ಬರ ಘೋಷಣೆಯಲ್ಲಿ ಆಗುತ್ತಿರುವ ತಾರತಮ್ಯಕ್ಕೆ ಕೇಂದ್ರ ಸರ್ಕಾರವೇ ಹೊಣೆ. ಕೇಂದ್ರದ ಅವೈಜ್ಞಾನಿಕ ಮಾನದಂಡಗಳಿಂದಾಗಿ ರೈತರು ಸಂಕಷ್ಟ ಎದುರಿಸಬೇಕಾಗುತ್ತಿದೆ. ಕೇಂದ್ರದ ಮಾನದಂಡಗಳನ್ನು ಸರಳೀಕರಣಗೊಳಿಸುವಂತೆ ಕೋರಿ ಕೇಂದ್ರಕ್ಕೆ ರಾಜ್ಯ ಸರ್ಕಾರ ಪತ್ರ ಬರೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಸಚಿವ ಈಶ್ವರ ಖಂಡ್ರೆ ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಬರ ಘೋಷಣೆಯಲ್ಲಿ ಆಗುತ್ತಿರುವ ತಾರತಮ್ಯಕ್ಕೆ ಕೇಂದ್ರ ಸರ್ಕಾರವೇ ಹೊಣೆ. ಕೇಂದ್ರದ ಅವೈಜ್ಞಾನಿಕ ಮಾನದಂಡಗಳಿಂದಾಗಿ ರೈತರು ಸಂಕಷ್ಟ ಎದುರಿಸಬೇಕಾಗುತ್ತಿದೆ. ಕೇಂದ್ರದ ಮಾನದಂಡಗಳನ್ನು ಸರಳೀಕರಣಗೊಳಿಸುವಂತೆ ಕೋರಿ ಕೇಂದ್ರಕ್ಕೆ ರಾಜ್ಯ ಸರ್ಕಾರ ಪತ್ರ ಬರೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಸಚಿವ ಈಶ್ವರ ಖಂಡ್ರೆ ಅಸಮಾಧಾನ ವ್ಯಕ್ತಪಡಿಸಿದರು.ಅವರು ಸೋಮವಾರ ಜಿಪಂ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ. ಬರ ಪೀಡಿತ ಪ್ರದೇಶಗಳ ಘೋಷಣೆಯಾಗೋದು, ರಾಜ್ಯ ಸರ್ಕಾರದ ಶಿಫಾರಸ್ಸಿನ ಮೇರೆಗೆ ಅಲ್ಲ ಅದು ಕೇಂದ್ರದ ಉಪಗ್ರಹ ಆಧಾರಿತ ಸೂಚ್ಯಂಕಗಳು, ಬಾಹ್ಯಾಕಾಶ ಸಮೀಕ್ಷೆಯನ್ನೇ ನೆಚ್ಚಿಕೊಂಡು ಕೇಂದ್ರ ಸರ್ಕಾರ ತನ್ನದೇಯಾದ ಬರ ಪೀಡಿತ ಪ್ರದೇಶಗಳ ಮಾನದಂಡಗಳನ್ವಯ ನಿರ್ಧಾರ ಕೈಗೊಳ್ಳುತ್ತದೆ ಎಂದರು.ಹೀಗಾಗಿ ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿಯೂ ಕೇಂದ್ರ ಪತ್ರ ಬರೆದು ಮಾನದಂಡಗಳ ಸರಳೀಕರಣ ಹಾಗೂ ವೈಜ್ಞಾನಿಕ ತಪಾಸಣೆಯನ್ವಯ ಬರ ಘೋಷಣೆ ಮಾಡಿ ಎಂದು ಮನವಿಸಿದ್ದಲ್ಲದೆ ರಾಜ್ಯದ ಕಂದಾಯ ಸಚಿವರು ನಿಯೋಗ ಕೂಡ ತೆರಳಿ ಮನವಿಸಿದ್ದರೂ ಏನೂ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ವಾಡಿಕೆಗಿಂತ ಶೇ.60ಕ್ಕಿಂತ ಕಡಿಮೆ ಮಳೆ ಆಗಿರಬೇಕು, ಮಣ್ಣಿನ ತೇವಾಂಶವನ್ನು ಉಪಗ್ರಹ ಆಧಾರಿತವಾಗಿ, ಬಿತ್ತನೆ ಪ್ರಮಾಣ ಮತ್ತು ಬೆಳೆ ಹಾನಿಯನ್ನು ಆಧರಿಸಿ ಮಾನದಂಡಗಳನ್ವಯ ಕೇಂದ್ರ ನಿರ್ಧಾರ ಕೈಗೊಳ್ಳುತ್ತದೆ ಆದರೆ ಇದು ವೈಜ್ಞಾನಿಕವಾಗಿಲ್ಲ ಎಂಬುವದನ್ನು ತಿಳಿಸಲಾಗಿತ್ತಾದರೆ ಈ ಹಿಂದಿನ ಮುಂಗಾರಿ ನಲ್ಲಿನ ಬರ ಸಂದರ್ಭದಲ್ಲಿ ರಾಜ್ಯಕ್ಕೆ ಎನ್‌ಡಿಆರ್‌ಎಫ್‌ ಅಡಿಯಲ್ಲಿ ಬರಬೇಕಿದ್ದ ಅನುದಾನವನ್ನು ಕೇಂದ್ರ ಬಿಡುಗಡೆ ಮಾಡದೇ ಇದ್ದಾಗ ಸುಪ್ರಿಂ ಕೋರ್ಟ್‌ ಮೊರೆ ಹೋಗಿ ಸೂಚನೆಯ ನಂತರ ಅನುದಾನ ಬಿಡುಗಡೆ ಆಗಿದ್ದನ್ನು ರಾಜ್ಯದ ರೈತರು ಅರಿತುಕೊಳ್ಳಬೇಕು ಎಂದರು.ಸೆಪ್ಟೆಂಬರ್‌ 30ರ ವರೆಗೆ 200 ತಾಲೂಕುಗಳು ಬರ ಪೀಡಿತ, ಘೋಷಣೆ ಸಾಧ್ಯತೆ :

ಸೆಪ್ಟೆಂಬರ್‌ 30ರವರೆಗೆ ಬರದ ಅಧ್ಯಯನ ನಡೆಯುತ್ತೆ ಹೀಗಾಗಿ ಅಲ್ಲಿಯವರೆಗೆ ಸುಮಾರು 180-200 ತಾಲೂಕುಗಳು ಬರದ ಮಾನದಂಡಗಳ ವ್ಯಾಪ್ತಿಗೆ ಬರಲಿವೆ ಎಂಬುವದು ಹಿರಿಯ ಅಧಿಕಾರಿಗಳ ಅಂಬೋಣ ಆಗಿದೆ. ಅಷ್ಟಕ್ಕೂ ಕೇಂದ್ರ ಸರ್ಕಾರಕ್ಕೆ ಮಾನದಂಡಗಳ ಬದಲಾವಣೆ ಮಾಡಿ ಸರಳೀಕರಣ ಮಾಡುವಂತೆ ಕೋರುತ್ತಿದ್ದೇವೆ. ಈ ಕುರಿತು ಇದೀಗ ಕೇಂದ್ರ ಸರ್ಕಾರ ಬರ ಘೋಷಣೆ ಮತ್ತು ಬರ ಪರಿಹಾರ ಕುರಿತು ಸಮಿತಿಯನ್ನು ರಚನೆ ಮಾಡಿದ್ದು, ಅದು ಸದರಿ ಮಾನದಂಡಗಳ ಬಗ್ಗೆ ಮತ್ತು ಪರಿಹಾರ ಮೊತ್ತದ ಹೆಚ್ಚಳ ಕುರಿತು ನಿರ್ಧಾರ ಕೈಗೊಳ್ಳುತ್ತದೆ. ದೇಶದ ಎಲ್ಲ ರಾಜ್ಯ ಸರ್ಕಾರಗಳ ಅನಿಸಿಕೆಗಳನ್ನು ಪಡೆದು ಮುಂದಿನ ವರ್ಷದ ವರೆಗೆ ಜಾರಿಗೊಳಿಸಬಹುದೆಂಬ ಆಶಾಭಾವ ನಮಗಿದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಕಲಬುರಗಿ, ಬೆಳಗಾವಿ ಹಾಗೂ ಮೈಸೂರು ವಿಭಾಗ ಮಟ್ಟದಲ್ಲಿ ಸರಣಿ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಿ ಪರಿಸ್ಥಿತಿಯನ್ನು ಪರಾಮರ್ಶಿಸಲಾಗಿದೆ. ರಾಜ್ಯದಲ್ಲಿ ಕುಡಿಯುವ ನೀರಿನ ನಿರ್ವಹಣೆಗಾಗಿ ಸರ್ಕಾರ ಇದುವರೆಗೆ ಒಟ್ಟು 306 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. ಇದರಲ್ಲಿ ಗ್ರಾಮೀಣ ಭಾಗದ ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೆ ತಲಾ 1 ಕೋಟಿ ರೂಪಾಯಿಯಂತೆ 189 ಕೋಟಿ ರುಪಾಯಿ ಹಾಗೂ ಕ್ರಿಯಾ ಯೋಜನೆಗೆ ಸಂಬಂಧಿಸಿದಂತೆ 110 ಕೋಟಿ ರೂಪಾಯಿಗೆ ಅನುಮೋದನೆ ನೀಡಲಾಗಿದೆ. ಅಲ್ಲದೆ, ಬೀದರ್‌ ಜಿಲ್ಲೆಗೆ ಈಗಾಗಲೇ ಬಿಡುಗಡೆಯಾಗಿರುವ 4 ಕೋಟಿ ರುಪಾಯಿ ಜೊತೆಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 6 ಕೋಟಿ ರುಪಾಯಿ ಹೆಚ್ಚುವರಿ ಅನುದಾನ ಒದಗಿಸಲಾಗಿದೆ ಎಂದು ಸಚಿವ ಖಂಡ್ರೆ ತಿಳಿಸಿದರು.ಈ ಸಂದರ್ಭ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಪಂ ಸಿಇಒ ಗಿತ್ತೆ ಮಾಧವ ವಿಠಲರಾವ್‌, ಎಸ್‌ಪಿ ಪ್ರದೀಪ ಗುಂಟಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮೀತ್‌ ಸುಭಾಷರಾವ್‌ ಪಾಟೀಲ್‌ ಇದ್ದರು.

ಕೇಂದ್ರದ ತಾರತಮ್ಯ, 2168 ಕೋಟಿ ರು. ಬಿಡುಗಡೆ ಮಾಡುವಲ್ಲಿ ವಿಳಂಬ: ರಾಜ್ಯದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಇಲಾಖೆಗೆ 15ನೇ ಹಣಕಾಸು ಯೋಜನೆಯಡಿ 2168.20ಕೋಟಿ ರು. ಹಂಚಿಕೆಯಾಗಿದ್ದರೂ ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿಲ್ಲ ಇದಕ್ಕೆ ರಾಜ್ಯ ಸರ್ಕಾರದಿಂದ ಕೊಟ್ಟಿರುವ ಮಾಹಿತಿ ಹೊಂದಾಣಿಕೆಯಾಗಿಲ್ಲ ಮತ್ತು ಗ್ರಾಪಂಗಳಿಗೆ ಸೂಕ್ತ ಅನುದಾನ ಬಿಡುಗಡೆ ಮಾಡಿಲ್ಲ ಎಂಬ ನೆಪ ಮುಂದಿಟ್ಟು ಇತರೆ ರಾಜ್ಯಗಳಿಗೆ ಅನುದಾನ ಬಿಡುಗಡೆ ಮಾಡಿ ಕರ್ನಾಟಕಕ್ಕೆ ಬಿಡುಗಡೆ ಮಾಡದೇ ತಾರತಮ್ಯ ಮಾಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಈಶ್ವರ ಖಂಡ್ರೆ ಆರೋಪಿಸಿದರು.

ಸಿಎಂ ಡಿಕೆಶಿ ಕ್ಷೇತ್ರವೂ ಬರ ಘೋಷಣೆಯಾಗಿಲ್ಲ: ನನ್ನ ಸ್ವಕ್ಷೇತ್ರ ಭಾಲ್ಕಿ ತಾಲೂಕನ್ನು ಬರ ಪೀಡಿತವಾಗಿದ್ದರೂ ಘೋಷಣೆ ಸಾಧ್ಯವಾಗಿರಲಿಲ್ಲ ಅಷ್ಟೇ ಏಕೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಅವರ ತವರು ಕನಕಪುರದಲ್ಲಿಯೂ ಮಳೆಯಾಗದೇ ರೈತರು ಸಂಕಷ್ಟದಲ್ಲಿದ್ದಾರೆ. ಆದರೂ ಬರ ಪೀಡಿತ ಪಟ್ಟಿಯಲ್ಲಿ ಇಲ್ಲ. ರಾಜ್ಯ ಸರ್ಕಾರದ ಬಯಕೆ ಇಲ್ಲಿ ನಡೆಯೋಲ್ಲ ಎಂಬುವದನ್ನು ಅರ್ಥ ಮಾಡಿಕೊಳ್ಳಬೇಕೆಂದರು.