ಅಂಕೋಲಾ: ಕನ್ನಡ ಎನ್ನುವುದೇ ಒಂದು ಭಾವೈಕ್ಯತೆಯ ಪ್ರತೀಕ. ಕನ್ನಡ ಎಲ್ಲವನ್ನೂ, ಎಲ್ಲರನ್ನೂ ಒಳಗೊಳ್ಳುತ್ತದೆ. ಇಂಥಹ ಸಾಮರಸ್ಯದ ಕನ್ನಡ ಹಾಗೂ ಕನ್ನಡಿಗರ ಮಾತೃಸಂಸ್ಥೆಯೇ ಕನ್ನಡ ಸಾಹಿತ್ಯ ಪರಿಷತ್ತು. ಇದು ಎಲ್ಲ ಕನ್ನಡಿಗರನ್ನು ಒಂದಾಗಿಸುವ ಮಹಾಮನೆ ಎಂದು ಲೇಖಕಿ ಪ್ರೇಮಾ ಟಿ.ಎಂ.ಆರ್. ಹೇಳಿದರು. ಅವರು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಅಂಕೋಲಾ ತಾಲೂಕು ಕಸಾಪ ಘಟಕ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 111ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಬಾಲಚಂದ್ರ ನಾಯಕ ಮಾತನಾಡಿ, ಜನಸಾಮಾನ್ಯರತ್ತ ಕನ್ನಡ ಸಾಹಿತ್ಯ ಪರಿಷತ್ತು ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿ ಜನಸಾಮಾನ್ಯರು ಎಲ್ಲಿಯವರೆಗೆ ತೊಡಗಿಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಯಾವ ಯೋಜನೆ, ಯೋಚನೆಗಳೂ ಯಶಸ್ಸು ಕಾಣಲು ಸಾಧ್ಯವಿಲ್ಲ. ಉತ್ತರಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಈಗಾಗಲೇ ಎಲ್ಲರನ್ನು ಒಳಗೊಳ್ಳುತ್ತ ಜನಸಾಮಾನ್ಯರನ್ನು ತಲುಪುವ ಕೆಲಸ ಹಾಗೂ ಕಾರ್ಯಕ್ರಮ ಮಾಡುತ್ತಿದೆ. ಜಿಲ್ಲೆಯ ಕಸಾಪ ಕೆಲಕಾಲ ನಿಂತ ನೀರಾಗಿತ್ತು. ಆದರೆ ಈಗ ವಾಸರೆಯವರ ಕ್ರಿಯಾಶೀಲತೆಯಿಂದಾಗಿ ಪ್ರವಹಿಸುತ್ತಿದೆ ಎಂದರು.ಮುಖ್ಯ ಅತಿಥಿಗಳಾಗಿ ಕೆನರಾ ವೆಲ್ಪರ್ ಟ್ರಸ್ಟಿನ ಆಡಳಿತಾಧಿಕಾರಿ ರವೀಂದ್ರ ಕೇಣಿ, ಅಂಕೋಲಾ ತಾಲೂಕು ಕಸಾಪ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ಸಾಹಿತ್ಯ ಪರಿಷತ್ತನ್ನು ಕಟ್ಟಿದ ನಾಲ್ವಡಿ ಕೃಷ್ಣರಾಜ ಒಡೆಯರ, ಸರ್ ಎಂ.ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಲ್ ಈ ನಾಡಿನ ಪ್ರಾಥಸ್ಮರಣೀಯರಾಗಿದ್ದಾರೆ. ಅವರ ಮಹತ್ವಾಕಾಂಕ್ಷೆಯ ಸಂಸ್ಥೆ ಇಂದು ಶತಮಾನಗಳ ಇತಿಹಾಸದೊಂದಿಗೆ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಬೆಳೆದು ನಿಂತಿದೆ ಎಂದರು.ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಬಾಲಚಂದ್ರ ನಾಯಕರಿಗೆ ಗೌರವ ಸಮರ್ಪಿಸಿಲಾಯಿತು. ಆನ್ ಲೈನ್ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಲೇಖಕ ಜೆ.ಪ್ರೇಮಾನಂದ ಬಹುಮಾನಿತರ ಯಾದಿ ವಾಚಿಸಿದರು.
ಲೇಖಕ ಜಿ.ಆರ್. ನಾಯಕ ಕನ್ನಡದ ಗೀತೆ ಹಾಡಿದರು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕಸಾಪ ಜಿಲ್ಲಾ ಸಮಿತಿ ಸದಸ್ಯ ಜಯಶೀಲ ಆಗೇರ ವಂದಿಸಿದರು. ಲೇಖಕ ಮಹಾಂತೇಶ ರೇವಡಿ ನಿರೂಪಿಸಿದರು.ಸಾಹಿತಿಗಳಾದ ಮೋಹನ ಹಬ್ಬು, ವಿಠ್ಠಲ ಗಾಂವಕರ, ನಾಗೇಂದ್ರ ತೊರ್ಕೆ, ನಾಗೇಶ ಅಂಕೋಲೇಕರ, ಶ್ರೀಧರ ನಾಯಕ, ಶ್ಯಾಮಸುಂದರ ಗೌಡ, ಜನಾರ್ಧನ ನಾಯಕ, ಸಂದೀಪ, ಪಾಲ್ಗುಣ ಗೌಡ, ರಫಿಕ್ ಶೇಖ್ ಇದ್ದರು.