ಸಿಂಗಾಪುರದಲ್ಲಿ ಮಿಂಚಿದ ಕರ್ನಾಟಕದ ಆರಾಧನಾ!

KannadaprabhaNewsNetwork |  
Published : Aug 16, 2026, 03:45 AM IST
ಟ್ರೋಫಿಯೊಂದಿಗೆ ಬಾಲಕಿ ಆರಾಧನಾ ಸೆಂದಿಲ್‌ಕುಮಾರ. | Kannada Prabha

ಸಾರಾಂಶ

ಮೂರು ವರ್ಷದ ಪುಟ್ಟ ವಯಸ್ಸಿನಲ್ಲೇ ಅಬಾಕಸ್‌ ಕಲಿಕೆಗೆ ಕಾಲಿಟ್ಟ ಬಾಲಕಿ ಆರಾಧನಾ ಸೆಂದಿಲ್‌ಕುಮಾರ, ಈಚೆಗೆ ಸಿಂಗಾಪುರದಲ್ಲಿ ನಡೆದ 46ನೇ ಅಂತಾರಾಷ್ಟ್ರೀಯ ಮಾನಸಿಕ ಅಂಕಗಣಿತ (ಮೆಂಟಲ್‌ ಅಬಾಕಸ್‌) ಮತ್ತು ಗಣಿತ ಸ್ಪರ್ಧೆಯಲ್ಲಿ ಗಮನಾರ್ಹ ಸಾಧನೆ ತೋರಿ ಹುಬ್ಬಳ್ಳಿಯ ಕೀರ್ತಿ ಹೆಚ್ಚಿಸಿದ್ದಾಳೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ:

ಮೂರು ವರ್ಷದ ಪುಟ್ಟ ವಯಸ್ಸಿನಲ್ಲೇ ಅಬಾಕಸ್‌ ಕಲಿಕೆಗೆ ಕಾಲಿಟ್ಟ ಬಾಲಕಿ ಆರಾಧನಾ ಸೆಂದಿಲ್‌ಕುಮಾರ, ಈಚೆಗೆ ಸಿಂಗಾಪುರದಲ್ಲಿ ನಡೆದ 46ನೇ ಅಂತಾರಾಷ್ಟ್ರೀಯ ಮಾನಸಿಕ ಅಂಕಗಣಿತ (ಮೆಂಟಲ್‌ ಅಬಾಕಸ್‌) ಮತ್ತು ಗಣಿತ ಸ್ಪರ್ಧೆಯಲ್ಲಿ ಗಮನಾರ್ಹ ಸಾಧನೆ ತೋರಿ ಹುಬ್ಬಳ್ಳಿಯ ಕೀರ್ತಿ ಹೆಚ್ಚಿಸಿದ್ದಾಳೆ.

ಮಾನಸಿಕ ಅಂಕಗಣಿತ (ಮೆಂಟಲ್ ಅಬಾಕಸ್‌) ಸ್ಪರ್ಧೆಯ ಕೆ3 ವಿಭಾಗದಲ್ಲಿ ತೃತೀಯ ಬಹುಮಾನ ಪಡೆದಿದ್ದಾಳೆ. ಜತೆಗೆ ಗಣಿತ ವಿಭಾಗದ ಪರೀಕ್ಷೆಯಲ್ಲೂ ನಾಲ್ಕನೇ ಸ್ಥಾನ ಗಳಿಸಿದ್ದಾಳೆ.

ಇಲ್ಲಿನ ಗೋಕುಲ ರಸ್ತೆಯ ಎಜುಸ್ಮಾರ್ಟ್‌ ಇಂಡಿಯಾದಲ್ಲಿ ತರಬೇತಿ ಪಡೆಯುತ್ತಿರುವ ಆರಾಧನಾ, ಪ್ರಸ್ತುತ ಯುಕೆಜಿ ಪೂರ್ಣಗೊಳಿಸಿ ಪ್ರಥಮ ತರಗತಿಗೆ ಪ್ರವೇಶಿಸಿರುವ ಈ ಬಾಲಕಿ ಈಗ ಅಬಾಕಸ್‌ನ 4ನೇ ಹಂತದಲ್ಲಿದ್ದು, 5ನೇ ಹಂತಕ್ಕೆ ಪ್ರವೇಶ ಪಡೆಯಲು ಅರ್ಹತೆ ಪಡೆದಿದ್ದಾಳೆ. ಅತಿ ಚಿಕ್ಕ ವಯಸ್ಸಿನಿಂದಲೇ ನಿರಂತರ ಅಭ್ಯಾಸ ಹಾಗೂ ವೇಗವಾಗಿ ಕಲಿಯುವ ಸಾಮರ್ಥ್ಯವೇ ಈ ಸಾಧನೆಗೆ ಕಾರಣವಾಗಿದೆ.

ಸಿಂಗಾಪುರದ ವರೆಗೆ:

ಆರಾಧನಾ ಅಂತಾರಾಷ್ಟ್ರೀಯ ಸ್ಪರ್ಧೆಯ ಪಯಣ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಸಾಧನೆಯ ಮೂಲಕ ಸಾಗಿ ಬಂದಿದೆ. ಕಳೆದ ಡಿಸೆಂಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಮಾನಸಿಕ ಅಂಕಗಣಿತ (ಮೆಂಟಲ್ ಅಬಾಕಸ್‌)ನ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಳು. ಬಳಿಕ ಗ್ರೇಡಿಂಗ್ ಪರೀಕ್ಷೆ ಹಾಗೂ ಜನವರಿ ತಿಂಗಳಲ್ಲಿ ಮುಂಬೈನಲ್ಲಿ ನಡೆದ ರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗಿಯಾಗಿ ಸಿಂಗಾಪುರದಲ್ಲಿ ನಡೆಯುವ ಅಂತಾರಾಷ್ಟ್ರೀಯ ಸ್ಪರ್ಧೆಗೆ ಅರ್ಹತೆ ಪಡೆದಿದ್ದಳು.

ಮೂರು ನಿಮಿಷದಲ್ಲಿ 100 ಲೆಕ್ಕ:

ಪುಟ್ಟ ಪೋರಿ ಆರಾಧನಾ ಸಾಧನೆಯ ವಿಶೇಷತೆ ಅವರ ವೇಗದ ಮಾನಸಿಕ ಲೆಕ್ಕಾಚಾರ. ಸ್ಪರ್ಧೆಯಲ್ಲಿ ಕೆಲವೊಂದು ವಿಭಾಗಗಳಲ್ಲಿ ಕೇವಲ ಮೂರು ನಿಮಿಷಗಳ ಅವಧಿಯಲ್ಲಿ ನೂರಕ್ಕೂ ಹೆಚ್ಚು ಲೆಕ್ಕಗಳನ್ನು ಪರಿಹರಿಸುವ ಸವಾಲು ಇರುತ್ತದೆ. ಡಬಲ್‌ ಡಿಜಿಟ್‌ ಸೇರ್ಪಡೆ, ವ್ಯವಕಲನ ಸೇರಿದಂತೆ ಹಲವು ಹಂತಗಳ ಲೆಕ್ಕಾಚಾರಗಳನ್ನು ಅಬಾಕಸ್‌ ಬಳಸದೆ ಮಾನಸಿಕವಾಗಿಯೇ ಮಾಡುವ ಕೌಶಲವನ್ನು ಅರಾಧನಾ ಬೆಳೆಸಿಕೊಂಡಿದ್ದಾಳೆ.

ಕಳೆದ ಆ. 1ರಂದು ಸಿಂಗಾಪುರದಲ್ಲಿ ನಡೆದ ಸ್ಪರ್ಧೆಯಲ್ಲಿ ಭಾರತ, ಫಿಲಿಪ್ಪೀನ್ಸ್, ಅಮೆರಿಕ, ಫ್ರಾನ್ಸ್‌ ಸೇರಿದಂತೆ 10ಕ್ಕೂ ಹೆಚ್ಚು ದೇಶಗಳಿಂದ ವಿವಿಧ ವಿಭಾಗಗಳಿಗೆ ನಡೆದ ಸ್ಪರ್ಧೆಯಲ್ಲಿ 800ಕ್ಕೂ ಅಧಿಕ ಮಕ್ಕಳು ಭಾಗಿಯಾಗಿದ್ದರು. ಕೆ3 ವಿಭಾಗದಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಪೋರಿ ತೃತೀಯ ಸ್ಥಾನ ಪಡೆದಿರುವುದು ವಿಶೇಷ.

ಸಹೋದರನಿಗೂ 4ನೇ ಸ್ಥಾನ:

ಅರಾಧನಾ ಅವರ ಸಹೋದರ ಪುಗಲ್‌ಷಣ್ಮುಗಂ ಕೂಡ ಸ್ಪರ್ಧೆಯಲ್ಲಿ ಭಾಗವಹಿಸಿ ಗಣಿತ ವಿಭಾಗದಲ್ಲಿ 4ನೇ ಸ್ಥಾನ ಪಡೆದಿದ್ದಾರೆ. ಅಬಾಕಸ್‌ಗಿಂತ ಗಣಿತದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಪುಗಲ್‌ಶಣ್ಮುಗಂ, ಕಳೆದ ಕೆಲವು ವರ್ಷಗಳಿಂದ ಎಜುಸ್ಮಾರ್ಟ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.ಹುಬ್ಬಳ್ಳಿಯಲ್ಲಿದೆ ಟಾಡ್ಲರ್‌ ಅಬಾಕಸ್

ಎಜುಸ್ಮಾರ್ಟ್‌ನಲ್ಲಿ ಮೂರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೂ ‘ಟಾಡ್ಲರ್ ಅಬಾಕಸ್‌’ ತರಬೇತಿ ನೀಡಲಾಗುತ್ತಿದ್ದು, ಚಿಕ್ಕ ಮಕ್ಕಳಿಗೆ ವಿಶೇಷ ತರಬೇತಿ ನೀಡುವ ವ್ಯವಸ್ಥೆ ಇದೆ. ಇದೇ ರೀತಿಯ ಆರಂಭಿಕ ತರಬೇತಿ ಅರಾಧನಾ ಅವರ ಪ್ರತಿಭೆಗೆ ಭದ್ರ ಬುನಾದಿಯಾಗಿದ್ದು, ಆರು ವರ್ಷದ ಬಾಲಕಿಯೋರ್ವಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಳ್ಳುವ ಮೂಲಕ ರಾಜ್ಯ, ದೇಶದ ಕೀರ್ತಿ ಹೆಚ್ಚಿಸಿದ್ದಾಳೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹುಬ್ಬಳ್ಳಿಯ ಪುಟ್ಟ ಪ್ರತಿಭೆ ಮೂಡಿಸಿರುವ ಈ ಛಾಪು ಇತರ ಮಕ್ಕಳಿಗೂ ಅಬಾಕಸ್‌ ಹಾಗೂ ಗಣಿತ ಕಲಿಕೆಗೆ ಹೊಸ ಪ್ರೇರಣೆ ನೀಡಿದೆ.

ಚಿಕ್ಕ ಮಕ್ಕಳ ಕಲಿಕೆಯ ಸಾಮರ್ಥ್ಯವನ್ನು ಸರಿಯಾದ ರೀತಿಯಲ್ಲಿ ಬೆಳೆಸಿದರೆ ಅವರು ಅತ್ಯುತ್ತಮ ಸಾಧನೆ ಮಾಡಬಲ್ಲರು ಎಂಬುದಕ್ಕೆ ಅರಾಧನಾ ಉತ್ತಮ ಉದಾಹರಣೆ ಎನ್ನುತ್ತಾರೆ ಎಜುಸ್ಮಾರ್ಟ್‌ ಆ್ಯಕ್ಟಿವಿಟಿ ಸೆಂಟರ್‌ನ ಮೆಂಟರ್ ಹಾಗೂ ಮಾಲೀಕ ಪ್ರಭಾ ನಾಯಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾರತೀಯ ಪರಿಕಲ್ಪನೆಗೆ ಒತ್ತು ನೀಡೋಣ: ಕೃಷ್ಣಕುಮಾರ್ ಶೆಟ್ಟಿ
ಸ್ವಾತಂತ್ರ್ಯ ಹಿರಿಯರ ತ್ಯಾಗದ ಫಲ: ಸ್ಟೆಲ್ಲಾ ವರ್ಗೀಸ್