ರಾಮನಗರ ತಾಲೂಕಿನ ಹರೀಸಂದ್ರ ಗ್ರಾಮದ ಸರ್ಕಾರಿ ಗೋಮಾಳದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ವಿರೋಧಿಸಿ ಮೇ 18ರಂದು ಭಾನುವಾರ ಕಸಬಾ ಹೋಬಳಿ ಬಂದ್ ಗೆ ಕರೆ ನೀಡಲಾಗಿದೆ ಎಂದು ಜೆಡಿಎಸ್ ಮುಖಂಡ ಪಾದರಹಳ್ಳಿ ಚಂದ್ರಶೇಖರ್ ತಿಳಿಸಿದರು.
ಹರೀಸಂದ್ರ ಗ್ರಾಮದ ಸರ್ವೇ ನಂಬರ್ 166ರ ಸರ್ಕಾರಿ ಗೋಮಾಳದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡುತ್ತಿರುವ ಸ್ಥಳದಲ್ಲಿಯೇ ಅನಿರ್ಧಿಷ್ಟಾವಧಿ ಧರಣಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಜಿಲ್ಲಾಡಳಿತ ಧರಣಿಗೆ ಅವಕಾಶ ನೀಡದೆ ಪೊಲೀಸರ ಬಲ ಪ್ರಯೋಗಿಸಿ ಗ್ರಾಮಸ್ಥರು ಧರಣಿ ನಡೆಸದಂತೆ ತಡೆಯೊಡ್ಡಿದರು. ಘಟಕ ನಿರ್ಮಾಣ ಸ್ಥಗಿತಗೊಳ್ಳುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ತಿಳಿಸಿದರು.
ಹರೀಸಂದ್ರದಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣಕ್ಕೂ ಮುನ್ನ ಶಾಸಕ ಇಕ್ಬಾಲ್ ಹುಸೇನ್ ಸ್ಥಳೀಯ ಹಾಗೂ ಸುತ್ತಮುತ್ತಲ ಗ್ರಾಮಗಳ ಜನರ ಅಭಿಪ್ರಾಯ ಸಂಗ್ರಹಿಸಬೇಕಿತ್ತು. ಆದರೆ, ಹಠಕ್ಕೆ ಬಿದ್ದು ಘಟಕ ನಿರ್ಮಾಣಕ್ಕೆ ಮುಂದಾಗಿರುವುದೇ ಏಕೆಂದು ಗೊತ್ತಾಗುತ್ತಿಲ್ಲ. ಬಹುಶಃ ಶಾಸಕರು ಗುತ್ತಿಗೆದಾರರಿಂದ ಕಿಕ್ ಬ್ಯಾಗ್ ಪಡೆದಿರಬೇಕು ಎಂದು ಟೀಕಿಸಿದರು.ಇನ್ನು ಕಾಲ ಮಂಚಿಲ್ಲ. ಶಾಸಕರು ರೈತರ ಅಭಿಪ್ರಾಯ ಸಂಗ್ರಹಿಸಿ ಘಟಕ ನಿರ್ಮಾಣ ಮಾಡಬೇಕೊ ಬೇಡವೊ ಎಂಬುದನ್ನು ತೀರ್ಮಾನಿಸಲಿ. ಇಲ್ಲದಿದ್ದರೆ ಈಗಾಗಲೇ ಕಾನೂನು ಹೋರಾಟ ಪ್ರಾರಂಭಿಸಿದ್ದೇವೆ. ಜೊತೆಗೆ ಬೀದಿ ಹೋರಾಟವನ್ನು ತೀವ್ರಗೊಳಿಸುತ್ತೇವೆ. ಮುಂದಾಗುವ ಎಲ್ಲಾ ಅನಾಹುತಗಳಿಗೆ ಜಿಲ್ಲಾಡಳಿತ ಹಾಗೂ ಶಾಸಕರೇ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಹರೀಸಂದ್ರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ರೈತರು ವ್ಯವಸಾಯ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣ ಮಾಡುವುದರ ಮೂಲಕ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆದಿದೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ. ಇಲ್ಲಿನ ಗೋಮಾಳ ಕೇವಲ ಒಂದು ಹಳ್ಳಿಗೆ ಮಾತ್ರ ಸೀಮಿತವಾಗಿಲ್ಲ. ಸುತ್ತಮುತ್ತಲ ಗ್ರಾಮಗಳ ಜಾನುವಾರುಗಳಿಗೆ ಅನುಕೂಲವಾಗುತ್ತಿದೆ. ವೈಜ್ಞಾನಿಕವಾಗಿ ಕಸ ವಿಲೇವಾರಿ ಘಟಕ ಮಾಡುತ್ತೇವೆ ಎಂಬುದು ಸುಳ್ಳು. ಈಗ ರಾಮನಗರ ಮತ್ತು ಬಿಡದಿ ಪಟ್ಟಣದ ಕಸ ಹಾಕುತ್ತಾರೆ. ಮುಂದೆ ಬಿಬಿಎಂಪಿ ಕಸ ವಿಲೇವಾರಿ ಮಾಡುತ್ತಾರೆ. ಕಸಬಾ ಹೋಬಲಿಯನ್ನು ಕಸದ ತೊಟ್ಟಿಯಾಗಲು ಬಿಡುವುದಿಲ್ಲ ಎಂದು ಚಂದ್ರಶೇಖರ್ ಹೇಳಿದರು.ಹರೀಸಂದ್ರ ಗ್ರಾಮ ಪಂಚಾಯಿತಿ ಸದಸ್ಯ ಸಿ.ಶಿವಕುಮಾರ್ ಮಾತನಾಡಿ, ಹರೀಸಂದ್ರ, ಮಾಯಗಾನಹಳ್ಳಿ, ಬಿಳಗುಂಬ ಹಾಗೂ ಸುಗ್ಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ರೈತರು ಹೈನುಗಾರಿಕೆ, ರೇಷ್ಮೆ, ಮಾವು , ತೆಂಗು ಬೆಳೆಗಳನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇಲ್ಲಿ ಘಟಕ ರ್ಮಾಣವಾಗುವುದರಿಂದ ಕೃಷಿ ಚಟುವಟಿಕೆ, ವಾಯು ಮಾಲಿನ್ಯ, ಜಲ ಮಾಲಿನ್ಯ, ಹೈನುಗಾರಿಕೆ ಮೇಲೆ ಪರಿಣಾಮ ಬೀರುತ್ತದೆ ಎಂದರು.
ಸರ್ಕಾರಿ ಗೋಮಾಳದ ಜಾಗದಲ್ಲಿ ಸರ್ಕಾರಿ ಕಚೇರಿಗಳು, ಆಸ್ಪತ್ರೆ, ಶಾಲೆ ಕಾಲೇಜು ಬೇಕಾದರೆ ತೆರೆಯಲಿ ಅಭ್ಯಂತರ ಇಲ್ಲ. ಆದರೆ, ಕಸ ವಿಲೇವಾರಿ ಘಟಕ ಸ್ಥಾಪನೆಗೆ ವಿರೋಧ ಇದೆ. ಹಾಗೊಂದು ವೇಳೆ ರೈತರ ವಿರೋಧವನ್ನು ಲೆಕ್ಕಿಸದೆ ಘಟಕ ನಿರ್ಮಾಣಕ್ಕೆ ಮುಂದಾದರೆ ಗ್ರಾಮ ಪಂಚಾಯಿತಿಯ 16 ಸದಸ್ಯರು ತಮ್ಮ ಸದಸ್ಯತ್ವ ಸ್ತಾನಕ್ಕೆ ರಾಜೀನಾಮೆ ಕೊಡಲು ಸಿದ್ಧರಾಗಿದ್ದೇವೆ ಎಂದು ಶಿವಕುಮಾರ್ ಎಚ್ಚರಿಕೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ದೊಡ್ಡವೀರೇಗೌಡ, ಸಬ್ಬಕೆರೆ ಶಿವಲಿಂಗಯ್ಯ, ಕೃಷ್ಣೇಗೌಡ, ಶಿವರಾಮು, ಸಂತೋಷ್ , ಶಿವು, ಯೋಗಾನಂದ್ , ಚಿಕ್ಕಣ್ಣ, ದೀಪು, ರವಿ, ಉಮೇಶ್, ನಾಗರಾಜ್, ಸುಗ್ಗನಹಳ್ಳಿ ರಾಮಕೃಷ್ಣ, ಮಾಯಗಾನಹಳ್ಳಿ ಸುರೇಶ್, ಪ್ರಕಾಶ್, ಸಿದ್ದಲಿಂಗಪ್ಪ ಇತರರಿದ್ದರು.15ಕೆಆರ್ ಎಂಎನ್ 1.ಜೆಪಿಜಿ
ರಾಮನಗರ ತಾಲೂಕಿನ ಚಿಕ್ಕೇಗೌಡನದೊಡ್ಡಿ ಗ್ರಾಮದಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣ ವಿರೋಧಿಸಿ ಮುಂದಿನ ಹೋರಾಟದ ರೂಪುರೇಷೆ ಕುರಿತು ಮುಖಂಡರು ಚರ್ಚೆ ನಡೆಸಿದರು.