ಹೂವಿನಹಡಗಲಿ: ತುಂಬಿದ ಕೊಡ ತುಳುಕಿತಲೇ ಪರಾಕ್...
ಹೌದು, ನಾಡಿನ ಸುಕ್ಷೇತ್ರ ಮೈಲಾರಲಿಂಗೇಶ್ವರ ಸ್ವಾಮಿಯ ಮೈಲಾರದ ಪುಣ್ಯಭೂಮಿ ಡೆಂಕಣ ಮರಡಿಯಲ್ಲಿ ಲಕ್ಷಾಂತರ ಭಕ್ತ ಸಮೂಹದ ಮಧ್ಯೆ ತುಪ್ಪ ಸವರಿದ 20 ಅಡಿ ಉದ್ದದ ಐತಿಹಾಸಿಕ ಬಿಲ್ಲನ್ನೇರಿದ ಗೊರವಯ್ಯ ಕಾರ್ಣಿಕದ ರಾಮಣ್ಣ ದಶ ದಿಕ್ಕುಗಳತ್ತ ನೋಡುತ್ತಾ ಸದ್ದಲೇ... ಎಂದು ಕೂಗಿದ ಕೂಡಲೇ ಡೆಂಕಣ ಮರಡಿಯಲ್ಲಿ ನೆರೆದಿದ್ದ ಲಕ್ಷಾಂತರ ಭಕ್ತ ಗಣ ಸೇರಿದಂತೆ ಪಶು, ಪಕ್ಷಿಗಳು ಕ್ಷಣ ಹೊತ್ತು ಮೌನ ವಹಿಸಿದ್ದವು. ಆಗ ಗೊರವಯ್ಯ ತುಂಬಿದ ಕೊಡ ತುಳುಕಿತಲೇ ಪರಾಕ್ ಎಂದು ನಾಡಿನ ಭವಿಷ್ಯ ನುಡಿದರು.
ಜಾತ್ರೆಯಲ್ಲಿ ಸುಮಾರು 6ರಿಂದ 7 ಲಕ್ಷ ಭಕ್ತರು ಪಾಲ್ಗೊಂಡಿದ್ದರು. ಕಾರ್ಣಿಕೋತ್ಸವ ಮುಗಿದ ಕೂಡಲೇ ಡೆಂಕಣ ಮರಡಿಯಲ್ಲಿ ನೆರೆದಿದ್ದ ಭಕ್ತ ಸಮೂಹವು, ಕಾರ್ಣಿಕ ನುಡಿಯು ನಾನಾ ಗೂಡಾರ್ಥವನ್ನು ತಮ್ಮೊಳಗೆ ಚರ್ಚಿಸುವುದು ಎಲ್ಲೆಡೆ ಕಂಡು ಬಂತು. ಈ ಭವಿಷ್ಯ ನುಡಿಯು ಕೃಷಿ, ರಾಜಕೀಯ, ಆರ್ಥಿಕ, ವಾಣಿಜ್ಯ ಕ್ಷೇತ್ರಕ್ಕೆ ಹೆಚ್ಚಾಗಿ ಅನ್ವಯವಾಗುತ್ತಿದೆ ಎಂಬುದು ಭಕ್ತರ ನಂಬಿಕೆ.ಕಾರ್ಣಿಕದ ವಿಶ್ಲೇಷಣೆ ಮಾಡುತ್ತಾ, ಕೃಷಿ ಕ್ಷೇತ್ರಕ್ಕೆ ಅಷ್ಟೇನೂ ಲಾಭದಾಯಕವಾಗಿಲ್ಲ. ಜತೆಗೆ ರಾಜಕೀಯ, ಆರ್ಥಿಕ, ಸಾಮಾಜಿಕ, ವಾಣಿಜ್ಯ ಕ್ಷೇತ್ರಗಳ ಮೇಲೆ ಕೆಟ್ಟ ಪರಿಣಾಮ ಬೀರುವ ಸಂಭವವಿದೆ ಎಂದು ಕಾರ್ಣಿಕದ ನುಡಿಯ ವಿಶ್ಲೇಷಣೆ ಕುರಿತು ರೈತರು ಚರ್ಚಿಸುತ್ತಿದ್ದರು.
ಮೈಲಾರಲಿಂಗೇಶ್ವರ ಕಾರ್ಣಿಕ ನುಡಿಯು 19ನೇ ಶತಮಾನಗಳಿಂದ ಮಲ್ಲಾಸುರ ಮಣಿಕಾಸುರರನ್ನು ಸಂಹರಿಸಿದ ವಿಜಯೋತ್ಸವದ ಸವಿನನಪಿಗಾಗಿ ಕಾರ್ಣಿಕ ನುಡಿ ಹೇಳುವ ಪರಂಪರೆ ನಡೆದು ಬಂದಿದೆ.
ಗೊರವರು ಢಮರುಗ ಬಾರಿಸುತ್ತಾ ಮೆರವಣಿಗೆ ಮೂಲಕ ಕರೆ ತಂದರು. ಜತೆಗೆ ಕಂಚಿವೀರರು ಕೂಡ ತಮ್ಮ ಆಯುಧಗಳನ್ನು ಹಿಡಿದುಕೊಂಡು ಡೆಂಕಣ ಮರಡಿಗೆ ಬಂದರು. ಕಾಗಿನೆಲೆ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ, ಶಾಸಕ ಕೃಷ್ಣನಾಯ್ಕ, ಸಂಸದ ಈ.ತುಕಾರಾಂ, ಆನಂದ್ ಗಡ್ಡದೇವರಮಠ, ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ, ಐಜಿಪಿ ಲೋಕೇಶಕುಮಾರ್, ಎಸ್ಪಿ ಶ್ರೀಹರಿಬಾಬು, ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ತಹಸೀಲ್ದಾರ್ ಜಿ.ಸಂತೋಷಕುಮಾರ, ಮುಜರಾಯಿ ಇಲಾಖೆ ಸಹಾಯಕ ಆಯುಕ್ತೆ ಸವಿತಾ, ತಾಪಂ ಇಒ ಎಂ.ಉಮೇಶ, ಡಿವೈಎಸ್ಪಿ ವೆಂಕಟಪ್ಪ ನಾಯಕ ಉಪಸ್ಥಿತರಿದ್ದರು.