ಭಾಷೆ, ನೆಲ, ಜಲ, ಸಂಸ್ಕೃತಿ ಬೆಳವಣಿಗೆಗೆ ಶ್ರಮಿಸುತ್ತಿದೆ ಕಸಾಪ : ಪಿ.ಕೆ.ಬಸವರಾಜ್

KannadaprabhaNewsNetwork | Published : May 7, 2025 12:52 AM

ಸಾರಾಂಶ

ನರಸಿಂಹರಾಜಪುರ,1915 ರಲ್ಲಿ ಪ್ರಾರಂಭವಾದ ಕನ್ನಡ ಸಾಹಿತ್ಯ ಪರಿಷತ್ತಿಗೆ ಎಚ್‌.ವಿ.ನಂಜುಂಡಯ್ಯ ಪ್ರಥಮ ಅಧ್ಯಕ್ಷರಾಗಿದ್ದರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವ ಅಧ್ಯಕ್ಷ ಪಿ.ಕೆ.ಬಸವರಾಜ್ ತಿಳಿಸಿದರು.

ತಾಲೂಕು ಕಸಾಪ ಆಶ್ರಯದಲ್ಲಿ 111 ನೇ ಸಂಸ್ಥಾಪನಾ ದಿನಾಚರಣೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

1915 ರಲ್ಲಿ ಪ್ರಾರಂಭವಾದ ಕನ್ನಡ ಸಾಹಿತ್ಯ ಪರಿಷತ್ತಿಗೆ ಎಚ್‌.ವಿ.ನಂಜುಂಡಯ್ಯ ಪ್ರಥಮ ಅಧ್ಯಕ್ಷರಾಗಿದ್ದರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವ ಅಧ್ಯಕ್ಷ ಪಿ.ಕೆ.ಬಸವರಾಜ್ ತಿಳಿಸಿದರು.

ಸೋಮವಾರ ತಾಲೂಕು ಕಸಾಪ ಕಚೇರಿಯಲ್ಲಿ ನಡೆದ 111 ನೇ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ದತ್ತಿ ಉಪನ್ಯಾಸದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ನಡೆದು ಬಂದ ದಾರಿ ಬಗ್ಗೆ ಉಪನ್ಯಾಸ ನೀಡಿದರು.

1913 ರಲ್ಲಿ ಅಂದಿನ ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಮಾರ್ಗದರ್ಶನದಲ್ಲಿ ಮೈಸೂರು ದಿವಾನರಾಗಿದ್ದ ಸರ್ ಎಂ.ವಿಶ್ವೇಶ್ವರಯ್ಯ ಮದ್ರಾಸ್‌, ಮುಂಬೈ, ಹೈದರಬಾದ್, ಮುಂಬೈ ಪ್ರದೇಶದಲ್ಲಿ ಹಂಚಿ ಹೋಗಿದ್ದ ಕನ್ನಡಿಗರನ್ನು ಒಟ್ಟು ಗೂಡಿಸಲು ಮೈಸೂರು ಸಂಪದ ಅಭ್ಯುದಯ ಸಮಾಜವನ್ನು ಹುಟ್ಟು ಹಾಕಿದರು. ಮೇಲುಸ್ತುವಾರಿ ನೋಡಿಕೊಳ್ಳಲು ಎಚ್.ವಿ.ನಂಜುಂಡಯ್ಯ ಅವರನ್ನು ನೇಮಿಸಲಾಯಿತು. 1915 ರಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ ಉದಯ ವಾಯಿತು. ಆ ವರ್ಷವೇ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಬೆಂಗಳೂರಿನಲ್ಲಿ 4 ದಿನಗಳ ಕಾಲ ನಡೆದು ಹಲವಾರು ನಿರ್ಣಯಗಳನ್ನು ಕೈಗೊಳ್ಳಲಾಯಿತು ಎಂದು ವಿವರಿಸಿದರು.

1938ರಲ್ಲಿ ಬಳ್ಳಾರಿಯಲ್ಲಿ ನಡೆದ ಕರ್ನಾಟಕ ಸಾಹಿತ್ಯ ಪರಿಷತ್ತಿನ 23ನೇ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಎಂದು ಮರು ನಾಮಕರಣ ಮಾಡಲಾಯಿತು. ಕನ್ನಡ ನಾಡು, ನುಡಿ,ಕಲೆ, ಜಲ, ಸಾಹಿತ್ಯ ಸಂಸ್ಕತಿಗಾಗಿ ಕನ್ನಡ ಸಾಹಿತ್ಯ ಪರಿಷತ್ ನಿರಂತರವಾಗಿ ಶ್ರಮಿಸುತ್ತಿದೆ. ಪ್ರಸ್ತುತ ರಾಜ್ಯ, ಜಿಲ್ಲೆ, ತಾಲೂಕು ಕಸಾಪ ಘಟಕಗಳಿವೆ. ಮಹಿಳಾ ಘಟಕಗಳಿವೆ. ಕನ್ನಡ ಸಾಹಿತ್ಯ ಪರಿಷತ್ ಹಲವಾರು ಏಳು ಬೀಳುಗಳನ್ನು ಕಂಡಿದೆ ಎಂದರು.

ಸಭೆ ಅದ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ನಾಲ್ವಡಿ ಕೃಷ್ಣರಾಜ ಒಡೆಯರು, ಸರ್ ವಿಶ್ವೇಶ್ವರಯ್ಯ ಹಾಗೂ ಮಿರ್ಜಾ ಇಸ್ಮಾಯಿಲ್ ಅವರ ಪ್ರಯತ್ನದಿಂದ ಪ್ರಾರಂಭಗೊಂಡಿದ್ದು ಅಂದಿನಿಂದ ಇಂದಿನವರೆಗೂ ಕನ್ನಡ ಭಾಷೆ, ನೆಲ, ಜಲ, ಸಂಸ್ಕೃತಿ ಬೆಳವಣಿಗೆಗೆ ಶ್ರಮಿಸುತ್ತಿದೆ. ದಿನೇ, ದಿನೇ ಕಸಾಪ ಸದೃಢವಾಗುತ್ತಿದೆ. ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗುತ್ತಿದ್ದು ಸಮ್ಮೇಳನದಲ್ಲಿ ಕವನ ಸಂಕಲನ ಬಿಡುಗಡೆ ಮಾಡುವ ಚಿಂತನೆ ನಡೆಸಲಾಗಿದೆ. ಅಲ್ಲದೆ ಎಸ್‌.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದರು.

ಅತಿಥಿಯಾಗಿದ್ದ ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ನಂಜುಂಡಸ್ವಾಮಿ ಮಾತನಾಡಿ, 1915 ಮೇ 5 ರಂದು ಪ್ರಾರಂಭಗೊಂಡ ಕಸಾಪ ಇದುವರೆಗೆ 28 ಅಧ್ಯಕ್ಷರನ್ನು ಕಂಡಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಯನ್ನು ಹುಟ್ಟುಹಬ್ಬದ ರೀತಿಯಲ್ಲಿ ಆಚರಿಸಲಾಗುತ್ತಿದೆ. ಹಿಂದೆ ದತ್ತಿ ಉಪನ್ಯಾಸಕ್ಕಾಗಿ ದತ್ತಿ ದಾನಿಗಳಿಂದ 15 ಸಾವಿರ ರು. ಪಡೆದು ಬ್ಯಾಂಕಿನಲ್ಲಿ ಠೇವಣಿ ಇಡಲಾಗುತ್ತಿತ್ತು. ಈಗ 25 ಸಾವಿರ ರು. ಏರಿಸಲಾಗಿದೆ. ರಾಜ್ಯ, ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲೂ ದತ್ತಿ ಉಪನ್ಯಾಸ ಮಾಡಲಾಗುತ್ತಿದೆ. 2500 ವರ್ಷಗಳ ಇತಿಹಾಸ ಉಳ್ಳ ಕನ್ನಡ ಭಾಷೆಗೆ ಅಳಿವಿಲ್ಲ. ಆದರೆ, ದೃಶ್ಯ ಮಾದ್ಯಮಗಳು ಕನ್ನಡ ಭಾಷೆಗೆ ಹೆಚ್ಚು ಪ್ರಾಧಾನ್ಯತೆ ಕೊಡುತ್ತಿಲ್ಲ. ಮಕ್ಕಳಿಗೆ ಬಾಲ್ಯದಿಂದಲೇ ಕನ್ನಡ ಭಾಷೆ ಬಗ್ಗೆ ಅಭಿಮಾನ ಬೆಳೆಸಬೇಕು ಎಂದರು. ಇದೇ ಸಂದರ್ಭದಲ್ಲಿ ಮಾಜಿ ಸೈನಿಕರಾದ ಡೇವೀಸ್ ಹಾಗೂ ಮನೋಜ್ ಅವರನ್ನು ಸನ್ಮಾನಿಸಲಾಯಿತು.

ಅತಿಥಿಗಳಾಗಿ ದತ್ತಿ ದಾನಿ ಪಿ.ಸಿ.ಮ್ಯಾಥ್ಯೂ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದ, ಸಾಹಿತಿ ಜಯಮ್ಮ, ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಕಾರ್ಯದರ್ಶಿ ಮಿಥುನ್ ಗೌಡ, ಕಸಾಪ ಹೋಬಳಿ ಕಾರ್ಯದರ್ಶಿ ಆರ್.ನಾಗರಾಜ್ , ಆದರ್ಶ, ತಾಲೂಕು ಕ.ಸಾಪ ಪ್ರಧಾನ ಕಾರ್ಯದರ್ಶಿ ನಂದಿನಿ ಆಲಂದೂರು ಇದ್ದರು.

Share this article