ಮಣಿಪಾಲ: ಜಗತ್ತಿನಲ್ಲಿ ಕೇವಲ ಪತ್ತೆಯಾಗಿರುವ ಕೇವಲ 15 ಪ್ರಕರಣಗಳಲ್ಲಿ ಒಂದಾದ, 3 ತಿಂಗಳ ಹಸುಳೆಯ ಯಕೃತ್ತಿನಲ್ಲಿ ಕ್ಯಾನ್ಸರ್‌ನಿಂದ ಗಣನೀಯ ಗಾತ್ರದಲ್ಲಿ ಬೆಳೆದಿದ್ದ ಗೆಡ್ಡೆಯನ್ನು ಇಲ್ಲಿನ ಮಾಹೆಯ ಬೋಧನಾ ಆಸ್ಪತ್ರೆಯಾಗಿರುವ ಕಸ್ತೂರ್ಬಾ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿಯಾಗಿ ತೆಗೆದುಹಾಕಿದೆ. ಮಗು ಈಗ ಆರೋಗ್ಯವಾಗಿದ್ದು, ಕ್ಯಾನ್ಸರ್ ಮುಕ್ತವಾಗಿದೆ.
ಗೆಡ್ಡೆಯು ಯಕೃತ್ತಿನ ತೀರಾ ಕೇಂದ್ರ ಭಾಗದಲ್ಲಿದ್ದು, ಪ್ರಮುಖ ರಕ್ತನಾಳಗಳಿಂದ ಸುತ್ತುವರಿಯಲ್ಪಟ್ಟಿತ್ತು. ಇದರಿಂದಾಗಿ ತಕ್ಷಣವೇ ಶಸ್ತ್ರಚಿಕಿತ್ಸೆ ನಡೆಸುವುದು ಸಾಧ್ಯವಿರಲಿಲ್ಲ. ಹಾಗಾಗಿ ಡಾ. ವಾಸುದೇವ ಭಟ್ ನೇತೃತ್ವದ ಮಕ್ಕಳ ಆಂಕೊಲಾಜಿ ವಿಭಾಗದ ತಜ್ಞರ ತಂಡವು ಮೊದಲು ಶಿಶುವಿಗೆ ನಿಯೋಅಡ್ಜುವಂಟ್ ಕೀಮೋಥೆರಪಿ ನೀಡಿ ರೋಗವನ್ನು ನಿಯಂತ್ರಣಕ್ಕೆ ತಂದು, ಶಸ್ತ್ರಚಿಕಿತ್ಸೆ ಸಾಧ್ಯವಾಗುವಂತೆ ಮಾಡಿತು.ಬಳಿಕ ಶಸ್ತ್ರಚಿಕಿತ್ಸಾ ಆಂಕೊಲಾಜಿ ತಂಡವು ಸೆಂಟ್ರಲ್ ಹೆಪ್ಟೆಕ್ಟಮಿ ಶಸ್ತ್ರಚಿಕಿತ್ಸೆ ನಡೆಸಿತು. ಅತ್ಯಂತ ಕ್ಲಿಷ್ಟವಾಗಿದ್ದ ಈ ಶಸ್ತ್ರಚಿಕಿತ್ಸೆಯಲ್ಲಿ ಯಕೃತ್ತಿನ ಹಾನಿಗೊಳಗಾದ ಕೇಂದ್ರ ಭಾಗ ತೆಗೆದುಹಾಕಲಾಯಿತು. ಮತ್ತು ಆರೋಗ್ಯಕರವಾದ ಅಕ್ಕಪಕ್ಕದ ಭಾಗಗಳನ್ನು ಸಂರಕ್ಷಿಸಲಾಯಿತು. ಇದರಿಂದ ಯಕೃತ್ತಿನಲ್ಲಿ ಕತ್ತರಿಸಲಾದ ಅಂಗವು ಪುನರುತ್ಪತ್ತಿಗೊಂಡು ಮಗು ಸಾಮಾನ್ಯಯಾಗಿ ಬೆಳೆಯಲು ಸಾಧ್ಯವಾಗುತ್ತಿದೆ. ಈ ಶಸ್ತ್ರಚಿಕಿತ್ಸೆಯಲ್ಲಿ ರಕ್ತನಾಳಗಳನ್ನು ರಕ್ಷಿಸುವುದಕ್ಕಾಗಿ ಇಂಟ್ರಾಆಪರೇಟಿವ್ ಅಲ್ಟ್ರಾಸೌಂಡ್‌ನ ಸಹಾಯವನ್ನೂ ಪಡೆಯಲಾಯಿತು.ತೊಡಕುಗಳಿಲ್ಲದೇ ಚೇತರಿಕೆಯ ನಂತರ, ಮಗುವನ್ನು ಸ್ಥಿರವಾದ ಆರೋಗ್ಯ ಸ್ಥಿತಿಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಬಿಎಂಜೆ ರಿಪೋರ್ಟ್ಸ್ ದಾಖಲು: ಈ ಶಸ್ತ್ರಚಿಕಿತ್ಸೆಯನ್ನು ಸರ್ಜಿಕಲ್ ಆಂಕೊಲಾಜಿ, ಮಕ್ಕಳ ರಕ್ತಶಾಸ್ತ್ರ ಆಂಕೊಲಾಜಿ ಮಕ್ಕಳ ಶಸ್ತ್ರಚಿಕಿತ್ಸೆ, ನವಜಾತ ಶಿಶುಶಾಸ್ತ್ರ, ವೈದ್ಯಕೀಯ ತಳಿಶಾಸ್ತ್ರ ಮತ್ತು ಅರಿವಳಿಕೆ ವಿಭಾಗಗಳು ಸೇರಿ ಅತ್ಯಂತ ಯಶಸ್ವಿಗೊಳಿಸಿವೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.ಈ ಶಸ್ತ್ರಚಿಕಿತ್ಸೆ ನಡೆಸಿದ ಶಸ್ತ್ರಚಿಕಿತ್ಸಾ ಆಂಕೊಲಾಜಿ ವಿಭಾಗದ ಮುಖ್ಯಸ್ಥ ಡಾ. ನವೀನ್ ಕುಮಾರ್ ಎ.ಎನ್. ಯಶಸ್ಸಿಗೆ ಸಂತಸ ವ್ಯಕ್ತಪಡಿಸಿದ್ದಾರೆ.