ರಜಾ ದಿನಗಳಲ್ಲಿ ಗ್ರಂಥಾಲಯ ತೆರೆಯಲು ಆಗ್ರಹ

KannadaprabhaNewsNetwork |  
Published : Jul 17, 2026, 01:15 AM IST
30 | Kannada Prabha

ಸಾರಾಂಶ

ರಜಾ ದಿನಗಳಲ್ಲಿ ಸಾರ್ವಜನಿಕ ಗ್ರಂಥಾಲಯಗಳನ್ನು ತೆರೆಯಬೇಕು. ಬಳಸಲು ಕಷ್ಟವಾಗುತ್ತಿರುವ ಹಳೆ ಟೇಬಲ್ ಮತ್ತು ಖುರ್ಚಿಗಳನ್ನು ಬದಲಾಯಿಸಬೇಕು ಮತ್ತು ಶೌಚಾಲಯಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಕುವೆಂಪುನಗರ ಸಾರ್ವಜನಿಕ ಗ್ರಂಥಾಲಯವನ್ನು ರಜೆ ದಿನಗಳಲ್ಲಿ ತೆರೆಯಲು ಮತ್ತು ಮೂಲಸೌಕರ್ಯಗಳನ್ನು ಒದಗಿಸಲು ಆಗ್ರಹಿಸಿ ಎಐಡಿವೈಒ ಮತ್ತು ಸಾರ್ವಜನಿಕ ಗ್ರಂಥಾಲಯದ ಓದುಗರ ಬಳಗದವರು ಕುವೆಂಪುನಗರ ಗ್ರಂಥಾಲಯ ಮುಂಭಾಗದಲ್ಲಿ ಬುಧವಾರ ಪ್ರತಿಭಟಿಸಿದರು.

ರಜಾ ದಿನಗಳಲ್ಲಿ ಸಾರ್ವಜನಿಕ ಗ್ರಂಥಾಲಯಗಳನ್ನು ತೆರೆಯಬೇಕು. ಬಳಸಲು ಕಷ್ಟವಾಗುತ್ತಿರುವ ಹಳೆ ಟೇಬಲ್ ಮತ್ತು ಖುರ್ಚಿಗಳನ್ನು ಬದಲಾಯಿಸಬೇಕು ಮತ್ತು ಶೌಚಾಲಯಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಹೊರಾಂಗಣದಲ್ಲಿ ಯಾವುದೇ ಗಿಡ ಗಂಟಿಗಳು ಹೆಚ್ಚದಂತೆ ಸ್ವಚ್ಛಗೊಳಿಸುತ್ತಿರಬೇಕು ಮತ್ತು ಹೊರಾಂಗಣದಲ್ಲಿ ಕೂತು ಊಟ ಮಾಡಲು ಕಲ್ಲು ಬೆಂಚುಗಳು ಮತ್ತು ಮೇಲ್ಚಾವಣಿಯ ವ್ಯವಸ್ಥೆ ಬೇಕು. ವಿದ್ಯಾರ್ಥಿಗಳಿಗೆ ಅಗತ್ಯವಿರುವ ಹೊಸ ಪುಸ್ತಕಗಳನ್ನು ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.

ಈ ವೇಳೆ ಎಐಡಿವೈಒ ಜಿಲ್ಲಾಧ್ಯಕ್ಷ ಟಿ.ಆರ್. ಸುನಿಲ್ ಮಾತನಾಡಿ, ಸಾರ್ವಜನಿಕ ಗ್ರಂಥಾಲಯಗಳು ಪ್ರತಿ ಸೋಮವಾರ, ಎರಡನೇ ಮಂಗಳವಾರ, ನಾಲ್ಕನೇ ಶನಿವಾರ ಮತ್ತು ಸರ್ಕಾರಿ ರಜೆಗಳು ಹೀಗೆ ಹಲವಾರು ರಜೆಗಳಿರುವುದರಿಂದ ಉದ್ಯೋಗಾಕಾಂಕ್ಷಿಗಳು ನಿರಂತರ ಓದುವ ಅಭ್ಯಾಸಕ್ಕೆ ಸಮಸ್ಯೆ ಉಂಟಾಗುತ್ತದೆ. ಇಲ್ಲವಾದಲ್ಲಿ ಖಾಸಗಿ ಗ್ರಂಥಾಲಯಕ್ಕೆ ತಿಂಗಳಿಗೆ ಸಾವಿರಾರು ರೂಪಾಯಿಗಳನ್ನು ಕೊಟ್ಟು ಓದಬೇಕಿದೆ. ಉದ್ಯೋಗವನ್ನು ಅರಸುತ್ತಿರುವ ವಿದ್ಯಾರ್ಥಿಗಳಿಗೆ ಇದಕ್ಕಾಗಿ ಇಷ್ಟು ಖರ್ಚು ಮಾಡುವುದು ಕಷ್ಟ ಎಂದು ತಿಳಿಸಿದರು.

ಪಾಲಿಕೆಯು ಸಹ ನಗರದ ಪ್ರತಿ ಕುಟುಂಬದಿಂದ ಅಂದಾಜು ವರ್ಷಕ್ಕೆ 300 ರೂ. ಸೆಸ್ ಸಂಗ್ರಹಿಸುತ್ತದೆ. ಈ ರೀತಿ ಕೋಟಿಗಟ್ಟಲೆ ಸಂಗ್ರಹವಾದ ಹಣವನ್ನು ಸಾರ್ವಜನಿಕರಿಗೆ ಸೌಲಭ್ಯವನ್ನು ಒದಗಿಸಲು ಬಳಸದೆ ಮತ್ತೆ ಏನು ಮಾಡುತ್ತಿದೆ ಎಂದು ಅವರು ಪ್ರಶ್ನಿಸಿದರು.

ಸ್ಥಳಕ್ಕೆ ಆಗಮಿಸಿದ ಗ್ರಂಥಾಲಯದ ಉಪ ನಿರ್ದೇಶಕ ಮಂಜುನಾಥ್ ಅವರು, ನಿಮ್ಮ ಬೇಡಿಕೆ ನ್ಯಾಯಯುತವಾಗಿದೆ. ಆದರೆ ರಜೆ ದಿನಗಳಲ್ಲಿ ಗ್ರಂಥಾಲಯ ತೆರೆಯಲು ಸಿಬ್ಬಂದಿ ಕೊರತೆ ಇದೆ. ಅದನ್ನು ಪರಿಹರಿಸಲು ನನ್ನ ವ್ಯಾಪ್ತಿಯಲ್ಲಿ ಸಾಧ್ಯವಿಲ್ಲ. ಇದನ್ನು ಸರ್ಕಾರವೇ ಮಾಡಬೇಕಾಗಿದೆ. ಆದರೆ, ಉಳಿದ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಎಸ್. ಸುಮಾ, ಸದಸ್ಯೆ ನೀತುಶ್ರೀ, ಗ್ರಂಥಾಲಯದ ಓದುಗರಾದ ಶಿವಾನಂದ್, ಅನೂಪ್, ರಘು, ಭಾಸ್ಕರ್, ಹರ್ಷವರ್ಧನ್, ಗುಣ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇದು ಚೆಕ್ ಪೋಸ್ಟ್? ಅಥವಾ ಬಾರ್‌ ಅಂಡ್ ರೆಸ್ಟೋರೆಂಟ್‌?
ಕಾಂಗ್ರೆಸ್‌ನ ಗಾಯಿತ್ರಿ ಶಾಂತೇಗೌಡ ಬೆಂಬಲಿಗರಿಂದ ಸಂಭ್ರಮಾಚರಣೆ