ಕನ್ನಡಪ್ರಭ ವಾರ್ತೆ ಹಾಸನ
ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ ಕಸಾಪದಲ್ಲಿ ನಡೆದಿರುವ ಅಕ್ರಮಗಳ ಕುರಿತು ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಅವರಿಗೆ ಮನವಿ ಸಲ್ಲಿಸಿದರು. ಇದೇ ವೇಳೆ ಜಾನಪದ ಅಕಾಡೆಮಿ ಜಿಲ್ಲಾಧ್ಯಕ್ಷ ಹಂಪನಹಳ್ಳಿ ತಿಮ್ಮೇಗೌಡ ಮಾಧ್ಯಮದೊಂದಿಗೆ ಮಾತನಾಡಿ, ಕಸಾಪ ಜಿಲ್ಲಾ ಅಧ್ಯಕ್ಷರು ಕೂಡ ಜನರಿಂದ ಆಯ್ಕೆಯಾದವರು ಎಂಬ ಕನಿಷ್ಠ ಪ್ರಜ್ಞೆ ಇಲ್ಲದೇ ತಮ್ಮನ್ನು ಪ್ರಶ್ನೆ ಮಾಡುವ ಜಿಲ್ಲಾ ಅಧ್ಯಕ್ಷರಿಗೇ ನೋಟಿಸ್ ನೀಡುವ ಕೆಲಸ ಮಾಡಿದ್ದಾರೆ. ಕಾರ್ಯಕಾರಿ ಸಮಿತಿಯಲ್ಲಿ ತಮಗೆ ಬೇಕಾದವರನ್ನು ಮಾತ್ರ ಕೂರಿಸಿಕೊಂಡು ತಮಗೆ ಇಷ್ಟ ಬಂದಂತೆ ಪರಿಷತ್ತನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೋಟ್ಯಂತರ ರು. ಅವ್ಯವಹಾರ ನಡೆದಿದೆ ಎಂದು ದೂರು ದಾಖಲಾಗಿದೆ. ಅದೂ ಅಲ್ಲದೇ ಆತಿಥ್ಯ ವಹಿಸಿದ್ದ ಮಂಡ್ಯ ಜಿಲ್ಲೆಗೆ ಬರಬೇಕಾದ ಹಣವನ್ನು ಕೊಡದೇ ದ್ವೇಷದ ಮನಸ್ಥಿತಿ ಪ್ರದರ್ಶಿಸುತ್ತಿದ್ದಾರೆ ಎಂದು ದೂರಿದರು.
ಅಪರಾಧಿಗೆ ಅಧಿಕಾರದ ಚುಕ್ಕಾಣಿ:ಮಹೇಶ್ ಜೋಷಿಯವರು ಈ ಹಿಂದೆ ದೂರದರ್ಶನದಲ್ಲಿ ತಮ್ಮ ಸಹೋದ್ಯೋಗಿಗೆ ಮೋಸ ಮಾಡಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಅಪರಾಧಿ ಎಂದು ತೀರ್ಪು ಪ್ರಕಟಿಸಿದೆ. ಒಬ್ಬ ಅಪರಾಧಿ ಕನ್ನಡ ಸಾಹಿತ್ಯ ಪರಿಷತ್ತಿನ ಚುಕ್ಕಾಣಿ ಹಿಡಿದು ಕುಳಿತಿರುವುದು ಕನ್ನಡಿಗರ ದುರಂತವೇ ಸರಿ. ಏಕಾಏಕಿ ಕನ್ನಡ ಸಾಹಿತ್ಯ ಪರಿಷತ್ತಿನ ಬೈಲಾಕ್ಕೆ ತಿದ್ದುಪಡಿಗೆ ಮುಂದಾಗಿದ್ದಾರೆ. ಯಾರ ಮಾತನ್ನೂ ಕೇಳದ ದುರಹಂಕಾರಿ ವರ್ತನೆಯ ಮಹೇಶ್ ಜೋಷಿಯವರು ಸರ್ವಾಧಿಕಾರಿ ವ್ಯಕ್ತಿತ್ವ ಉಳ್ಳವರು ಎಂಬುದನ್ನು ಈಗಾಗಲೇ ಸಾಬೀತು ಮಾಡಿದ್ದಾರೆ. ಇಂತಹವರು ಬೈಲಾ ತಿದ್ದುಪಡಿ ಮಾಡಲು ಮುಂದಾಗಿರುವುದು ಆತಂಕಕ್ಕೆ ಕಾರಣವಾಗಿದೆ ಎಂದರು.
ಪ್ರತಿಭಟನೆಯಲ್ಲಿ ಜನಪದ ವಿದ್ವಾಂಸ ಮೇಟಿಕರೆ ಹಿರಿಯಣ್ಣ, ಕೆ.ಪಿ.ಆರ್.ಎಸ್. ಜಿಲ್ಲಾಧ್ಯಕ್ಷ ಎಚ್.ಆರ್. ನವೀನ್ ಕುಮಾರ್, ಹಿರಿಯ ಪತ್ರಕರ್ತ ವೆಂಕಟೇಶ್, ಉದಯರವಿ, ಚಿನ್ನಸ್ವಾಮಿ, ಧರ್ಮೇಶ್, ಕರವೇ ಜಿಲ್ಲಾಧ್ಯಕ್ಷ ಸತೀಶ್ ಪಟೇಲ್, ಹರೀಶ್ ಕಟ್ಟೆಬೆಳಗುಲಿ, ಪಿ. ಶಾಡ್ರಾಕ್, ಟಿ.ಆರ್. ವಿಜಯಕುಮಾರ್, ಸಿ.ಐ.ಟಿ.ಯು. ಎಂ.ಜಿ. ಪೃಥ್ವಿ, ಅರವಿಂದ್, ಹಿರಿಯ ಸಾಹಿತಿ ಎನ್.ಎಲ್. ಚನ್ನೇಗೌಡ, ಹರೀಶ್, ದಲಿತ ಹಿರಿಯ ಮುಖಂಡರಾದ ಕೃಷ್ಣದಾಸ್, ಅಂಬೂಗ ಮಲ್ಲೇಶ್, ಚೆಲುವನಹಳ್ಳಿ ಶೇಖರಪ್ಪ, ಇತರರು ಉಪಸ್ಥಿತರಿದ್ದರು.