ಕಸಾಪ ಜನಸಾಮಾನ್ಯರ ಪರಿಷತ್ತು: ಕೊಂಡಳ್ಳಿ ಪ್ರಭಾಕರ ಶೆಟ್ಟಿ

KannadaprabhaNewsNetwork | Published : May 7, 2025 12:52 AM
Follow Us

ಸಾರಾಂಶ

ಉಡುಪಿ ಜಿಲ್ಲಾ ಮತ್ತು ಕಾಪು ತಾಲೂಕು ಕಸಾಪ ಘಟಕದ ಸಹಭಾಗಿತ್ವದಲ್ಲಿ ಬಂಟಕಲ್ಲು ಬಸ್‌ ನಿಲ್ದಾಣದ ಸಾರ್ವಜನಿಕ ತೆರೆದ ವಾಚನಾಲಯದಲ್ಲಿ ೧೧೧ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಬಂಟಕಲ್ಲು: ೧೧೧ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಕಾಪು

ಕನ್ನಡ ಸಾಹಿತ್ಯ ಪರಿಷತ್ತು ಕೇವಲ ಸಾಹಿತಿಗಳಿಗೆ ಮಾತ್ರ ಸೇರಿದ್ದಲ್ಲ. ಪ್ರತಿಯೊಬ್ಬ ಕನ್ನಡಿಗನಿಗೂ ಸೇರಿದ ಸ್ವಾಯತ್ತ ಸಂಸ್ಥೆಯಾಗಿದೆ. ೧೧೧ನೇ ವರ್ಷ ಪೂರೈಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತು ಜನ ಸಾಮಾನ್ಯರ ಪರಿಷತ್ತು ಆಗಿ ಕಾರ್ಯನಿರ್ವಹಿಸುತ್ತಿದ್ದು, ಇದೇ ಅದರ ದೀರ್ಘ ಅಸ್ತಿತ್ವಕ್ಕೆ ಕಾರಣ ಎಂದು ಕಾರ್ಕಳ ತಾಲೂಕು ಕಸಾಪ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಹೇಳಿದರು.ಅವರು ಉಡುಪಿ ಜಿಲ್ಲಾ ಮತ್ತು ಕಾಪು ತಾಲೂಕು ಕಸಾಪ ಘಟಕದ ಸಹಭಾಗಿತ್ವದಲ್ಲಿ ಬಂಟಕಲ್ಲು ಬಸ್‌ ನಿಲ್ದಾಣದ ಸಾರ್ವಜನಿಕ ತೆರೆದ ವಾಚನಾಲಯದಲ್ಲಿ ಜರುಗಿದ ೧೧೧ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಜನಸಾಮಾನ್ಯರೆಲ್ಲ ಬಂದು ನಿಲ್ಲುವ ಬಸ್‌ ತಂಗುದಾಣದಲ್ಲಿ ಶತಮಾನೋತ್ತರ ಇತಿಹಾಸ ಹೊಂದಿರುವ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸುತ್ತಿರುವುದು ನಾಡಿನ ಸಮಸ್ತರ ಭಾವನೆಗಳಿಗೆ ಸ್ಪಂದಿಸುವುದೇ ಆಗಿದೆ ಎಂದವರು ಶ್ಲಾಘಿಸಿದರು.ಕಾರ್ಯಕ್ರಮವನ್ನು ಉದ್ಘಾಟಿಸಿದ ಸಾಹಿತಿ, ಕವಯತ್ರಿ ಡಾ.ಫ್ಲಾವಿಯಾ ಕಸ್ತಲಿನೊ ಮಣಿಪಾಲ, ಕನ್ನಡದ ಶ್ರೀಮಂತ ಸಂಸ್ಕೃತಿ, ಪರಂಪರೆಯನ್ನು ನೂರಾರು ಕವಿಗಳು, ಸಾಹಿತಿಗಳು ಸಾಹಿತ್ಯ ಗ್ರಂಥಗಳ ಮೂಲಕ ಅನಾವರಣಗೊಳಿಸಿದ್ದಾರೆ ಎಂದರು.ಜಿಲ್ಲಾ ಕಸಪಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಿ, ಜಿಲ್ಲಾ ಹಾಗೂ ತಾಲೂಕು ಕಸಪಾ ಸಾಹಿತ್ಯ ಚಟುವಟಿಕೆಗಳಿಗೆ ರಾಜ್ಯದಲ್ಲಿ ಮುಂಚೂಣಿಯಲ್ಲಿವೆ ಎಂದು ಸಂತಸ ವ್ಯಕ್ತಪಡಿಸಿದರು.ಹಿರಿಯ ಸಾಹಿತಿ ಕುರಾಡಿ ಸೀತಾರಾಮ ಅಡಿಗ ಮತ್ತು ಟಿ.ಎಸ್.ಕಮಲಾಕ್ಷಿ ಅಡಿಗ ಸ್ಮಾರಕ ದತ್ತಿ ಉಪನ್ಯಾಸದಲ್ಲಿ ಬೆನಗಲ್ ವಿಶ್ವಭಾರತ ಕರ್ನಾಟಕ ಪ್ರತಿಷ್ಠಾನದ ಸ್ಥಾಪಕ ಅಧ್ಯಕ್ಷ ಸೂರಾಲು ನಾರಾಯಣ ಮಡಿ ಮಾತನಾಡಿದರು.

ಈ ಸಂದರ್ಭ ನಿವೃತ್ತ ಶಿಕ್ಷಕ ದಂಪತಿ ದೇವೇಂದ್ರ ನಾಯಕ್ ಶಿರ್ವ ಮತ್ತು ವನಿತಾ ಡಿ. ನಾಯಕ್‌ ಅವರನ್ನು ದತ್ತಿ ಗೌರವದೊಂದಿಗೆ ಸನ್ಮಾನಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಕಸಾಪ ಕಾಪು ತಾಲೂಕು ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಹಿಸಿದ್ದರು. ವೇದಿಕೆಯಲ್ಲಿ ಕಸಾಪ ಜಿಲ್ಲಾ ಸಭಾಭವನ ನಿರ್ಮಾಣ ಸಮಿತಿ ಅಧ್ಯಕ್ಷ ಕೆ.ದೇವದಾಸ್ ಹೆಬ್ಬಾರ್, ಬಂಟಕಲ್ಲು ನಾಗರಿಕ ಸೇವಾ ಸಮಿತಿ ಕೋಶಾಧಿಕಾರಿ ಜಗದೀಶ ಆಚಾರ್ಯ, ಬೆಳ್ಳೆ ಗ್ರಾಪಂ ಉಪಾಧ್ಯಕ್ಷ ಶಶಿಧರ ವಾಗ್ಲೆ ಉಪಸ್ಥಿತರಿದ್ದರು.ಕಸಾಪ ಸಹಕಾರ್ಯದರ್ಶಿ ಕೃಷ್ಣಕುಮಾರ್ ರಾವ್ ಮಟ್ಟು ಸ್ವಾಗತಿಸಿದರು. ಬಂಟಕಲ್ಲು ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಕೆ.ಆರ್.ಪಾಟ್ಕರ್ ನಿರೂಪಿಸಿದರು. ಗೌ.ಕಾರ್ಯದರ್ಶಿ ನೀಲಾನಂದ ನಾಯ್ಕ್ ವಂದಿಸಿದರು.