎಂದು ಹೇಳಿದರು.
ವಿವಿಧ ಸೌಲಭ್ಯಗಳು:
ರಾಜ್ಯ ಮುಕ್ತ ವಿವಿಯಲ್ಲಿ 39 ಪ್ರಾದೇಶಿಕ ಕೇಂದ್ರಗಳು, 118 ಅಧ್ಯಯನ ಕೇಂದ್ರಗಳು, ಆ್ಯಪ್ ಗಳ ಸೃಜನೆ, ದೃಶ್ಯವಾಹಿನಿ ಯೂಟ್ಯೂಬ್ ಚಾನೆಲ್, ಕೌಶಲ್ಯಾಭಿವೃದ್ಧಿಗೆ ಪ್ರತ್ಯೇಕ ವಿಭಾಗ, ಪ್ರಸಾರಾಂಗ, ರೇಡಿಯೋ, 50 ದಿನಗಳು ವಸತಿಯೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ, ಇ ಲೈಬ್ರರಿ, ರಾಜ್ಯಾದ್ಯಂತ 70 ಪರೀಕ್ಷಾ ಕೇಂದ್ರಗಳು, ಬ್ಯಾಂಕ್, ಹಾಸ್ಟೆಲ್ ವ್ಯವಸ್ಥೆ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ವಿವರಿಸಿದರು.
ಮುಕ್ತ ವಿವಿ ಕುಲಸಚಿವ ಪ್ರೊ.ಕೆ.ಎಸ್. ನವೀನ್ ಕುಮಾರ್, ಶೈಕ್ಷಣಿಕ ಡೀನ್ ಪ್ರೊ.ಎಂ. ರಾಮನಾಥಂ ನಾಯಡು, ಹಣಕಾಸು ಅಧಿಕಾರಿ ಡಾ. ನಿರಂಜನ್ ರಾಜ್ ಮೊದಲಾದವರು ಇದ್ದರು.10 ಆನ್ ಲೈನ್ ಕೋರ್ಸ್ ಗಳು ಲಭ್ಯ
ಕಳೆದ ಸಾಲಿನಿಂದ ಆನ್ ಲೈನ್ ಕೋರ್ಸ್ ಆರಂಭಗೊಂಡಿದ್ದು, 1 ಸಾವಿರ ಅಭ್ಯರ್ಥಿಗಳು ಪ್ರವೇಶಾತಿ ಪಡೆದಿದ್ದಾರೆ. ಈ ವರ್ಷ 30 ಸಾವಿರ ಅಭ್ಯರ್ಥಿಗಳ ಪ್ರವೇಶಾತಿ ಗುರಿ ಹೊಂದಲಾಗಿದೆ. ಆನ್ ಲೈನ್ ನಲ್ಲಿ ಬಿಎದಲ್ಲಿ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಬಿ.ಕಾಂ, ಎಂಎ ಕನ್ನಡ, ಇಂಗ್ಲಿಷ್, ಹಿಂದಿ, ಸಂಸ್ಕೃತ, ಅರ್ಥಶಾಸ್ತ್ರ, ಎಂ.ಕಾಂ, ಎಂಬಿಎ, ಎಂಎಸ್ಸಿ ಗಣಿತಶಾಸ್ತ್ರ ವಿಷಯಗಳಲ್ಲಿ ಪ್ರವೇಶಾತಿ ಪಡೆಯಬಹುದಾಗಿದೆ ಎಂದು ಕುಲಪತಿ ಪ್ರೊ.ಎ.ಪಿ. ಜ್ಞಾನಪ್ರಕಾಶ್ ತಿಳಿಸಿದರು.ವಿವಿ ಪ್ರವೇಶ ಶುಲ್ಕ ಹೆಚ್ಚಿಸಿಲ್ಲ. ಅಲ್ಪಸಂಖ್ಯಾತ ಅಭ್ಯರ್ಥಿಗಳು, ತೃತೀಯ ಲಿಂಗಿಗಳು, ದೃಷ್ಟಿಹೀನ ವಿದ್ಯಾರ್ಥಿಗಳು, ಕೋವಿಡ್ ಸಾಂಕ್ರಾಮಿಕ ರೋಗದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಪೂರ್ಣ ಶುಲ್ಕ ವಿನಾಯ್ತಿ ಇದೆ. ಬಿಪಿಎಲ್ ಕಾರ್ಡ್, ಮಹಿಳಾ ಅಭ್ಯರ್ಥಿಗಳು, ಮಾಜಿ ಸೈನಿಕರು, ಆಟೋ, ಕ್ಯಾಬ್ ಚಾಲಕರು, ಸಾರಿಗೆ ನಿಗಮಗಳ ನೌಕರರಿಗೆ ಬೋಧನಾ ಶುಲ್ಕದಲ್ಲಿ ಶೇ.10 ರಿಯಾಯ್ತಿ ನೀಡಲಾಗಿದೆ.
- ಪ್ರೊ.ಎ.ಪಿ.ಜ್ಞಾನಪ್ರಕಾಶ್, ಕುಲಪತಿ, ರಾಜ್ಯ ಮುಕ್ತ ವಿವಿ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.