ಅನುದಾನ ಮಂಜೂರಾಗದ ಹಿನ್ನೆಲೆ ತೀವ್ರ ಆರ್ಥಿಕ ಸಂಕಷ್ಟದಲ್ಲಿದೆ ಕರ್ನಾಟಕ ವಿಶ್ವವಿದ್ಯಾಲಯ!

KannadaprabhaNewsNetwork |  
Published : Feb 20, 2025, 12:50 AM ISTUpdated : Feb 20, 2025, 12:34 PM IST
19ಡಿಡಬ್ಲೂಡಿ5ಕರ್ನಾಟಕ ವಿವಿ | Kannada Prabha

ಸಾರಾಂಶ

ವಿವಿಯ ಅಗತ್ಯತೆಗಳಿಗೆ ತಕ್ಕಂತೆ ಅನುದಾನ ಮಂಜೂರಾಗದ ಹಿನ್ನೆಲೆಯಲ್ಲಿ ವಿವಿ ಆರ್ಥಿಕ ಆರೋಗ್ಯ ಅತೀವ ಹದಗೆಟ್ಟಿದೆ

ಬಸವರಾಜ ಹಿರೇಮಠ 

ಧಾರವಾಡ : ರಾಜ್ಯದ ಎರಡನೇ ಅತ್ಯಂತ ಹಳೆಯ ವಿಶ್ವವಿದ್ಯಾನಿಲಯ ಇಲ್ಲಿನ ಕರ್ನಾಟಕ ವಿವಿ ಇದೀಗ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಮಾರ್ಚ ತಿಂಗಳಿಂದ ನಿವೃತ್ತ ನೌಕರರಿಗೆ ಪಿಂಚಣಿ ಪಾವತಿಸಲು ಹೆಣಗಾಡುವ ಸ್ಥಿತಿಗೆ ಬಂದಿದೆ.

ಕಳೆದ ಮೂರು ವರ್ಷಗಳಿಂದ ವಿಶ್ವವಿದ್ಯಾಲಯವು ಆಂತರಿಕ ಸಂಪನ್ಮೂಲಗಳ ಮೂಲಕ ಪಿಂಚಣಿ ವ್ಯವಸ್ಥೆ ಮಾಡಿ ಪರಿಸ್ಥಿತಿ ನಿಭಾಯಿಸಿತ್ತು. ಇದೀಗ ವಿವಿ ಹಣಕಾಸಿನ ಮೂಲಗಳು ಸಂಪೂರ್ಣ ಬತ್ತಿ ಹೋಗಿದ್ದು, ತಕ್ಷಣ ಸರ್ಕಾರ ಕೈ ಹಿಡಿಯದೇ ಇದ್ದಲ್ಲಿ ಪಿಂಚಣಿ ಸ್ಥಗಿತ, ಇತ್ಯಾದಿ ಒಂದೊಂದಾಗಿ ಆರ್ಥಿಕ ಸಂಕಷ್ಟವನ್ನು ವಿವಿ ಎದುರಿಸುವ ಅಪಾಯವಿದೆ.

ವಿವಿಯ ಅಗತ್ಯತೆಗಳಿಗೆ ತಕ್ಕಂತೆ ಅನುದಾನ ಮಂಜೂರಾಗದ ಹಿನ್ನೆಲೆಯಲ್ಲಿ ವಿವಿ ಆರ್ಥಿಕ ಆರೋಗ್ಯ ಅತೀವ ಹದಗೆಟ್ಟಿದೆ. ವಿವಿ ತನ್ನ ಆಂತರಿಕ ಅಭಿವೃದ್ಧಿ ಕಾರ್ಯ ಸ್ಥಗಿತಗೊಳಿಸಿ, ನಿವೃತ್ತ ನೌಕರರಿಗೆ ಪಿಂಚಣಿ ವ್ಯವಸ್ಥೆ ಮಾಡಲು ತನ್ನ ಆಂತರಿಕ ಸಂಪನ್ಮೂಲಗಳನ್ನು ಇಷ್ಟು ವರ್ಷಗಳ ಕಾಲ ಪರಿಣಾಮಕಾರಿಯಾಗಿ ಬಳಸಿಕೊಂಡಿದೆ. ಆದರೆ, ಇನ್ಮುಂದೆ ಕಷ್ಟ ಸಾಧ್ಯ. ಬಿಕ್ಕಟ್ಟು ತೀವ್ರಗೊಂಡಿರುವುದರಿಂದ ಮುಂದಿನ ತಿಂಗಳಿನಿಂದ ಪಿಂಚಣಿ ಪಾವತಿಸಲು ವಿಶ್ವವಿದ್ಯಾನಿಲಯಕ್ಕೆ ಸಾಧ್ಯವಾಗುವುದಿಲ್ಲ ಎಂದು ವಿವಿ ಹಣಕಾಸು ಅಧಿಕಾರಿ ಪ್ರೊ.ಸಿ. ಕೃಷ್ಣಮೂರ್ತಿ ವಿವಿ ಆರ್ಥಿಕ ಸಂಕಷ್ಟ ಬಿಚ್ಟಿಟ್ಟಿದ್ದಾರೆ.

₹126 ಕೋಟಿ ಬೇಕು: ಕವಿವಿಯಲ್ಲಿ 1,800ಕ್ಕೂ ಹೆಚ್ಚು ಪಿಂಚಣಿದಾರರಿದ್ದಾರೆ, ಜತೆಗೆ ಪಿಂಚಣಿ ಪಾವತಿಸಲು ವಿವಿಗೆ ವಾರ್ಷಿಕವಾಗಿ ₹126 ಕೋಟಿಗಿಂತ ಹೆಚ್ಚಿನ ಅನುದಾನ ಅಗತ್ಯವಿದೆ. ಆದರೆ, ಸರ್ಕಾರ ₹70 ಕೋಟಿಯಷ್ಟು ಮಾತ್ರ ನೀಡಿದೆ. ಆಂತರಿಕ ಸಂಪನ್ಮೂಲದಿಂದ ಉಳಿದ ಹಣ ನಿಭಾಯಿಸಿದ್ದು, ಈ ವರ್ಷ ಪಿಂಚಣಿಗೆ ₹126 ಕೋಟಿ ಪ್ರಸ್ತಾವನೆ ಸಲ್ಲಿಸಿದ್ದು, ಸರ್ಕಾರದಿಂದ ಇದುವರೆಗೂ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಅನುದಾನ ಮಂಜೂರು ಮಾಡುವಂತೆ ಮನವಿ ಮಾಡಿ ಉನ್ನತ ಶಿಕ್ಷಣ ಸಚಿವರು ಹಾಗೂ ಮುಖ್ಯಮಂತ್ರಿ ಬಳಿ ನಿಯೋಗ ಕೊಂಡೊಯ್ಯಲು ಇತ್ತೀಚೆಗೆ ಸಭೆ ನಡೆಸಿದ ಸಿಂಡಿಕೇಟ್ ಸಹ ನಿರ್ಧರಿಸಿದೆ. ಸರ್ಕಾರ ಹಣ ನೀಡಿದರೆ ಮಾತ್ರ ಪಿಂಚಣಿ ನೀಡಬಹುದು ಎಂದು ಸ್ಪಷ್ಟವಾಗಿಯೇ ಅವರು ಹೇಳಿದರು.

ವಿಶ್ವವಿದ್ಯಾನಿಲಯವು ತನ್ನ ಸಂಪನ್ಮೂಲಗಳನ್ನು ಕ್ರೋಢೀಕರಿಸಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ. ಆದರೆ, ಸಂಪೂರ್ಣ ಹಣ ಪಿಂಚಣಿ ಪಾವತಿಸಲು ಖರ್ಚು ಮಾಡಲಾಗುತ್ತಿದೆ.

ಹಲವು ಇಲಾಖೆಗಳು 50 ವರ್ಷ ಹಳೆಯದಾಗಿದ್ದು, ದುರಸ್ತಿ ಮಾಡಬೇಕಿದೆ. ಬೆಂಚು, ಡೆಸ್ಕ್‌ಗಳೂ ಮುರಿದು ಬಿದ್ದಿವೆ. ಕಟ್ಟಡಗಳನ್ನು ದುರಸ್ತಿ ಮಾಡಲು ಅಥವಾ ಬೆಂಚು ಮತ್ತು ಡೆಸ್ಕ್‌ಗಳನ್ನು ಖರೀದಿಸಲು ವಿಶ್ವವಿದ್ಯಾಲಯದಲ್ಲಿ ಯಾವುದೇ ನಿಧಿ ಇಲ್ಲ ಎಂದು ವಿವಿ ಪ್ರಾಧ್ಯಾಪಕರೊಬ್ಬರು ವಿವಿ ಆರ್ಥಿಕ ಸ್ಥಿತಿ ಕುರಿತು ಬೇಸರ ವ್ಯಕ್ತಪಡಿಸಿದರು.

ಕಳೆದ ವರ್ಷದಿಂದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (ಎಚ್‌ಆರ್‌ಎಂಎಸ್) ಮೂಲಕ ವೇತನ ನೀಡಲಾಗುತ್ತಿದ್ದು, ಅದನ್ನು ನಿಯಮಿತವಾಗಿ ಪಡೆಯುತ್ತಿದ್ದಾರೆ. ಪಿಂಚಣಿಯನ್ನೂ ಎಚ್‌ಆರ್‌ಎಂಎಸ್‌ಗೆ ಸೇರಿಸಿದರೆ, ವಿಶ್ವವಿದ್ಯಾನಿಲಯವು ಉಸಿರುಗಟ್ಟಬಹುದು. ಬರೀ ಪಿಂಚಣಿ ಮಾತ್ರವಲ್ಲದೇ ಶೈಕ್ಷಣಿಕ ಮೂಲಸೌಕರ್ಯ ಸುಧಾರಣೆ ಸೇರಿದಂತೆ ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಕೊರತೆಯು ಹಿನ್ನಡೆಯಾಗಿದೆ ಎಂದು ಕವಿವಿ ಪ್ರಭಾರಿ ಕುಲಪತಿ ಪ್ರೊ. ಜಯಶ್ರೀ ಎಸ್‌. ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌