ರಂಗೂಪುರ ಶಿವಕುಮಾರ್
ಪಶ್ಚಿಮ ಘಟ್ಟಕ್ಕೆ ಸಂಬಂಧಿಸಿದ ಕಸ್ತೂರಿ ರಂಗನ್ ವರದಿ ಜಾರಿಯಾದರೆ ತಾಲೂಕಿನ ಚನ್ನಮಲ್ಲಿಪುರ,ಮದ್ದೂರು, ಬೇರಂಬಾಡಿ, ಕಳ್ಳೀಪುರ ಸೇರಿದಂತೆ ೨೦ ಹಳ್ಳಿಗಳು ಬಂದ್ ಆಗುತ್ತವೆ. ರೈತರು ಮನೆ ಕಟ್ಟುವಂತಿಲ್ಲ,ಕೃಷಿ ಮಾಡುವಂತಿಲ್ಲ ಎಂಬ ಸುಳ್ಳು ಸುದ್ದಿ ಹಬ್ಬಿದೆ. ಆದರೆ ವಾಸ್ತವವೇ ಬೇರೆ.
ಈ ಹಳ್ಳಿಗಳು ಈಗಾಗಲೇ ಇಎಸ್‌ಝಡ್‌ನಲ್ಲಿವೆ. ಕಸ್ತೂರಿ ರಂಗನ್ ವರದಿಯಲ್ಲಿ ಸೇರಿಸಲಾಗಿದೆ ಎನ್ನಲಾದ ಜಿಲ್ಲೆಯ ೨೦ ಹಳ್ಳಿಗಳು ಈಗಾಗಲೇ ಹಲವು ವರ್ಷಗಳ ಹಿಂದೆಯೇ ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಯಲ್ಲಿವೆ. ಬಂಡೀಪುರ, ಬಿಳಿಗಿರಿರಂಗನ ಬೆಟ್ಟದ ಸುತ್ತ ಮುತ್ತಲಿನ ಹಳ್ಳಿಗಳಿಗೆ ಈ ನಿಯಮ ಆಗಲೇ ಅನ್ವಯವಾಗಿದೆ ಎಂದು ತಿಳಿದು ಬಂದಿದೆ.ಇಎಸ್‌ಝಡ್ ಮತ್ತು ಇಎಸ್‌ಎ ಬೇರೆ ಬೇರೆ.ಇಲ್ಲಿನ ಜನರಿಗೆ ಆಗುತ್ತಿರುವ ದೊಡ್ಡ ಗೊಂದಲ ಏನಂದರೆ ಇಎಸ್‌ಝಡ್ ಮತ್ತು ಇಎಸ್‌ಎ ನಡುವಿನ ವ್ಯತ್ಯಾಸ ತಿಳಿಯದೇ ಇರುವುದು.
ಇದು ರಾಷ್ಟ್ರೀಯ ಉದ್ಯಾನದ ಸುತ್ತ ೧೦ ಕಿಮೀ ವ್ಯಾಪ್ತಿ. ಇದನ್ನು ಅರಣ್ಯ ಇಲಾಖೆ ನೋಡಿಕೊಳ್ಳುತ್ತದೆ.
ಇದು ಕಸ್ತೂರಿ ರಂಗನ್ ವರದಿ ಪ್ರಕಾರ ಘೋಷಣೆಯಾಗಬೇಕಿರುವುದು. ಇದು ಇಡೀ ಪಶ್ಚಿಮ ಘಟ್ಟದ ಜೀವವೈವಿಧ್ಯವನ್ನು ಕಾಪಾಡುವ ಯೋಜನೆಯಾಗಿದೆ. ಕಸ್ತೂರಿ ರಂಗನ್ ವರದಿಯ ಇಎಸ್‌ಎ ಘೋಷಣೆಯಾದರೂ, ೨೦ ಹಳ್ಳಿಗಳಲ್ಲಿ ಈಗಿರುವ ಇಎಸ್‌ಝಡ್‌ನ ನಿರ್ಬಂಧಗಳಿಗಿಂತ ಒಂದು ಹೆಚ್ಚುವರಿ ಹೊಸ ನಿರ್ಬಂಧವೂ ಜಾರಿಯಾಗುವುದಿಲ್ಲ. ಅಂದರೆ, ಈಗ ಮನೆ ಕಟ್ಟಲು, ಕೃಷಿ ಮಾಡಲು ಇರುವ ನಿಯಮವೇ ಮುಂದೆಯೂ ಇರುತ್ತದೆ. ಹೊಸದಾಗಿ ಏನೂ ನಿಷೇಧವಿಲ್ಲ ಎನ್ನಲಾಗಿದೆ.
ಮೂಲ ಕಾರಣಗಳು ಜನರು ಈ ವರದಿಯನ್ನು ವಿರೋಧಿಸಲು ಕಾರಣ ಪರಿಸರ ಪ್ರೇಮವಲ್ಲ,ಬದಲಿಗೆ ಆಡಳಿತ ವೈಫಲ್ಯ ಮತ್ತು ತಪ್ಪು ಮಾಹಿತಿ.
ಕಸ್ತೂರಿರಂಗನ್ ವರದಿಯನ್ನು ತಯಾರಿಸಿದ ಕೇಂದ್ರದ ಸಮಿತಿಗಳು,ಸಂಸ್ಥೆಗಳು ಈ ವರದಿಯನ್ನು ಕನ್ನಡಕ್ಕೆ ತರ್ಜುಮೆ ಮಾಡಿ ಸ್ಥಳೀಯ ಪಂಚಾಯತಿಗಳಿಗೆ ತಲುಪಿಸಲೇ ಇಲ್ಲ.೫೦೦ ಪುಟದ ಇಂಗ್ಲಿಷ್ ವರದಿ ನೋಡಿ,ಯಾರೋ ಹೇಳಿದ್ದನ್ನು ಕೇಳಿ ಜನರು ಗೊಂದಲಕ್ಕೀಡಾಗಿದ್ದಾರೆ. ಸರ್ಕಾರವೇ ಊಹಾಪೋಹಕ್ಕೆ ಎಡೆಮಾಡಿಕೊಟ್ಟಿದೆ.
ಪರಿಸರ ಸೂಕ್ಷ್ಮ ವಲಯದ (ಇಎಸ್‌ಜೆಡ್) ಕಾನೂನಿನಲ್ಲಿ ರೈತರು ಮನೆ ಕಟ್ಟಲು ಅರಣ್ಯ ಇಲಾಖೆ ಅನುಮತಿ ಬೇಕು ಎಂದು ಎಲ್ಲಿಯೂ ಇಲ್ಲ. ಆದರೆ ಕೆಲವು ಕಡೆ ಕೆಲ ಪರಿಸರವಾದಿಗಳ ಕುಮ್ಮಕ್ಕಿನಿಂದ, ಕೆಲ ಅರಣ್ಯ ಸಿಬ್ಬಂದಿ ಜನರಿಗೆ ಮನೆ ಕಟ್ಟಲು ನಮ್ಮ ಅನುಮತಿ ಬೇಕು ಎಂದು ಹೇಳಿ ಕಿರುಕುಳ ನೀಡಿದ್ದು, ಹಣ ವಸೂಲಿ ಮಾಡಿದ್ದು ಸತ್ಯ.ಇದರಿಂದಾಗಿ ಜನರಿಗೆ ಯಾವುದೇ ಹೊಸ ಪರಿಸರ ಕಾನೂನು ಬಂದರೂ ಅದು ತಮಗೆ ತೊಂದರೆ ಕೊಡುತ್ತದೆ ಎಂಬ ಭಯ ಬಂದಿದೆ.
ಇಎಸ್‌ಝಡ್ ಮತ್ತು ಇಎಸ್‌ಎ ಎರಡರಲ್ಲೂ ಗಣಿಗಾರಿಕೆ ಮತ್ತು ಕೆಂಪು ಪಟ್ಟಿಯ ಅಪಾಯಕಾರಿ ಕಾರ್ಖಾನೆಗಳಿಗೆ ನಿಷೇಧವಿದೆ. ಜಿಲ್ಲೆಯ ಕಲ್ಲು ಗಣಿಗಾರಿಕೆ, ಕ್ರಷರ್ ಮಾಲೀಕರು ತಮ್ಮ ಆರ್ಥಿಕ ಲಾಭಕ್ಕೆ ಧಕ್ಕೆ ಬರುತ್ತದೆ ಎಂದು ನಿಮ್ಮ ಜಮೀನು ಸರ್ಕಾರ ತೆಗೆದುಕೊಳ್ಳುತ್ತದೆ ಎಂದು ತಪ್ಪು ಮಾಹಿತಿ ಹಬ್ಬಿಸಿ ಮುಗ್ಧ ರೈತರನ್ನು ಮುಂದೆ ಬಿಟ್ಟಿದ್ದಾರೆ.
ಕಸ್ತೂರಿ ರಂಗನ್ ವರದಿ ನೆಪ: ಪರಿಸರ ತಜ್ಞ ಸಂಜಯ್ ಗುಬ್ಬಿಪರಿಸರ ಸೂಕ್ಷ್ಮ ಪ್ರದೇಶಕ್ಕೂ (ಇಎಸ್‌ಎ) ಅರಣ್ಯ ಇಲಾಖೆಗೂ ಯಾವುದೇ ಸಂಬಂಧವಿಲ್ಲ ಎಂದು ಪರಿಸರ ತಜ್ಞ ಸಂಜಯ್ ಗುಬ್ಬಿ ಹೇಳಿದ್ದಾರೆ.
ಕನ್ನಡಪ್ರಭದೊಂದಿಗೆ ಮಾತನಾಡಿ, ಕಾನೂನಿನ ಪ್ರಕಾರ ಇದರ ಅನುಷ್ಠಾನ ಮಾಡಬೇಕಿರುವುದು ಜಿಲ್ಲಾಡಳಿತವೇ ಹೊರತು ಅರಣ್ಯ ಇಲಾಖೆಯಲ್ಲ. ರೈತರು ಆತಂಕ ಪಡುವ ಅಗತ್ಯವಿಲ್ಲಎಂದು ಸ್ಪಷ್ಟಪಡಿಸಿದ್ದಾರೆ.ಕಸ್ತೂರಿ ರಂಗನ್ ವರದಿ ರೈತರ ವಿರೋಧಿಯಲ್ಲ. ಆದರೆ ಅದನ್ನು ಜನರಿಗೆ ಸರಿಯಾಗಿ ತಲುಪಿಸದ ಸರ್ಕಾರ, ಕಿರುಕುಳ ನೀಡಿದ ಕೆಲ ಅಧಿಕಾರಿಗಳು ಮತ್ತು ತಪ್ಪು ಮಾಹಿತಿ ಹಬ್ಬಿಸಿದ ಗಣಿ ಲಾಬಿಯೇ ಈ ಗೊಂದಲಕ್ಕೆ ಕಾರಣ ಎಂದಿದ್ದಾರೆ.