ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಯುವ ಜನರು ಕನ್ನಡ ಭಾಷೆ ಪ್ರೀತಿಸುವಂತ ಕೆಲಸ ಮಾಡುತ್ತಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪೂರ್ಣೇಶ್ ತಿಳಿಸಿದರು.ಮುತ್ತಿನಕೊಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ ನಡಿಗೆ ಶಾಲಾ ಕಾಲೇಜುಗಳ ಕಡೆಗೆ, ಪ್ರತಿಭಾ ಪುರಸ್ಕಾರ ಹಾಗೂ ಮಕ್ಕಳ ಕನ್ನಡ ರಸಪ್ರಶ್ನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಸಾಪದಿಂದ ಈಗಾಗಲೇ ಶಾಲಾ, ಕಾಲೇಜುಗಳಲ್ಲಿ ಕನ್ನಡದಲ್ಲಿ 125ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿದ್ದೇವೆ. ಯುವ ಜನರಿಗೆ ಸಾಹಿತ್ಯದ ಬಗ್ಗೆ ಒಲವು ಬೆಳೆಸುವ ಕಾರ್ಯಕ್ರಮ ನಡೆಸುತ್ತಿದ್ದೇವೆ. ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹ ನೀಡಿದ್ದೇವೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುತ್ತಿನಕೊಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶಶಿಧರ್, ಕನ್ನಡ ಸಾಹಿತ್ಯ ಪರಿಷತ್ ಮಕ್ಕಳಲ್ಲಿ ಜ್ಞಾನ ತುಂಬುವ ಕೆಲಸ ಮಾಡುತ್ತಾ ಬಂದಿದೆ. ಮಕ್ಕಳು ಸಂಸ್ಕಾರಯುತರಾಗಿ, ಉತ್ತಮ ಸಂಸ್ಕೃತಿ ಬೆಳೆಸಿಕೊಂಡು ಸಾಹಿತ್ಯ ಚಟುವಟಿಕೆಗಳಲ್ಲಿ ಹೆಚ್ಚು ಕ್ರಿಯಾಶೀಲರಾಗಬೇಕು. ದುಶ್ಚಟಗಳಿಗೆ ದಾಸರಾಗದೆ ಉತ್ತಮ ನಾಗರಿಕರಾಗಿ ಬಾಳಬೇಕು ಎಂದು ಕರೆ ನೀಡಿದರು.ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಪದ್ಮಸತೀಶ್ ಮಾತನಾಡಿ, ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ಎಲ್ಲಾ ಸೌಕರ್ಯ ಮಾಡಿಕೊಟ್ಟಿದೆ. ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸಬೇಕು. ಕನ್ನಡ ಪುಸ್ತಕಗಳನ್ನು ಹೆಚ್ಚಾಗಿ ಓದಬೇಕು ಎಂದು ಕರೆ ನೀಡಿದರು.
ರಾಜ್ಯ ಶಾಸ್ತ್ರ ಉಪನ್ಯಾಸಕಿ ಆಶಾ ವಿಶ್ವನಾಥ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ನಡೆದು ಬಂದ ಹಾದಿ ಬಗ್ಗೆ ವಿವರಿಸಿದರು. ಮುತ್ತಿನಕೊಪ್ಪ ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ಗಂಗಾಧರಪ್ಪ, ಸನ್ಮತಿ ರಕ್ಷಿತ್ ಗೌಡ ಮಾತನಾಡಿದರು.ಇದೇ ವೇಳೆ ದ್ವಿತೀಯ ಪಿಯುಸಿಯಲ್ಲಿ ಕನ್ನಡದಲ್ಲಿ ಪೂರ್ಣಾಂಕ ಪಡೆದ ಕೆ.ಎಸ್.ಅನು, ನಂದಿತ, ದಿವ್ಯ.ಜಿ. ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ ಎಸ್‌ಎಸ್ಎಲ್‌ಸಿಯಲ್ಲಿ ಕನ್ನಡದಲ್ಲಿ ಪೂರ್ಣಾಂಕ ಪಡೆದ ಮುತ್ತಿನಕೊಪ್ಪ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿ ಹುಮೆ ಹಾಬೀಬಾ ಅವರಿಗೆ ಕನ್ನಡ ಕಣ್ಮಣಿ ಎಂಬ ಬಿರುದು ನೀಡಿ ಗೌರವಿಸಲಾಯಿತು. ಕನ್ನಡ ಉಪನ್ಯಾಸಕ ವರ್ಗೀಸ್ ಎಂ.ಯು. ಅವರನ್ನು ಸನ್ಮಾನಿಸಲಾಯಿತು.
ನಂತರ ನಡೆದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಕಿರಣ ಮತ್ತು ತಂಡ ಪ್ರಥಮ, ಸಾಹಿಮ ಮತ್ತು ತಂಡ ದ್ವಿತೀಯ, ದಾಮೋಧರ್ ಮತ್ತು ತಂಡ ತೃತೀಯ ಹಾಗೂ ಮೋನಿಕಾ ಮತ್ತು ತಂಡದವರು ಸಮಾಧಾನಕರ ಬಹುಮಾನ ಪಡೆದರು.ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಕಾರ್ಯದರ್ಶಿ ಪೂರ್ಣಿಮಾ ಮಧು, ಕೋಶಾಧ್ಯಕ್ಷ ರೇಖಾ ಮೋಹನ್, ಸಚಿನ್, ಎಂ.ಯು.ವರ್ಗೀಸ್, ಸ್ವಾತಿ ಇದ್ದರು.