ದಸರಾದ ಪಾರಂಪರಿಕ ವೈಭವ ಕಾಪಾಡಿ, ಹೊಸ ಕ್ರೀಡೆ ಸೇರಿಸಬೇಡಿ: ಸಂದೇಶ್ ಸ್ವಾಮಿ

KannadaprabhaNewsNetwork |  
Published : Jul 17, 2026, 01:15 AM IST
33 | Kannada Prabha

ಸಾರಾಂಶ

ಮೈಸೂರು ದಸರಾದ ಪಾರಂಪರಿಕ ಘನತೆ, ಐತಿಹಾಸಿಕ ಮಹತ್ವ ಹಾಗೂ ವಿಶ್ವಮಟ್ಟದ ಗೌರವವನ್ನು ಕಾಪಾಡುವ ನಿಟ್ಟಿನಲ್ಲಿ ಯಾವುದೇ ವಿವಾದಾತ್ಮಕ ಹೊಸ ಕ್ರೀಡೆಗಳನ್ನು ಸೇರ್ಪಡೆಗೊಳಿಸದೆ, ದಸರಾದ ಮೂಲ ಸಂಪ್ರದಾಯವನ್ನು ಯಥಾವತ್ತಾಗಿ ಉಳಿಸುವಂತೆ ರಾಜ್ಯ ಸರ್ಕಾರವು ಸೂಕ್ತ ಕ್ರಮ ಕೈಗೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ದಸರಾದ ಪಾರಂಪರಿಕ ವೈಭವವನ್ನು ಕಾಪಾಡಿ, ಹೊಸ ವಿವಾದಾತ್ಮಕ ಕ್ರೀಡೆಗಳನ್ನು ಸೇರ್ಪಡೆಗೊಳಿಸದಂತೆ ಮಾಜಿ ಮೇಯರ್, ಬಿಜೆಪಿ ಮುಖಂಡ ಸಂದೇಶ್ ಸ್ವಾಮಿ ಮನವಿ ಮಾಡಿದ್ದಾರೆ.

ಮೈಸೂರು ರಾಜಮನೆತನವು ಕನ್ನಡ ನಾಡಿನ ಕಲೆ, ಸಾಹಿತ್ಯ, ಸಂಗೀತ, ಯಕ್ಷಗಾನ, ಜನಪದ ಕಲೆಗಳು ಹಾಗೂ ಧಾರ್ಮಿಕ ಸಾಮರಸ್ಯವನ್ನು ಪೋಷಿಸುತ್ತಾ ದಸರಾವನ್ನು ವಿಶ್ವಪ್ರಸಿದ್ಧ ಉತ್ಸವವನ್ನಾಗಿ ರೂಪಿಸಿದೆ. ಜಂಬೂಸವಾರಿ, ಅರಮನೆ ದೀಪಾಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳು, ಯುವ ದಸರಾ, ಮಹಿಳಾ ದಸರಾ, ಮಕ್ಕಳ ದಸರಾ ಸೇರಿದಂತೆ ಅನೇಕ ಕಾರ್ಯಕ್ರಮಗಳು ಈ ನಾಡಹಬ್ಬದ ವಿಶಿಷ್ಟ ಗುರುತುಗಳಾಗಿವೆ. ಇಂತಹ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮಹತ್ವ ಹೊಂದಿರುವ ದಸರಾ ಮಹೋತ್ಸವದಲ್ಲಿ ಹೊಸ ಕ್ರೀಡೆಗಳನ್ನು ಅಥವಾ ವಿವಾದಾತ್ಮಕ ಕಾರ್ಯಕ್ರಮಗಳನ್ನು ಸೇರಿಸುವ ಬಗ್ಗೆ ಅತ್ಯಂತ ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿಶೇಷವಾಗಿ ಕಂಬಳ ಸೇರಿದಂತೆ ಪ್ರಾಣಿಗಳನ್ನು ಒಳಗೊಂಡ ಕ್ರೀಡೆಗಳನ್ನು ದಸರಾ ಕಾರ್ಯಕ್ರಮದ ಭಾಗವನ್ನಾಗಿ ಮಾಡುವ ಕುರಿತು ಈಗಾಗಲೇ ವಿವಿಧ ವಲಯಗಳಲ್ಲಿ ಪರ- ವಿರೋಧದ ಚರ್ಚೆಗಳು ನಡೆಯುತ್ತಿವೆ. ಪ್ರಾಣಿ ದಯಾ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲಿ ಇಂತಹ ವಿಷಯಗಳು ಅನಗತ್ಯ ಕಾನೂನು ವಿವಾದ, ಪ್ರತಿಭಟನೆ ಹಾಗೂ ದಸರಾದ ಮೂಲ ಉದ್ದೇಶಕ್ಕೆ ಧಕ್ಕೆಯನ್ನು ಉಂಟುಮಾಡುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ಕಂಬಳವು ಕರಾವಳಿ ಭಾಗದ ಜನರ ಶತಮಾನಗಳ ಪರಂಪರೆಯ ಕ್ರೀಡೆಯಾಗಿದ್ದು, ಅದರದೇ ಆದ ಇತಿಹಾಸ ಮತ್ತು ಗೌರವವಿದೆ. ಅದೇ ರೀತಿಯಲ್ಲಿ ಮೈಸೂರು ದಸರಾಗೂ ತನ್ನದೇ ಆದ ವೈಶಿಷ್ಟ್ಯ, ಸಂಪ್ರದಾಯ ಮತ್ತು ಐತಿಹಾಸಿಕ ಮೆರಗು ಇದೆ. ಒಂದು ಪ್ರದೇಶದ ಪರಂಪರೆಯನ್ನು ಮತ್ತೊಂದು ಪರಂಪರೆಯೊಂದಿಗೆ ಬೆರೆಸುವ ಬದಲು, ಪ್ರತಿಯೊಂದು ಸಂಸ್ಕೃತಿಯ ವೈಶಿಷ್ಟ್ಯವನ್ನು ಅದರ ಮೂಲ ಸ್ವರೂಪದಲ್ಲೇ ಉಳಿಸಿ ಬೆಳೆಸುವುದು ಸೂಕ್ತ ಎಂದು ಅವರು ತಿಳಿಸಿದ್ದಾರೆ.

ಹೀಗಾಗಿ, ಮೈಸೂರು ದಸರಾದ ಪಾರಂಪರಿಕ ಘನತೆ, ಐತಿಹಾಸಿಕ ಮಹತ್ವ ಹಾಗೂ ವಿಶ್ವಮಟ್ಟದ ಗೌರವವನ್ನು ಕಾಪಾಡುವ ನಿಟ್ಟಿನಲ್ಲಿ ಯಾವುದೇ ವಿವಾದಾತ್ಮಕ ಹೊಸ ಕ್ರೀಡೆಗಳನ್ನು ಸೇರ್ಪಡೆಗೊಳಿಸದೆ, ದಸರಾದ ಮೂಲ ಸಂಪ್ರದಾಯವನ್ನು ಯಥಾವತ್ತಾಗಿ ಉಳಿಸುವಂತೆ ರಾಜ್ಯ ಸರ್ಕಾರವು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ವಿನಂತಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇದು ಚೆಕ್ ಪೋಸ್ಟ್? ಅಥವಾ ಬಾರ್‌ ಅಂಡ್ ರೆಸ್ಟೋರೆಂಟ್‌?
ಕಾಂಗ್ರೆಸ್‌ನ ಗಾಯಿತ್ರಿ ಶಾಂತೇಗೌಡ ಬೆಂಬಲಿಗರಿಂದ ಸಂಭ್ರಮಾಚರಣೆ