ರಾಷ್ಟ್ರ ಮಟ್ಟದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡಕ್ಕೆ ಪ್ರಥಮ ಸ್ಥಾನ

KannadaprabhaNewsNetwork | Published : Apr 4, 2025 12:47 AM

ಸಾರಾಂಶ

ನರಸಿಂಹರಾಜಪುರ, ತಾಲೂಕಿನ ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಕ್ಸೆ ಗ್ರಾಮದ ಮೇಲಿನ ಗುಡ್ಡೇಹಳ್ಳದ 9 ನೇ ತರಗತಿ ವಿದ್ಯಾರ್ಥಿನಿ ಕುಸುಮ ವೈಸ್ ಕ್ಯಾಪ್ಟನ್ ಆಗಿದ್ದ ಕರ್ನಾಟಕ ರಾಜ್ಯ ಥ್ರೋಬಾಲ್ ಸಬ್ ಜೂನಿಯರ್ಸ್ ತಂಡ ಛತ್ತೀಸ್ ಘಡದಲ್ಲಿ ಮಾ. 28 ರಿಂದ 30 ರವರೆಗೆ ನಡೆದ ರಾಷ್ಟ್ರಮಟ್ಟದ ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದಿದೆ.

ಎನ್.ಆರ್.ಪುರದ ತಾಲೂಕಿನ ಗುಡ್ಡೇಹಳ್ಳದ ಕುಸುಮಾ ತಂಡದ ವೈಸ್ ಕ್ಯಾಪ್ಟನ್

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ತಾಲೂಕಿನ ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಕ್ಸೆ ಗ್ರಾಮದ ಮೇಲಿನ ಗುಡ್ಡೇಹಳ್ಳದ 9 ನೇ ತರಗತಿ ವಿದ್ಯಾರ್ಥಿನಿ ಕುಸುಮ ವೈಸ್ ಕ್ಯಾಪ್ಟನ್ ಆಗಿದ್ದ ಕರ್ನಾಟಕ ರಾಜ್ಯ ಥ್ರೋಬಾಲ್ ಸಬ್ ಜೂನಿಯರ್ಸ್ ತಂಡ ಛತ್ತೀಸ್ ಘಡದಲ್ಲಿ ಮಾ. 28 ರಿಂದ 30 ರವರೆಗೆ ನಡೆದ ರಾಷ್ಟ್ರಮಟ್ಟದ ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದಿದೆ.

ಬೆಂಗಳೂರಿನ ಕರ್ನಾಟಕ ಥ್ರೋ ಬಾಲ್ ಅಸೋಷಿಯೇಷನ್ ಛತ್ತೀಸ್ ಘಡ ರಾಜ್ಯದ ಬಿಲಾಯಿ ಎಂಬ ಸ್ಥಳದಲ್ಲಿ 32 ನೇ ವರ್ಷದ ರಾಷ್ಟ್ರ ಮಟ್ಟದ 16 ವರ್ಷದ ಮೇಲ್ಪಟ್ಟ ಜೂನಿಯರ್ಸ್ ತಂಡಗಳಿಗೆ ಹಾಗೂ 16 ವರ್ಷದ ಒಳಗಿನ ಸಬ್ ಜೂನಿಯರ್ಸ್ ತಂಡಗಳಿಗೆ ಪ್ರತ್ಯೇಕವಾಗಿ ಥ್ರೋಬಾಲ್ ಪಂದ್ಯಾವಳಿ ಏರ್ಪಡಿಸಿ, ಬಾಲಕ- ಬಾಲಕಿಯರಿಗೆ ಪ್ರತ್ಯೇಕ ಸ್ಪರ್ಧೆ ನಡೆಸಲಾಯಿತು.

ಛತ್ತಿಸ್ ಘಡದಲ್ಲಿ ನಡೆದ ರಾಷ್ಟ್ರ ಮಟ್ಟದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಜಾಖಂಡ್, ಹರಿಯಾಣ, ಮದ್ಯಪ್ರದೇಶ, ದೆಹಲಿ, ತ.ನಾಡು, ಕರ್ನಾಟಕ ಸೇರಿದಂತೆ 26 ರಾಜ್ಯಗಳ ಥ್ರೋಬಾಲ್ ತಂಡಗಳು ಭಾಗವಹಿಸಿದ್ದವು. ಇದರಲ್ಲಿ ಕರ್ನಾಟಕ ರಾಜ್ಯದ ಸಬ್ ಜೂನಿಯರ್ಸ್ ತಂಡ ಥ್ರೋಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿದೆ ಎಂದು ತಂಡದ ವೈಸ್ ಕ್ಯಾಪ್ಟನ್ ನರಸಿಂಹ ರಾಜಪುರ ತಾಲೂಕಿನ ಗುಡ್ಡೇಹಳ್ಳದ ಕುಸುಮ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ

-- ಬಾಕ್ಸ್--

ಉತ್ತಮ ಕ್ರೀಡಾ ಪಟು ಕುಸುಮಾಗೆ ಪ್ರೋತ್ಸಾಹ ಅಗತ್ಯರಾಷ್ಟ್ರ ಮಟ್ಟದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನಗಳಿಸಿದ ಕರ್ನಾಟಕ ರಾಜ್ಯದ ಸಬ್ ಜೂನಿಯರ್ಸ್ ತಂಡದಲ್ಲಿ ವೈಸ್ ಕ್ಯಾಪ್ಟನ್ ಆದ ಕುಸುಮಾ ನರಸಿಂಹರಾಜಪುರ ತಾಲೂಕಿನ ಕಾನೂರು ಗ್ರಾಪಂ ಸಂಕ್ಸೆ ಗ್ರಾಮದ ಮೇಲಿನ ಗುಡ್ಡೇಹಳ್ಳದ ಸಾವಿತ್ರಿ ಎಂಬುವರ ಪುತ್ರಿಯಾಗಿದ್ದು ಈಗಾಗಲೇ ಥ್ರೋಬಾಲ್, ವಾಲೀಬಾಲ್, ಹ್ಯಾಂಡ್ ಬಾಲ್, ಜಾವಲಿನ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿ ಪಡೆದಿದ್ದು. ಪ್ರಸ್ತುತ ಕೊಪ್ಪದ ಶ್ರೀ ವೆಂಕಟೇಶ್ವರ ವಿದ್ಯಾಮಂದಿರ ( ಬಿಜಿಎಸ್ ) ದಲ್ಲಿ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆ ದೈಹಿಕ ಶಿಕ್ಷಕ ಪ್ರಭಾಕರ್ ಮಾರ್ಗದರ್ಶನದಲ್ಲಿ ಈಗಾಗಲೇ ವಾಲೀಬಾಲ್ ನಲ್ಲಿ 3 ಬಾರಿ ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ತಂಡವನ್ನು ಪ್ರತಿನಿಧಿಸಿರುವ ಕುಸುಮಾ ಥ್ರೋಭಾಲ್ ನಲ್ಲಿ ಜಿಲ್ಲಾ ಮಟ್ಟದಲ್ಲಿ ಗೆದ್ದ ತಂಡದಲ್ಲಿ ಭಾಗವಹಿಸಿದ್ದಳು. ಹ್ಯಾಂಡ್ ಬಾಲ್ ಸ್ಪರ್ಧೆಯಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ, ಜಾವಲಿನ್ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾಳೆ. ಉತ್ತಮ ಕ್ರೀಡಾ ಪಟುವಾಗಿರುವ ವಿದ್ಯಾರ್ಥಿನಿ ಕುಸುಮಾಗೆ ಸೂಕ್ತ ತರಬೇತಿ ನೀಡಿ ಪ್ರೋತ್ಸಾಹ ನೀಡಿದರೆ ರಾಜ್ಯ ಮಟ್ಟದ ಉತ್ತಮ ಕ್ರೀಡಾ ಪಟುವಾಗಿ ಬೆಳವಣಿಗೆ ಹೊಂದಲಿದ್ದಾಳೆ.

Share this article