ಕಸಾಪ ಕನ್ನಡಿಗರ ಅಸ್ಮಿಯಾಗಬೇಕು

KannadaprabhaNewsNetwork | Published : Dec 2, 2024 1:17 AM

ಸಾರಾಂಶ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸುಮಾರು 13 ಲಕ್ಷದಷ್ಟು ಜನಸಂಖ್ಯೆ ಇದ್ದು, ಭೌಗೋಳಿಕ ಹಾಗೂ ಸಾಂಸ್ಕೃತಿಕ ಕೊಡುಕೊಳ್ಳುವಿಕೆಯಿಂದ ಇಲ್ಲಿ ತೆಲುಗು ಭಾಷೆಯನ್ನು ಮಾತನಾಡುವ ಮತ್ತು ಸಾಂಸ್ಕೃತಿಕವಾಗಿ ತೆಲುಗನ್ನು ಆಚರಿಸುವ ಜನರು ಇದ್ದಾರೆ. ಆದರೂ ಇವರೆಲ್ಲ ಕನ್ನಡಿಗರು. ತೆಲುಗು ಮಾತನಾಡುವ ನಿರ್ದಿಷ್ಟ ಭೌಗೋಳಿಕ ಗಡಿ ಇರಬಹುದು,

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕ ಹಾಗೂ ಜಗತ್ತಿನ ಯಾವುದೇ ಭಾಗದಲ್ಲಿ ವಾಸಿಸುವ ಎಲ್ಲ ಕನ್ನಡಿಗರ ಅಸ್ಮಿತೆಯಾಗಬೇಕು ಹಾಗೂ ಅವರವರ ಮಟ್ಟದಲ್ಲಿ ಕನ್ನಡವನ್ನು ಕಟ್ಟಿ ಬೆಳೆಸುವ ಕಾಳಜಿ ಹಾಗೂ ಕಾಯಕವನ್ನು ಹೊಂದಬೇಕು ಎಂದು ಕಸಾಪ ಜಿಲ್ಲಾ ಅಧ್ಯಕ್ಷ ಡಾ.ಕೋಡಿ ರಂಗಪ್ಪ ಅಭಿಪ್ರಾಯಪಟ್ಟರು. ನಗರ ಹೊರವಲಯದ ಚಿತ್ರಾವತಿ ಬಳಿಯ ಬೆಂಗಳೂರು ಉತ್ತರವಿಶ್ವವಿದ್ಯಾಲಯದ ಶಿಕ್ಷಣ ಕಾಲೇಜಿನಲ್ಲಿ ಆಯೋಜಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಅವರು ಮಾತನಾಡಿದರು.

ಭಾವನೆ, ಸಂಸ್ಕೃತಿಗೆ ಗಡಿ ಇರಬಾರದು

ನಮ್ಮ ಜಿಲ್ಲೆಯಲ್ಲಿ ಸುಮಾರು 13 ಲಕ್ಷದಷ್ಟು ಜನಸಂಖ್ಯೆ ಇದ್ದು, ಭೌಗೋಳಿಕ ಹಾಗೂ ಸಾಂಸ್ಕೃತಿಕ ಕೊಡುಕೊಳ್ಳುವಿಕೆಯಿಂದ ಇಲ್ಲಿ ತೆಲುಗು ಭಾಷೆಯನ್ನು ಮಾತನಾಡುವ ಮತ್ತು ಸಾಂಸ್ಕೃತಿಕವಾಗಿ ತೆಲುಗನ್ನು ಆಚರಿಸುವ ಜನರು ಇದ್ದಾರೆ. ಆದರೂ ಇವರೆಲ್ಲ ಕನ್ನಡಿಗರು. ತೆಲುಗು ಮಾತನಾಡುವ ನಿರ್ದಿಷ್ಟ ಭೌಗೋಳಿಕ ಗಡಿ ಇರಬಹುದು, ಆದರೆ ಭಾವನಾತ್ಮಕವಾಗಿ ಸಾಂಸ್ಕೃತಿಕವಾಗಿ ಗಡಿ ಇರಲಾರದು ಎಂದರು.

ಸಾಹಿತ್ಯ ಪರಿಷತ್ತಿನ ಘಟಕಗಳು ಶಾಲಾ-ಕಾಲೇಜುಗಳು, ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು, ಕನ್ನಡಪರ ಸಂಘಟನೆಗಳು, ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ, ಸಂಘ-ಸಂಸ್ಥೆಗಳು, ಮಹಿಳಾ ಗುಂಪುಗಳು ಹಾಗೂ ಕಲಾವಿದರೊಂದಿಗೆ ನಿರಂತರ ಸಂಪರ್ಕ ಹೊಂದಬೇಕು. ರಾಜ್ಯದಲ್ಲಿ ವಿವಿಧ ಭಾಷೆಗಳನ್ನಾಡುವ ಜನರು ಸಹ ಒಗ್ಗೂಡಿ ಕನ್ನಡದ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಉಳಿಸುವ ಪ್ರಯತ್ನ ಮಾಡಬೇಕು ಎಂದರು.

ಘಟಕಗಳು ಕ್ರಿಯಾಶೀಲವಾಗಲಿ

ಈ ದಿಕ್ಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸರ್ಕಾರ ಮತ್ತು ಸಮಾಜದ ಸಹಕಾರ ಪಡೆದು ಶಾಶ್ವತ ರೀತಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಬೆಳೆಯಲು ಪೂರಕವಾದ ಕನ್ನಡ ಭವನಗಳು, ಅನುದಾನ, ಶಾಲಾ-ಕಾಲೇಜುಗಳು ಮತ್ತು ಗ್ರಂಥಾಲಯಗಳು, ಹೋಬಳಿ ಮಟ್ಟದಿಂದ ಪರಿಷತ್ತಿನ ಘಟಕಗಳು ಕ್ರಿಯಾಶೀಲ ಗೊಳಿಸಲು ಯೋಜಿಸಬೇಕು. ಈ ದಿಕ್ಕಿನಲ್ಲಿ ಪರಿಷತ್ತಿನ ಚಟುವಟಿಕೆಗಳು ಸಾಗಬೇಕು ಎಂದು ತಿಳಿಸಿದರು.ಡಿಸೆಂಬರ್ ಕೊನೆಯ ವಾರ ಮೂರು ದಿನಗಳು ಮಂಡ್ಯ ನಗರದಲ್ಲಿ ನಡೆಯಲಿರುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲೆಯಿಂದ ಹೆಚ್ಚು ಸಂಖ್ಯೆಯ ಪ್ರತಿನಿಧಿಗಳು ಹಾಜರಾಗಬೇಕು. ಇದೇ ರೀತಿ ಆ ಜೀವ ಸದಸ್ಯರ ಸಂಖ್ಯೆಯು ಹೆಚ್ಚು ಬೇಕು, ಹೋಬಳಿ ಸಮಿತಿಗಳ ರಚನೆಯಾಗಿ ತಾಲೂಕು ಸಮ್ಮೇಳನಗಳನ್ನು ನಡೆಸಬೇಕು. ಗ್ರಾಮೀಣ ಭಾಗಗಳಲ್ಲಿ ಮತ್ತು ಶಾಲೆಗಳಲ್ಲಿ ಕನ್ನಡಪರ ಚಟುವಟಿಕೆಗಳನ್ನು ನಿರಂತರ ಆಯೋಜಿಸಬೇಕು ಎಂಬ ಬಗ್ಗೆ ಚರ್ಚೆಗಳನ್ನು ಮಾಡಲಾಯಿತು .

ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನಜಿಲ್ಲೆಯ ಎಲ್ಲ ತಾಲೂಕುಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಆಯಾ ತಾಲೂಕಿನ ಸಾಹಿತ್ಯ ಚಟುವಟಿಕೆಗಳ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಿ ಬರುವ ವರ್ಷಕ್ಕೆ ಕಾರ್ಯಯೋಜನೆಯನ್ನು ರೂಪಿಸಲಾಯಿತು. ಇದೇ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಅಂಬಾರಿ ಮಂಜು ಮತ್ತು ಈಶ್ವರ್ ಸಿಂಗ್ ರನ್ನು ಸನ್ಮಾನಿಸಲಾಯಿತು.

ಸಭೆಯಲ್ಲಿ ತಾಲೂಕು ಅಧ್ಯಕ್ಷರುಗಳಾದ ಜನಾರ್ಧನ ಮೂರ್ತಿ, ಪ್ರಭಾನಾರಾಯಣಗೌಡ, ಮಂಜುನಾಥ್, ,ಚಿನ್ನ ಕೈವಾರಮಯ್ಯ, ಪಟೇಲ್ ನಾರಾಯಣಸ್ವಾಮಿ, ಎನ್.ವಿ. ಶ್ರೀನಿವಾಸ್, ಯಲುವಹಳ್ಳಿ ಸೊಣ್ಣೆಗೌಡ ಹಾಗೂ ಜಿಲ್ಲಾ ಸಮಿತಿ ಸದಸ್ಯರಾದ ಅಮೃತ್ ಕುಮಾರ್, ಪ್ರೇಮ ಲೀಲಾ ವೆಂಕಟೇಶ್, ಸರ್ದಾರ್ ಚಾಂದ್ ಪಾಷಾ, ಸತೀಶ್, ಮುನಿನಾರಾಯಣಪ್ಪ, ಟಿ.ವಿ.ಚಂದ್ರಶೇಖರ್, ಡಿ.ಎಂ. ಶ್ರೀ ರಾಮಯ್ಯ, ಚಲಪತಿ ಗೌಡ ,ಕೆ ಎಂ ರೆಡ್ಡಪ್ಪ , ಡಾ. ಎಂ.ಶಂಕರ್, ಈಶ್ವರ್ ಸಿಂಗ್ ಮತ್ತಿತರ ಸದಸ್ಯರು ಇದ್ದರು.

Share this article