ಕನ್ನಡಪ್ರಭ ವಾರ್ತೆ ಮಂಡ್ಯ
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಗಿಸಿ ರಾಜಧಾನಿ ಸೇರಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಶಿ ಶುಕ್ರವಾರ (ಮೇ 9)ದಂದು ಸಂಜೆ 4 ಗಂಟೆಗೆ ಮಂಡ್ಯಕ್ಕೆ ಆಗಮಿಸುತ್ತಿದ್ದಾರೆ.ಸಮ್ಮೇಳನದ ಸ್ಮರಣ ಸಂಚಿಕೆ ಬೆಲ್ಲದಾರತಿ ಕುರಿತು ಜಿಲ್ಲಾಧಿಕಾರಿ ಡಾ.ಕುಮಾರ, ಪುಸ್ತಕ ಆಯ್ಕೆ ಸಮಿತಿ ಅಧ್ಯಕ್ಷ ಡಾ.ಎಚ್.ಎಸ್. ಮುದ್ದೇಗೌಡ ಅವರೊಂದಿಗೆ ಸಮಾಲೋಚನಾ ಸಭೆಯಲ್ಲಿ ಭಾಗವಹಿಸುವರು.
ಸಮ್ಮೇಳನ ಮುಗಿದ ನಂತರದಲ್ಲಿ ಕಸಾಪ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಶಿ ಅವರ ನಡೆಯ ಬಗ್ಗೆ ಆಕ್ರೋಶಗೊಂಡಿರುವ ಪ್ರಗತಿಪರ ರೈತ, ದಲಿತ, ಕಸಾಪ ಪದಾಧಿಕಾರಿಗಳು ರಾಜ್ಯಾಧ್ಯಕ್ಷರಿಗೆ ಕಪ್ಪುಬಾವುಟ ಪ್ರದರ್ಶನಕ್ಕೆ ಮುಂದಾಗಿದ್ದಾರೆ.ಯಶಸ್ವಿಯಾಗಿ ಸಮ್ಮೇಳನ ನಡೆಯಲು ಸಹಕರಿಸಿದ ಜಿಲ್ಲೆಯ ಜನರಿಗೆ ರಾಜ್ಯಾಧ್ಯಕ್ಷರಾಗಿ ಕೃತಜ್ಞತೆ ಸಲ್ಲಿಸದಿರುವುದು. ಸಮ್ಮೇಳನ ಮುಗಿದ ಎರಡೇ ದಿನಕ್ಕೆ ಸಮ್ಮೇಳನದ ಸಂಚಾಲಕಿ ಹುದ್ದೆಯಿಂದ ಮೀರಾ ಶಿವಲಿಂಗಯ್ಯ ಅವರನ್ನು ವಜಾಗೊಳಿಸಿದ್ದು, ಸಾಹಿತ್ಯ ಪರಿಷತ್ತಿನ ಬೈಲಾ ತಿದ್ದುಪಡಿ, ಅಧ್ಯಕ್ಷರ ಆಯ್ಕೆ ಕುರಿತು ಜಿಲ್ಲಾ ಕಾರ್ಯಕಾರಿ ಸಮಿತಿಯ ಅಧಿಕಾರ ಕಸಿತ, ಜಿಲ್ಲಾ ಕಸಾಪ ಸದಸ್ಯರ ಸದಸ್ಯತ್ವ ರದ್ದು, ಸಿ.ಕೆ.ರವಿಕುಮಾರ ಮರಣದ ಬಳಿಕ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸಮರ್ಥರನ್ನು ಆರಿಸುವಲ್ಲಿ ತೋರುತ್ತಿರುವ ನಿರ್ಲರ್ಕ್ಷ್ಯ ಹೀಗೆ ಹಲವು ವಿವಾದಗಳನ್ನು ಸೃಷ್ಟಿಸಿರುವ ಡಾ.ಮಹೇಶ್ ಜೋಶಿ ವಿರುದ್ಧ ಆಕ್ರೋಶ ಮಡುಗಟ್ಟಿದೆ.
ಸಮ್ಮೇಳನಕ್ಕೆ ಕಸಾಪ ರಾಜ್ಯಾಧ್ಯಕ್ಷರು ಖರ್ಚು ಮಾಡಿರುವ 2.50 ಕೋಟಿ ರು.ಗೆ ಲೆಕ್ಕ ಕೊಡದಿರುವುದು. ಆ ವಿಷಯವಾಗಿ ಉದ್ಧಟತನದ ಉತ್ತರ ಇವೆಲ್ಲವೂ ಹಿರಿಯ ಸಾಹಿತಿಗಳು, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರನ್ನು ಕೆರಳಿಸುವಂತೆ ಮಾಡಿದೆ. ಅಧ್ಯಕ್ಷರ ವೇತನ, ದಿನಭತ್ಯೆ, ಪ್ರಯಾಣ ಭತ್ಯೆ ಹಾಗೂ ಇನ್ನಿತರ ವೆಚ್ಚಗಳಿಂದ ಆರ್ಥಿಕ ಅಶಿಸ್ತಿಗೆ ಕಾರಣರಾಗಿರುವ ಜೋಶಿ ವಿರುದ್ಧ ಹಲವರು ಕೆಂಡಕಾರುತ್ತಿದ್ದಾರೆ.ಇದೆಲ್ಲದರ ನಡುವೆ ಮೇ 17ರಂದು ಜೋಶಿ ವಿರುದ್ಧ ಹಿರಿಯ ಸಾಹಿತಿಗಳ ನೇತೃತ್ವದಲ್ಲಿ ಜನಚಳವಳಿ ಸಮಾವೇಶವನ್ನು ಆಯೋಜಿಸಲಾಗಿದೆ. ರಾಜ್ಯಾಧ್ಯಕ್ಷರಿಗೆ ನೀಡಿರುವ ಸಂಪುಟ ದರ್ಜೆಯ ಸ್ಥಾನ-ಮಾನವನ್ನು ವಾಪಸ್ ಪಡೆಯುವಂತೆ ಆಗ್ರಹಿಸುತ್ತಿದ್ದಾರೆ. ಇದೀಗ ಕಸಾಪ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಶಿ ಶುಕ್ರವಾರ ನಗರಕ್ಕೆ ಆಗಮಿಸುತ್ತಿದ್ದಾರೆ. ಈ ಸಮಯದಲ್ಲಿ ನಡೆಯಬಹುದಾದ ಬೆಳವಣಿಗೆಗಳು ಕುತೂಹಲ ಮೂಡಿಸಿವೆ.