ಕನ್ನಡ ಸಾಹಿತ್ಯ ಪರಿಷತ್ ನೂತನ ತಾಲೂಕು ಅಧ್ಯಕ್ಷರ ಸೇವಾದೀಕ್ಷಾ ಕಾರ್ಯಕ್ರಮ ಉದ್ಘಾಟನೆ
ಜಿಲ್ಲೆಯಲ್ಲಿ ಸಾಹಿತ್ಯ ಪರಿಷತ್ ವಿಭಿನ್ನ, ವಿನೂತನ ಕಾರ್ಯಕ್ರಮದ ಮೂಲಕ ಸಾಹಿತ್ಯಾಸಕ್ತರನ್ನು ಪ್ರೇರೇಪಿಸುತ್ತಿದೆ. ನಾಡು, ನುಡಿ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಕಸಾಪ ಸಾಹಿತಿಗಳ ಕಲೆಗೆ ವೇದಿಕೆ ಕಲ್ಪಿಸುತ್ತಿದೆ ಎಂದು ಸಂಸ್ಕೃತಿ ಚಿಂತಕ ಹಿರೇಮಗಳೂರು ಪುಟ್ಟಸ್ವಾಮಿ ಹೇಳಿದರು.
ಕಲ್ಯಾಣನಗರದ ಅರಿವಿನ ಮನೆ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನೂತನ ತಾಲೂಕು ಅಧ್ಯಕ್ಷರ ಸೇವಾದೀಕ್ಷಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕವಿಗಳು, ಕಲಾಸಕ್ತರು ಹಾಗೂ ಲೇಖಕರನ್ನು ಸೆಳೆಯುವಲ್ಲಿ ಸರ್ಕಾರದ ಸ್ವಾಯತ್ತ ಸಂಸ್ಥೆ ಕಸಾಪ ಅತ್ಯು ತ್ತಮವಾದ ಕಾರ್ಯಚಟುವಟಿಕೆ ನಿರ್ವಹಿಸುತ್ತಿದೆ. ಕೇವಲ ಭಾಷೆಯಷ್ಟೇ ಅಲ್ಲದೇ, ನಾಡಿನ ನೆಲ, ಜಲ ಅಥವಾ ಸಾಹಿತ್ಯಕ್ಕೆ ಧಕ್ಕೆಯಾದಲ್ಲಿ ಕಸಾಪ ಗಟ್ಟಿಧ್ವನಿಯಲ್ಲಿ ನಿಲ್ಲುತ್ತಿದೆ ಎಂದು ತಿಳಿಸಿದರು.ನಾಡಿನ ಭಾಷಾ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಲಭಿಸುವುದು ಸುಲಭದ ಮಾತಲ್ಲ. ಗಟ್ಟುನಿಟ್ಟು, ಎಲ್ಲಾ ಕನ್ನಡಿಗರನ್ನು ಒಂದೂಗೂಡಿಸುವ ಶಕ್ತಿ ಹೊಂದಿರಬೇಕು. ಆ ನಿಟ್ಟಿನಲ್ಲಿ ನೂತನ ಅಧ್ಯಕ್ಷರು ಸಮರ್ಥವಾಗಿ ನಿರ್ವಹಿಸುತ್ತಾರೆಂಬ ವಿಶ್ವಾಸವಿದೆ ಎಂದ ಅವರು ಹಿಂದೆ ಅನೇಕ ಸಂಘ-ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ ಅನುಭವವೇ ದಾರಿಮಾಡಿಕೊಡಲಿದೆ ಎಂದರು.
ತಾಲೂಕು ಘಟಕಕ್ಕೆ ನೇಮಕಗೊಂಡ ಕೆಲವೇ ದಿನಗಳಲ್ಲಿ ಅನೇಕರಿಂದ ಕೆಲವು ಪ್ರಶ್ನೆಗಳು ಉದ್ಬವಿಸಿದವು. ಇದಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳದೇ ಸೇವಾಕಾರ್ಯಕ್ಕೆ ಮಾತ್ರ ಒತ್ತು ನೀಡಿದ್ದೇನೆ. ಟೀಕೆ-ಟಿಪ್ಪಣಿ ಪ್ರತಿಯೊಬ್ಬ ಮನುಷ್ಯನಿಗೂ ಸಹಜ. ಯಾವುದಕ್ಕೂ ಓಡಿ ಹೋಗುವುದಿಲ್ಲ. ಉಳಿದಿರುವ ಅವಧಿಯನ್ನು ಸೂಕ್ತ ರೀತಿ ಯಲ್ಲಿ ಕೆಲಸ ಮಾಡುತ್ತೇನೆ ಎಂದರು.
ಈ ವೇಳೆ ನೂತನ ಅಧ್ಯಕ್ಷ ಎಸ್.ಎಂ.ಲೋಕೇಶಪ್ಪ ಅವರಿಗೆ ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಕಸಾಪ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ, ಕಸಬಾ ಹೋಬಳಿ ಅಧ್ಯಕ್ಷೆ ವೀಣಾ ಮಲ್ಲಿಕಾರ್ಜುನ್, ನಗರಾಧ್ಯಕ್ಷೆ ರೂಪನಾಯ್ಕ್, ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್, ಕನ್ನಡಶ್ರೀ ಪ್ರಶಸ್ತಿ ವಿಜೇತ ಗುರುವೇಶ್ ಉಪಸ್ಥಿತರಿದ್ದರು.