ಭ್ರಷ್ಟರ ಕೈಯಲ್ಲಿ ಸಿಕ್ಕು ಕಸಾಪ ಸಂಸ್ಥೆಯ ನೈತಿಕತೆ ಹಾಳು: ಪ್ರೊ.ಎಸ್.ಜಿ.ಸಿದ್ದರಾಮಯ್ಯ

KannadaprabhaNewsNetwork |  
Published : Oct 04, 2026, 03:00 AM IST
(ಫೋಟೊಬಿಕೆಟಿ13, ಪ್ರೊ. ಎಸ್.ಜಿ.ಸಿದ್ದರಾಮಯ್ಯ  ಅವರು ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.) | Kannada Prabha

ಸಾರಾಂಶ

ಬಾಗಲಕೋಟೆ: ಕನ್ನಡ ಸಾಹಿತ್ಯ ಪರಿಷತ್ ಇತ್ತೀಚೆಗೆ ರಾಜಕೀಯ ಪಕ್ಷಗಳ ತುತ್ತೂರಿ ಆಗುತ್ತಿದೆ. ಪ್ರಸ್ತುತ ಸಾಹಿತ್ಯಿಕ ವಾತಾವರಣ ಸಂಪೂರ್ಣ ಹಾಳಾಗುತ್ತಿದ್ದು, ಚುನಾವಣೆಗಳಲ್ಲಿ ಭ್ರಷ್ಟಾಚಾರ, ಹಣದ ಪ್ರಭಾವ, ಹೆಚ್ಚಾಗುತ್ತಿದೆ. ಭ್ರಷ್ಟ ಅಧಿಕಾರಿಗಳು ಹಣ ಚೆಲ್ಲಿ ಅಧಿಕಾರಕ್ಕೆ ಬರುತ್ತಿದ್ದಾರೆ. ಇದರಿಂದಾಗಿ ಸಂಸ್ಥೆಯ ನೈತಿಕತೆ ಹಾಳಾಗಿದೆ ಎಂದು ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕನ್ನಡ ಸಾಹಿತ್ಯ ಪರಿಷತ್ ಇತ್ತೀಚೆಗೆ ರಾಜಕೀಯ ಪಕ್ಷಗಳ ತುತ್ತೂರಿ ಆಗುತ್ತಿದೆ. ಪ್ರಸ್ತುತ ಸಾಹಿತ್ಯಿಕ ವಾತಾವರಣ ಸಂಪೂರ್ಣ ಹಾಳಾಗುತ್ತಿದ್ದು, ಚುನಾವಣೆಗಳಲ್ಲಿ ಭ್ರಷ್ಟಾಚಾರ, ಹಣದ ಪ್ರಭಾವ, ಹೆಚ್ಚಾಗುತ್ತಿದೆ. ಭ್ರಷ್ಟ ಅಧಿಕಾರಿಗಳು ಹಣ ಚೆಲ್ಲಿ ಅಧಿಕಾರಕ್ಕೆ ಬರುತ್ತಿದ್ದಾರೆ. ಇದರಿಂದಾಗಿ ಸಂಸ್ಥೆಯ ನೈತಿಕತೆ ಹಾಳಾಗಿದೆ ಎಂದು ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಆರೋಪಿಸಿದರು.ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷಗಳಿಂದ ಕನ್ನಡ ಸಾಹಿತ್ಯ ಪರಿಷತ್ ಮೂಲ ಆಶಯಗಳನ್ನು ಧಿಕ್ಕರಿಸಿ ನಡೆಯುತ್ತಿದ್ದು, ರಾಜಕೀಯ ಪಕ್ಷಗಳ ಪ್ರಭಾವಕ್ಕೆ ಒಳಗಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸಾಹಿತ್ಯ ಪರಿಷತ್ತು ಯಾವುದೇ ರಾಜಕೀಯ ಪಕ್ಷದ ವೇದಿಕೆ ಆಗಬಾರದು. ಇದು ಸಮಗ್ರ ಕನ್ನಡಿಗರ ಆಶಯ ಮತ್ತು ಧ್ವನಿ ಬಿಂಬಿಸುವ ಸ್ವತಂತ್ರ ವೇದಿಕೆ ಆಗಬೇಕು. ಕನ್ನಡ ನೆಲ, ಜಲ, ಭಾಷೆ, ಗಡಿ ಸೇರಿ ಉತ್ತರ ಕರ್ನಾಟಕ ಹಾಗೂ ಇಡೀ ರಾಜ್ಯದ ಹಿತಾಸಕ್ತಿಗೆ ನಿರಂತರ ಹೋರಾಟ ಮಾಡುವ ಸಾಹಿತ್ಯಿಕ ಮನಸ್ಸಿನ ವ್ಯಕ್ತಿಗಳಿಗೆ ಮುಂಬರುವ ದಿನಗಳಲ್ಲಿ ಬೆಂಬಲ ನೀಡಿ ಕನ್ನಡ ಸಾಹಿತ್ಯ ಪರಿಷತ್‌ನ್ನು ಮೊದಲಿನ ಸ್ಥಿತಿಗೆ ತರಬೇಕಾದ ಅಗತ್ಯವಿದೆ ಎಂದು ಹೇಳಿದರು. ಹಿರಿಯ ಸಾಹಿತಿ, ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಜಾಣಗೆರೆ ವೆಂಕಟರಾಮಯ್ಯ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಮತ್ತು ಘನತೆ ಮರುಸ್ಥಾಪಿಸುವ ನಿಟ್ಟಿನಲ್ಲಿ ನಾನು ಮುಂಬರುವ ಪರಿಷತ್ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದರು.

ಹಿಂದಿನ ಅಧ್ಯಕ್ಷರು ಹಾಗೂ ಕೆಲ ನಿಕಟಪೂರ್ವ ನಾಯಕರು ಪರಿಷತ್ತಿನ ಬಗ್ಗೆ ಕಾಳಜಿ ವಹಿಸದೇ ದುರಾಡಳಿತ ನಡೆಸಿದ್ದಾರೆ. ಮೂರು ವರ್ಷದ ಅವಧಿಯನ್ನು ಐದು ವರ್ಷಗಳಿಗೆ ಅಧಿಕಾರದ ಅವಧಿಯಲ್ಲಿ ಏರಿಸಿಕೊಂಡಿದ್ದಾರೆ. ಎಲ್ಲೋ ದೂರದ ಊರಿನಲ್ಲಿ ಸರ್ವ ಸದಸ್ಯರ ಸಭೆ ನಡೆಸಿ, ಬೈಲಾ ತಿದ್ದುಪಡಿ ಮಾಡಿದ್ದಾರೆಂದು ಗಂಭೀರವಾಗಿ ಆಪಾದಿಸಿದರು.

ಪರಿಷತ್‌ ಅಕ್ರಮಗಳ ಬಗ್ಗೆ ಪ್ರಶ್ನಿಸಿದರೆ ಅಂತಹವರಿಗೆ ನ್ಯಾಯಾಲಯದ ನೋಟಿಸ್ ನೀಡಿ ಹೆದರಿಸಿ, ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು. ಒಂದೂವರೆ ವರ್ಷಗಳಿಂದ ಸಾಹಿತ್ಯ ಪರಿಷತ್ತಿನ ಘನತೆ ಎತ್ತಿ ಹಿಡಿಯಲು ಹೋರಾಟ ನಡೆಸಿದ್ದೇನೆ. ನಿರಂತರವಾಗಿ ಹೋರಾಟ ನಡೆಸಿದ್ದರಿಂದ ಪರಿಷತ್‌ ಅಧಿಕಾರ ಮುಗಿಯುವ ಮುನ್ನವೇ ಅಮಾನತು ಮಾಡಿ ಆಡಳಿತಾಧಿಕಾರಿ ನೇಮಿಸಿದ್ದಾರೆಂದರು.

ಡಿಸೆಂಬರ್‌ನಲ್ಲಿ ನಡೆಯುವ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವೆ. ಎಲ್ಲ ಸದಸ್ಯರನ್ನು ಭೇಟಿಯಾಗಿ ಜಾಗೃತಿ ಮೂಡಿಸುತ್ತೇನೆ. ನಾನು ಅಧ್ಯಕ್ಷ ಆದರೆ ಪರಿಷತ್ತಿನ ಘನತೆ ಎತ್ತಿ ಹಿಡಿಯುತ್ತೇನೆ. ಪುಸ್ತಕ ಸಂತೆ ಹಾಗೂ ಕನ್ನಡ ಸಂಸ್ಕೃತಿಯ ಉದ್ದೇಶ ತಿಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ನೆಲ, ಜಲ, ಗಡಿ, ಭಾಷೆ, ಉದ್ಯೋಗ ಸೇರಿದಂತೆ ಕನ್ನಡಿಗರ ಸಮಸ್ಯೆಗಳ ಬಗ್ಗೆ ಪರಿಷತ್ ಕೆಲಸವನ್ನು ಮಾಡಲಿದೆ ಎಂದು ಹೇಳಿದರು.

ಈಗಾಗಲೇ ರಾಜ್ಯಾದ್ಯಂತ ಪ್ರವಾಸ ಆರಂಭಿಸಿದ್ದು, ಸಾಹಿತ್ಯ ಪರಿಷತ್ ಬಗ್ಗೆ ಸದಸ್ಯರು, ಸಾಹಿತ್ಯಾಭಿಮಾನಗಳ ಜತೆಗೆ ಚರ್ಚಿಸಿದ್ದೇನೆ. ಅಲ್ಲದೇ ನನಗೆ ಉತ್ತಮ ಬೆಂಬಲ ಇದೆ ಎಂದ ಅವರು, ಈಗಾಗಲೇ ಅನೇಕ ಹಿರಿಯ ಸಾಹಿತಿಗಳು ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಈ ಹಿಂದಿನ ಎರಡು ಅವಧಿಯಲ್ಲಿ ಇದ್ದ ಅಧ್ಯಕ್ಷರು ಪರಿಷತ್‌ ತಮ್ಮ ಮನೆಯಂತೆ ಮಾಡಿಕೊಂಡಿದ್ದರು ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಆರ್.ಜಿ.ಹಳ್ಳಿ ನಾಗರಾಜ್, ರಂಗನಗೌಡ ದಂಡಣ್ಣವರ, ಮೈನುದ್ದೀನ ರೇವಡಿಗಾರ, ಆರ್.ಸಿ.ಚಿತ್ತವಾಡಗಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ
ಅರ್ಜಿ ವಿಲೇವಾರಿಗೆ ವಿಳಂಬ ಮಾಡಿದ್ರೆ ಶಿಸ್ತು ಕ್ರಮ: ಕಾಶಪ್ಪನವರ