ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಪರಿಸರದೊಂದಿಗೆ ಬದುಕುತ್ತಿರುವ ಮಲೆನಾಡಿನ ಜನರನ್ನೇ ಸಂಕಷ್ಟಕ್ಕೆ ಸಿಲುಕಿಸುವ ಯಾವುದೇ ಕ್ರಮವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಬಿಜೆಪಿ ನಾಯಕರು ನಾವು ಮಲೆನಾಡಿನ ರೈತರ ಪರವಾಗಿ ಮಾತನಾಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಕಸ್ತೂರಿ ರಂಗನ್ ವರದಿ ವಿರೋಧಿಸಿ ಪಾದಯಾತ್ರೆ, ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಈ ವರದಿಯ ಜಾರಿಗೆ ನೀವು ಏಕೆ ಕರಡು ಅಧಿಸೂಚನೆ ಹೊರಡಿಸುತ್ತಿದ್ದೀರಿ ಎಂದು ಪಕ್ಷದ ಕೇಂದ್ರ ನಾಯಕರನ್ನು ಪ್ರಶ್ನಿಸುವ ಧೈರ್ಯ ಅವರಿಗಿಲ್ಲ ಎಂದು ಕುಟುಕಿದರು.
2014ರ ಆಗಸ್ಟ್ 27 ರಂದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿಯನ್ನು ಜಾರಿಗೆ ತರುತ್ತೇವೆ ಎಂದು ಸುಪ್ರೀಂ ಕೋರ್ಟ್‌ನ ಹಸಿರು ನ್ಯಾಯಾಧಿಕರಣಕ್ಕೆ ಅಫಿಡವಿಟ್ ಸಲ್ಲಿಸಿದ್ದು ಏಕೆ? ಇಂದು ಮಲೆನಾಡಿನ ಜನರ ಮುಂದೆ ಮೊಸಳೆ ಕಣ್ಣೀರು ಹಾಕುವವರು ಅಂದು ಏಕೆ ಮಾತನಾಡಲಿಲ್ಲ ಎಂದು ಪ್ರಶ್ನಿಸಿದ ಅವರು, ಕಸ್ತೂರಿ ರಂಗನ್ ವರದಿ ಕರಡು ಅಧಿಸೂಚನೆಯನ್ನು ನಾವು ಆರು ಬಾರಿಯೂ ಸ್ಪಷ್ಟವಾಗಿ ತಿರಸ್ಕರಿಸಿದ್ದೇವೆ ಎಂದರು.ಈ ಸಂಬಂಧ ಚರ್ಚಿಸಲೆಂದೇ ವಿಶೇಷ ಅಧಿವೇಶನ ಕರೆಯುವ ತೀರ್ಮಾನವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೆಗೆದುಕೊಂಡಿದ್ದಾರೆ. ಯಾವ ಕಾರಣಕ್ಕೂ ಈ ವರದಿ ಜಾರಿಗೆ ಅವಕಾಶ ನೀಡಬಾರದು, ಬಿಜೆಪಿಯವರು, ಕೇಂದ್ರ ಸರ್ಕಾರದವರು ಏನು ಬೇಕಾದರೂ ಮಾಡಿಕೊಳ್ಳಲಿ, ಇದಕ್ಕೆ ನಾವೇ ಬೇಕಾದರೂ ನ್ಯಾಯಾಲಯಕ್ಕೆ ಹೋಗಿ ಮಲೆನಾಡಿನ ಜನರನ್ನು ರಕ್ಷಿಸೋಣ ಎಂದು ಅವರು ಹೇಳಿದ್ದಾರೆ ಎಂದರು.
ಹಳ್ಳಿಗಳ ಸಂಖ್ಯೆ ಹೆಚ್ಚಾಗಿದ್ದು ಹೇಗೆ?: ಮೊದಲ ಆರು ಅಧಿಸೂಚನೆಗಳಲ್ಲಿ ತೀರ್ಥಹಳ್ಳಿ ತಾಲೂಕಿನ 139 ಗ್ರಾಮಗಳ ಪಟ್ಟಿಯನ್ನು ಪ್ರಸ್ತಾಪಿಸಲಾಗಿತ್ತು. ಇದನ್ನು ತೀರ್ಥಹಳ್ಳಿಯ ಜನರು ಹಾಗೂ ಕರ್ನಾಟಕ ಸರ್ಕಾರ ವಿರೋಧಿಸಿತ್ತು. ಆದರೆ ಇದೀಗ ಅಂತಿಮ ಅಧಿಸೂಚನೆಯ ಹೆಸರಿನಲ್ಲಿ ತೀರ್ಥಹಳ್ಳಿ ತಾಲೂಕಿನ ಗ್ರಾಮಗಳ ಸಂಖ್ಯೆಯನ್ನು 154ಕ್ಕೆ ಹೆಚ್ಚಿಸುವ ಪ್ರಯತ್ನ ನಡೆದಿದೆ. ಈ ಬಗ್ಗೆ ಸ್ಥಳೀಯ ಶಾಸಕ ಆರಗ ಜ್ಞಾನೇಂದ್ರ ಅವರು ಏನು ಹೇಳುತ್ತಾರೆ ಎಂಬ ಕುತೂಹಲವಿದೆ ಎಂದರು. ಕಸ್ತೂರಿರಂಗನ್ ವರದಿ ಜಾರಿ ವಿರುದ್ಧ ನಾವು ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದು, ಈ ಸಂಬಂಧ ಈಗ ತೀರ್ಥಹಳ್ಳಿಯಲ್ಲಿ ಪಾದಯಾತ್ರೆ ಮಾಡುತ್ತಿದ್ದೇವೆ ಎಂದರು.
ಬಂಗಾರಪ್ಪ ಅವರ ಹಾದಿಯಲ್ಲಿ ಮುಖ್ಯಮಂತ್ರಿ: ಹಿಂದೆ ನಮ್ಮ ತಂದೆ ಬಂಗಾರಪ್ಪ ಅವರು ಕಾವೇರಿ ನೀರು ವಿಚಾರವಾಗಿ ವಿಶೇಷ ಅಧಿವೇಶನ ಕರೆದಿದ್ದರು. ಇಂದು ನಾನು ಬಂಗಾರಪ್ಪ ಅವರ ಶಿಷ್ಯ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅವರದ್ದೇ ಹಾದಿಯಲ್ಲಿ ನಡೆದು ಕಸ್ತೂರಿ ರಂಗನ್ ವಿಚಾರವಾಗಿ ವಿಶೇಷ ಅಧಿವೇಶನ ಕರೆದಿದ್ದಾರೆ. ಇದಕ್ಕಾಗಿ ಮುಖ್ಯಮಂತ್ರಿಗಳಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದರು. ಸಿದ್ದರಾಮಯ್ಯ ಅವರೊಂದಿಗೆ ಕೆಲಸ ಮಾಡಿದ್ದು ನನ್ನ ಭಾಗ್ಯ. ನಮ್ಮ ತಂದೆಯವರ ಕೈಯಲ್ಲಿ ಸಚಿವರಾಗಿ ಡಿ.ಕೆ. ಶಿವಕುಮಾರ್ ಅವರು ಕೆಲಸ ಮಾಡಿದ್ದರು. ಇಂದು ನಾನು ಡಿ.ಕೆ. ಶಿವಕುಮಾರ್ ಅವರ ಅಡಿಯಲ್ಲಿ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.