ಸೋಮವಾರಪೇಟೆ: ಕಸ್ತೂರಿ ರಂಗನ್ ವರದಿ ಸಂಬಂಧ ಕೇಂದ್ರ ಸರ್ಕಾರ ೭ನೇ ಕರಡು ಅಧಿಸೂಚನೆಯನ್ನು ಅಧಿಕೃತವಾಗಿ ಹೊರಡಿಸಿದ್ದು, ಪ್ರತಿ ಗ್ರಾಮಗಳಲ್ಲಿ ಗ್ರಾಮಸಭೆ ನಡೆಸಿ ಆಕ್ಷೇಪಣೆ ಸಲ್ಲಿಸಬೇಕು ಎಂದು ರೈತ ಹೋರಾಟ ಸಮಿತಿ ಅಧ್ಯಕ್ಷ ಕೆ.ಬಿ. ಸುರೇಶ್ ಮನವಿ ಮಾಡಿದ್ದಾರೆ.
ಪಂಚಾಯಿತಿ ಪಿಡಿಒಗಳು ಗ್ರಾಮ ಸಭೆಗಳನ್ನು ಕರೆದು, ಗ್ರಾಮಸ್ಥರ ಅಕ್ಷೇಪಣೆಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಬೇಕು. ಈ ಬಗ್ಗೆ ಶಾಸಕರು ಜಿಲ್ಲಾಡಳಿತಕ್ಕೆ ಸೂಚನೆ ನೀಡಬೇಕು ಎಂದು ಹೇಳಿದರು.
ಕೇಂದ್ರ ಸರ್ಕಾರ ಪ್ರಕಟಿಸಿರುವ ಹೊಸ ಕರಡು ಸೂಚನೆಯಲ್ಲಿ ಕೊಡಗು ಜಿಲ್ಲೆಯ ೫೩ ಗ್ರಾಮಗಳು ಸೇರಿವೆ. ಪ್ರತಿ ಮೀಸಲು ಅರಣ್ಯದ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಸೂಕ್ಷ್ಮಪರಿಸರ ವಲಯ ಇರಲಿದ್ದು, ಜಿಲ್ಲೆಯ ಬಹುತೇಕ ಗ್ರಾಮಗಳು ವ್ಯಾಪ್ತಿಗೆ ಸೇರಲಿವೆ. ಇವತ್ತು ಕೊಡಗಿನ ಜನರು ಆಕ್ಷೇಪಣೆ ಸಲ್ಲಿಸದಿದ್ದರೆ ಮುಂದೆ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಕೆ.ಎಂ. ದಿನೇಶ್ ಮಾತನಾಡಿ, ಮೂರು ರಾಜಕೀಯ ಪಕ್ಷಗಳ ನಾಯಕರು ರೈತರ ಹೋರಾಟದಲ್ಲಿ ಭಾಗವಹಿಸಿಬೇಕು. ಪ್ರತಿ ಗ್ರಾಮಗಳಿಗೆ ತೆರಳಿ ವರದಿ ಅನುಷ್ಠಾನಕ್ಕೆ ಆಕ್ಷೇಪ ಸಲ್ಲಿಸುವುದಕ್ಕೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು. ವರದಿ ಅನುಷ್ಠಾನಕ್ಕೆ ಅಕ್ಷೇಪಣೆ ಸಲ್ಲಿಸಲು ಇನ್ನು ಕೇವಲ ೫೨ ದಿನಗಳು ಬಾಕಿ ಉಳಿದಿವೆ ಎಂದು ಹೇಳಿದರು.