ಶ್ರೀ ಕೃಷ್ಣ ಉತ್ಸವವು ಜಾತಿ, ಲಿಂಗ, ಧರ್ಮದ ಭೇದವಿಲ್ಲದೆ ಎಲ್ಲರೂ ಸಂಭ್ರಮಿಸುವ ಹಬ್ಬವಾಗಿದೆ. ಪ್ರತಿಯೊಬ್ಬರಲ್ಲೂ ಕೃಷ್ಣ ಜಾಗೃತಿಯಾಗಬೇಕು ಎಂದು ಮೈಸೂರು ಇಸ್ಕಾನ್ ಸಂಸ್ಥೆಯ ಉಪಾಧ್ಯಕ್ಷ ಕಾರುಣ್ಯ ಸಾಗರ ದಾಸ ಹೇಳಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಶ್ರೀ ಕೃಷ್ಣ ಉತ್ಸವವು ಜಾತಿ, ಲಿಂಗ, ಧರ್ಮದ ಭೇದವಿಲ್ಲದೆ ಎಲ್ಲರೂ ಸಂಭ್ರಮಿಸುವ ಹಬ್ಬವಾಗಿದೆ. ಪ್ರತಿಯೊಬ್ಬರಲ್ಲೂ ಕೃಷ್ಣ ಜಾಗೃತಿಯಾಗಬೇಕು ಎಂದು ಮೈಸೂರು ಇಸ್ಕಾನ್ ಸಂಸ್ಥೆಯ ಉಪಾಧ್ಯಕ್ಷ ಕಾರುಣ್ಯ ಸಾಗರ ದಾಸ ಹೇಳಿದರು.ಶ್ರೀಕೃಷ್ಣ ಪ್ರತಿಷ್ಠಾನದ ವತಿಯಿಂದ ನಗರದ ರಥದ ಬೀದಿಯಲ್ಲಿ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ೧೬ನೇ ವರ್ಷದ ಮೊಸರು ಮಡಕೆ ಒಡೆಯುವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು,
ಭಗವಂತನ ನಾಮಸ್ಮರಣೆಯಿಂದ ಜೀವನದ ಕ್ಲೇಶಗಳು ನಿವಾರಣೆಯಾಗಲಿದ್ದು, ಭಗವಂತನ ಸ್ಮರಣೆ, ಸಮಾಜ ಸೇವೆ, ಸಂಸ್ಕೃತಿ ನಿರ್ಮಾಣ ಹಾಗೂ ಆಧ್ಯಾತ್ಮಿಕ ಜಾಗೃತಿಯ ಮೂಲಕ ಮಾನವ ಜನ್ಮ ಸಾರ್ಥಕವಾಗುತ್ತದೆ ಎಂದರು.ಶ್ರೀಕೃಷ್ಣ ಮಾನವ ಮೌಲ್ಯಗಳ ಪ್ರತಿಪಾದಕರಾಗಿದ್ದು, ಧರ್ಮರಕ್ಷಣೆಗಾಗಿ ಅವತರಿಸಿದ ಮಹಾನ್ ಚೇತನ. ಕೃಷ್ಣನ ಸಂದೇಶಗಳು ಜೀವನಕ್ಕೆ ದಾರಿದೀಪವಾಗಲಿದ್ದು, ಆತ್ಮಸಾಕ್ಷಾತ್ಕಾರಕ್ಕಾಗಿ ಭಗವದ್ಗೀತೆಯ ಅಧ್ಯಯನ ಅಗತ್ಯವಾಗಿದೆ. ಚಾಮರಾಜನಗರದಲ್ಲಿ ಸತತ ೧೬ ವರ್ಷಗಳಿಂದ ಶ್ರೀಕೃಷ್ಣ ಜನ್ಮಾಷ್ಠಾಮಿ ಮೂಲಕ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಜಾಗೃತಿ ಮೂಡಿಸುತ್ತಿರುವ ಶ್ರೀಕೃಷ್ಣ ಪ್ರತಿಷ್ಠಾನದ ಕಾರ್ಯ ಅಭಿನಂದನೀಯವಾಗಿದೆ ಎಂದು ಹೇಳಿದರು.
ಮೈಸೂರಿನ ಸಂಸ್ಕೃತಿ ಚಿಂತಕ ಡಾ.ರಘುರಾಮ್ ವಾಜಪೇಯಿ ಮಾತನಾಡಿ, ಮೈಸೂರು ಹಾಗೂ ಚಾಮರಾಜನಗರ ಜ್ಞಾನ, ಆಧ್ಯಾತ್ಮ, ಸಂಸ್ಕೃತ ಹಾಗೂ ಕನ್ನಡ ಸಾಹಿತ್ಯದ ಶ್ರೀಮಂತ ಪರಂಪರೆಯನ್ನು ಹೊಂದಿರುವ ಪ್ರದೇಶಗಳಾಗಿವೆ ಎಂದರು.ಶ್ರೀಕೃಷ್ಣ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಎನ್. ಋಗ್ವೇದಿ ಮಾತನಾಡಿ, ೨೦೧೦ರಿಂದ ನಿರಂತರವಾಗಿ ಶ್ರೀಕೃಷ್ಣ ಜನ್ಮಾಷ್ಠಾಮಿ ಹಾಗೂ ಮೊಸರು ಮಡಿಕೆ ಒಡೆಯುವ ಉತ್ಸವ ಆಯೋಜಿಸಲಾಗುತ್ತಿದೆ ಎಂದರು.
ಉತ್ಸವವು ಅದ್ಧೂರಿಯಾಗಿ ನಡೆಯಿತು. ಕೃಷ್ಣ- ರಾಧೆಯ ವೇಷಧಾರಿಗಳ ಸಂಭ್ರಮ, ಭಜನೆ, ಸಂಕೀರ್ತನೆ ಹಾಗೂ ಮೊಸರು ಮಡಿಕೆ ಒಡೆಯುವ ಕಾರ್ಯಕ್ರಮದೊಂದಿಗೆ ನಗರದಲ್ಲಿ ಕೃಷ್ಣನಾಮದ ಅಲೆ ಸೃಷ್ಟಿಯಾಯಿತು.ಅದ್ಧೂರಿ ಮೆರವಣಿಗೆ:
ಮೊಸರು ಮಡಕೆ ಒಡೆಯುವ ಉತ್ಸವದ ಅಂಗವಾಗಿ ರಥದ ಬೀದಿ, ಚಾಮರಾಜೇಶ್ವರ ದೇವಸ್ಥಾನ, ಭುವನೇಶ್ವರಿ ವೃತ್ತ ಹಾಗೂ ಅಗ್ರಹಾರ ಪ್ರದಕ್ಷಿಣಾ ಪಥದಲ್ಲಿ ಶ್ರೀಕೃಷ್ಣ ನಾಮ ಸಂಕೀರ್ತನೆಯೊಂದಿಗೆ ಭವ್ಯ ಮೆರವಣಿಗೆ ನಡೆಯಿತು. ಮೈಸೂರಿನ ಇಸ್ಕಾನ್ ಭಕ್ತರು ಹರೇ ರಾಮ, ಹರೇ ಕೃಷ್ಣ ಸಂಕೀರ್ತನೆ ನಡೆಸಿ ಭಕ್ತರನ್ನು ರಂಜಿಸಿದರು.ನಗರದಾದ್ಯಂತ ಕೃಷ್ಣ ಹಾಗೂ ರಾಧೆಯ ವೇಷಧರಿಸಿದ ಮಕ್ಕಳು ಬಣ್ಣಬಣ್ಣದ ವೇಷಭೂಷಣಗಳಲ್ಲಿ ಕಾಣಿಸಿಕೊಂಡು ಉತ್ಸವಕ್ಕೆ ಮೆರುಗು ತಂದರು. ಸಾವಿರಾರು ಭಕ್ತರು ಮೆರವಣಿಗೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
ಅಮಚವಾಡಿಯ ಶ್ರೀಕೃಷ್ಣ ತಂಡ, ಅಮಚವಾಡಿ ಬ್ಲೂ ಬಾಯ್ಸ್, ನಗರದ ಸೇವಾ ಭಾರತೀಯ ಮಾಧವ ತಂಡ ಹಾಗೂ ಚಾಮರಾಜನಗರದ ಗೆಳೆಯರ ತಂಡ ಸೇರಿದಂತೆ ಐದು ತಂಡಗಳು ೨೧ ಅಡಿ ಎತ್ತರದ ಮೊಸರು ಮಡಿಕೆ ಒಡೆಯುವ ಹಾಗೂ ಬೆಣ್ಣೆ ತೆಗೆಯುವ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದರು.ಹೂ ಕಟ್ಟುವಿಕೆ, ರಂಗೋಲಿ, ಕಬಡ್ಡಿ ಹಾಗೂ ಕೆಸರುಗದ್ದೆ ಓಟ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿವಿಧ ಮಹಿಳಾ ಸಂಘಟನೆಗಳ ಭಜನಾ ಕಾರ್ಯಕ್ರಮ, ಅವತಾರ್ ಡ್ಯಾನ್ಸ್ ಪ್ರವೀಣ್ ಗ್ರೂಪ್‌ನ ಕೃಷ್ಣ ನೃತ್ಯ, ನಾಟ್ಯ ಸರಸ್ವತಿ ಕಲಾ ಸಂಸ್ಥೆಯ ಅಕ್ಷತಾ ಜೈನ್ ತಂಡದ ನೃತ್ಯ, ಪ್ರತೀಕ್ಷಾ ತಂಡದ ನೃತ್ಯ ಹಾಗೂ ಸುರೇಶ್ ನಾಗ್ ಅವರ ಗಾಯನ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.
ಮೈಸೂರಿನ ಸೈಕಲ್ ಅಗರಬತ್ತಿ ಸಂಸ್ಥೆಯ ವತಿಯಿಂದ ಪ್ರದರ್ಶಿಸಲಾದ ಆರು ಅಡಿ ಎತ್ತರದ, ೨೪ ಗಂಟೆಗಳ ಕಾಲ ನಿರಂತರವಾಗಿ ಉರಿಯುವ ಗಂಧದಕಡ್ಡಿ ವಿಶೇಷ ಗಮನ ಸೆಳೆಯಿತು.ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಬಿಕೆ ದಾನೇಶ್ವರಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಮಚಂದ್ರ, ಉದ್ಯಮಿ ವೆಂಕಟ ನಾಗಪ್ಪ ಶೆಟ್ಟಿ, ಬಸವರಾಜೇಂದ್ರ ಆಸ್ಪತ್ರೆಯ ಡಾ. ಶ್ವೇತಾ ಶಶಿಧರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ದಿನೇಶ್, ಸೈಕಲ್ ಬ್ರಾಂಡ್ ಅಗರಬತ್ತಿ ಸಂಸ್ಥೆಯ ಮಹೇಶ್, ಶ್ರೀಕೃಷ್ಣ ಪ್ರತಿಷ್ಠಾನದ ಪ್ರದೀಪ್ ದೀಕ್ಷಿತ್, ಸುರೇಶ್ ನಾಗ್ ಹರದನಹಳ್ಳಿ, ಶರಣ್ಯ ಎಸ್.ಋಗ್ವೇದಿ, ಸುನೀಲ್, ರಾಮ್ ಪ್ರಸಾದ್ ಇತರರು ಹಾಜರಿದ್ದರು.