ಕೆಪಿಎಸ್‌ಸಿ ಹಗರಣದ ಕಿಂಗ್‌ಪಿನ್‌ ಬಸವರಾಜ ಕನ್ನಾಳೆಗೆ ರಾಜ್ಯಪಾಲರ ಕೋಟಾದಲ್ಲಿ ತುಮಕೂರು ವಿವಿಯ ನಾಮನಿರ್ದೇಶನ ಮಾಡಲಾಗಿತ್ತು. ಅದಕ್ಕೆ ಯಾರು ಶಿಫಾರಸ್ಸು ಮಾಡಿದರು. ಯಾಕೆ ಮಾಡಿದರು ಎಂಬುವುದಕ್ಕೆ ರಾಜ್ಯದ ಜನ ಬಿಜೆಪಿಗರಿಂದ ಉತ್ತರ ಬಯಸಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರಾದ ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಕೆಪಿಎಸ್‌ಸಿ ಹಗರಣದ ಕಿಂಗ್‌ಪಿನ್‌ ಬಸವರಾಜ ಕನ್ನಾಳೆಗೆ ರಾಜ್ಯಪಾಲರ ಕೋಟಾದಲ್ಲಿ ತುಮಕೂರು ವಿವಿಯ ನಾಮನಿರ್ದೇಶನ ಮಾಡಲಾಗಿತ್ತು. ಅದಕ್ಕೆ ಯಾರು ಶಿಫಾರಸ್ಸು ಮಾಡಿದರು. ಯಾಕೆ ಮಾಡಿದರು ಎಂಬುವುದಕ್ಕೆ ರಾಜ್ಯದ ಜನ ಬಿಜೆಪಿಗರಿಂದ ಉತ್ತರ ಬಯಸಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರಾದ ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ ಆಗ್ರಹಿಸಿದರು.ಅವರು ಜಿಪಂ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿ, ಕನ್ನಾಳೆ ಯಾರ ಪಿಎ ಆಗಿ ಕೆಲಸ ಮಾಡಿದ್ದ, ಯಾವ ಶಾಲು ಹಾಕಿಕೊಂಡು ಓಡಾಡುತ್ತಿದ್ದ, ಎಲ್ಲೆಲ್ಲಿ ವಿದೇಶಕ್ಕೆ ಹೋಗಿದ್ದ ಎಂಬುವದನ್ನು ಆ ಪಕ್ಷದವರು ಸ್ಪಷ್ಟ ಪಡಿಸಲಿ. ನನ್ನ ಕ್ಷೇತ್ರದ ವ್ಯಕ್ತಿಯಾಗಿ ಬಂದಿದ್ದಕ್ಕೆ ನಾನು ಸೌಜನ್ಯಕ್ಕೆ ಮಾತ್ರ ಭೇಟಿಯಾಗಿದ್ದೆ ಇಂಥ ನೂರಾರು ಜನ ಬರ್ತಾ ಇರ್ತಾರೆ. ಕೆಪಿಎಸ್‌ಸಿ ಅಕ್ರಮವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ, ಪಾರದರ್ಶಕ ತನಿಖೆ ಆಗುತ್ತಿದೆ. ಎಂಥದ್ದೆ ದೊಡ್ಡ ವ್ಯಕ್ತಿಯಾಗಿದ್ದರೂ ಅವರನ್ನು ಬಿಡೋಲ್ಲ ಎಂದರು.ಸೆ. 21ರಿಂದ ವಿಧಾನಮಂಡಲ ಅಧಿವೇಶನ, ಬರ ಕುರಿತು ಚರ್ಚೆ :

ರಾಜ್ಯದಲ್ಲಿನ ಬರ ಪರಿಸ್ಥಿತಿ, ಕಸ್ತೂರಿರಂಗನ್‌ ವರದಿ, ಕೇಂದ್ರದ ಅಸಹಕಾರ ಸೇರಿದಂತೆ ಮತ್ತಿತರ ವಿಷಯಗಳನ್ನು ಸೆ. 21ರಿಂದ ಮೂರು ದಿನಗಳ ಕಾಲ ವಿಧಾನ ಮಂಡಲ ವಿಶೇಷ ಅಧಿವೇಶನ ಕರೆಯಲಾಗುತ್ತಿದ್ದು ಅಲ್ಲಿ ಎಲ್ಲವನ್ನೂ ಚರ್ಚಿಸಲಾಗುತ್ತದೆ. ರಾಜ್ಯ ಸರ್ಕಾರ ಗ್ಯಾರಂಟಿಗಳ ಮೂಲಕ ಹಾಗೂ ತನ್ನ ಜನಸ್ನೇಹಿ ಆಡಳಿತದ ಮೂಲಕ ಜನ ಮನ ಗೆದ್ದಿದೆ ತನ್ನ ಸಾಧನೆಗಳನ್ನು ಹೇಳಿಕೊಳ್ಳಲು ಸಾಧನಾ ಸಮಾವೇಶ ಮಾಡುತ್ತದೆ ಎಂದರು.ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ, ಸಂಪುಟದಲ್ಲಿ ಚರ್ಚೆ: ಈ ಭಾಗದ ಸ್ವಾತಂತ್ರ್ಯ ಸಂಭ್ರಮದ ನಿಮಿತ್ತ ಸೆಪ್ಟೆಂಬರ್‌ 17ರಂದು ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಜ್ಯ ಸರ್ಕಾರದಿಂದ ಆಯೋಜಿಸಲ್ಪಡುವ ಕಲ್ಯಾಣ ಕರ್ನಾಟಕ ಉತ್ಸವ ಎಂದೆನ್ನುವ ಬದಲಿಗೆ ಕಲ್ಯಾಣ ಕರ್ನಾಟಕ ವಿಮೋಚನಾ ದಿನ, ಸ್ವಾತಂತ್ರ ದಿನ ಎಂದು ಸಂಭೋಧಿಸಿ ಆಚರಿಸುವ ಬಗ್ಗೆ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಗಳ ಗಮನ ಸೆಳೆಯುತ್ತೇನೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಸಚಿವ ಈಶ್ವರ ಖಂಡ್ರೆ ಉತ್ತರಿಸಿದರು.