ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಕಾಂಗ್ರೆಸ್ ಪಕ್ಷದ ವತಿಯಿಂದ ಕಸ್ತೂರಿರಂಗನ್ ವರದಿಯನ್ನು ಕೈಬಿಡುವಂತೆ ಆಗ್ರಹಿಸಿ ಭಿಂತಳ ಗ್ರಾಮದಿಂದ ಆರಂಭಗೊಂಡ ಪಾದಯಾತ್ರೆಯಲ್ಲಿ ಪಾಲ್ಗೊಂಡು ನಂತರ ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ನಡೆದ ಸಭಾ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿ, ಪರಿಸರ ರಕ್ಷಣೆಗೆ ಸಂಬಂಧಿಸಿ ಕಾಂಗ್ರೆಸ್ ಬದ್ದತೆಯನ್ನು ಹೊಂದಿದೆ. ಕೇಂದ್ರ ಸರ್ಕಾರವೇ ಹೇರಿಕೆ ಮಾಡಿರುವ ವರದಿಯ ಬಗ್ಗೆ ಬಿಜೆಪಿ ಸಂಸದರು ಮತ್ತು ಶಾಸಕರು ಪ್ರತಿಭಟನೆ ನಡೆಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು.
ಕಸ್ತೂರಿರಂಗನ್ ವರದಿಯನ್ನು ಲಾಗಾಯ್ತಿನಿಂದಲೂ ಕಾಂಗ್ರೆಸ್ ವಿರೋದಿಸಿಕೊಂಡು ಬಂದಿದೆ. 2013ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದ ಉಪಸಮಿತಿ ಶಿಫಾರಸಿನಂತೆ ಈ ವರದಿಯನ್ನು ಸಾರಸಗಟಾಗಿ ವಿರೋದಿಸಲಾಗಿದೆ. ಈ ವರದಿಯನ್ನು ವಿರೋದಿಸಿ 1555 ಹಳ್ಳಿಗಳನ್ನು ಒಳಗೊಂಡು ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ತಿಳಿಸಿ ಈ ವರದಿ ಜಾರಿಗೆ ನಮ್ಮ ಪೂರ್ಣ ವಿರೋದವಿದ್ದು, ಕಾನೂನು ಹೋರಾಟದ ಬಗ್ಗೆಯೂ ಯೋಚಿಸುವ ಅಗತ್ಯವಿದೆ ಎಂದರು.ತಾಲೂಕಿನಲ್ಲಿ ಈ ಮೊದಲು 139 ಗ್ರಾಮಗಳಿದ್ದು, 7ನೇ ಅಧಿಸೂಚನೆಯಲ್ಲಿ 157 ಗ್ರಾಮಗಳಿಗೆ ಹೆಚ್ಚಿಸಲಾಗಿದೆ. ಈ ವರದಿಯ ವಿಚಾರವಾಗಿ 2016ರಲ್ಲಿ ಕೇಂದ್ರ ಸರ್ಕಾರ ಕರೆದಿದ್ದ ಮಹತ್ವದ ಸಭೆಯಲ್ಲಿ ಭಾಗವಹಿಸದ ಸಂಸದರಾದ ಬಿ.ವೈ.ರಾಘವೇಂದ್ರ ಮತ್ತು ಶೋಭಾ ಕರಂದ್ಲಾಜೆ ಮತ್ತು ವರದಿಯ ಬಗ್ಗೆ ನಾಟಕವಾಡುತ್ತಿರುವ ಬಿಜೆಪಿಯವರಿಗೆ ನಾಚಿಕೆಯಾಗಬೇಕು ಎಂದು ವಾಗ್ದಾಳಿ ನಡೆಸಿದರು.
ನಾನು ಬದುಕಿರುವವರೆಗೂ ಬಿಜೆಪಿ ಸಖ್ಯ ಮಾಡೊಲ್ಲಾ. ನಮ್ಮ ಕಾರ್ಯಕರ್ತರು ಈ ಕ್ಷೇತ್ರದ ಶಾಸಕರಿಂದ ನಿರಂತರ ಕಿರುಕುಳ ಅನುಭವಿಸುತ್ತಿದ್ದಾರೆ. ಆದರೆ ಪಕ್ಷ ಸಂಘಟನೆಗೆ ವಿರುದ್ಧವಾಗಿ ಬಿಜೆಪಿ ಜೊತೆ ಹೆಜ್ಜೆ ಹಾಕುವವರಿದ್ದಾರೆ. ಅಂತವರಿಂದ ಎದುರಿಗಿರುವ ಚುನಾವಣೆ ಎದುರಿಸೋದೇ ಕಷ್ಟವಾಗಿದೆ. ಕಾಲು ಹಿಡೀತೀನಿ ಪಕ್ಷದ ದೃಷ್ಟಿಯಿಂದ ಬಿಜೆಪಿ ಸಖ್ಯ ಬಯಸುವವರು ಇಂದೇ ಹೊರ ಹೋಗುವುದು ಸೂಕ್ತ. ಶ್ರೀರಾಮನ ಹುಂಡಿಯನ್ನೇ ಕದ್ದವರಿಂದ ಪಾಠ ಕಲಿಯಬೇಕಿಲ್ಲ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ವೇತಾ ಬಂಡಿ, ಹಿಂದುಳಿದ ವರ್ಗಗಳ ಸಮಿತಿ ಅಧ್ಯಕ್ಷ ರಮೇಶ್ ಶೆಟ್ಟಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ಶಚ್ಚೀಂದ್ರ ಹೆಗ್ಡೆ, ಎಂ.ಎ.ರಮೇಶ್ ಹೆಗ್ಡೆ, ಪಪಂ ಅಧ್ಯಕ್ಷ ರತ್ನಾಕರ ಶೆಟ್ಟಿ, ಚೇತನ್ ಗೌಡ, ಕೆಸ್ತೂರು ಮಂಜುನಾಥ್, ಮುಡುಬಾ ರಾಘವೇಂದ್ರ, ಡಾ. ಶ್ರೀನಿವಾಸ್ ಕರಿಯಣ್ಣ ಮುಂತಾದವರು ಇದ್ದರು.