ಹೊನ್ನಾವರ: ಯಕ್ಷಗಾನದ ತೆಂಕು- ಬಡಗು ತಿಟ್ಟಿನ ಅಗ್ರಮಾನ್ಯ ಭಾಗವತರಾಗಿದ್ದ ದಿ. ಕಡತೋಕಾ ಮಂಜುನಾಥ ಭಾಗವತರ ನೆನಪಿನ ಯಕ್ಷರಂಗೋತ್ಸವ ನ. ೨೩ ಮತ್ತು ೨೪ ಎರಡು ದಿನ ತಾಲೂಕಿನ ಕಡತೋಕಾದ ಜನತಾ ವಿದ್ಯಾಲಯದಲ್ಲಿ ಅದ್ಧೂರಿಯಾಗಿ ನಡೆಯಲಿದೆ ಎಂದು ಕೆಡಿಸಿಸಿ ಬ್ಯಾಂಕ್ ನಿರ್ದೇಶಕರು ಸಂಘಟನಾ ಸಮಿತಿ ಅಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಹಳದೀಪುರದ ಯಕ್ಷಲೋಕ ಸಂಸ್ಥೆಯು ಈ ಯಕ್ಷರಂಗೋತ್ಸವವನ್ನು ಕಳೆದ ಹನ್ನೆರಡು ವರ್ಷಗಳಿಂದ ಆಯೋಜಿಸುತ್ತಾ ಬಂದಿದೆ. ಯಕ್ಷಂಗೋತ್ಸವವು ಯಕ್ಷಗಾನಕ್ಕೆ ಮೀಸಲಾದ ಮಾಸಪತ್ರಿಕೆ ಯಕ್ಷರಂಗದ ಸಂಯೋಜನೆಯಲ್ಲಿ ಹಳದೀಪುರ, ಕುಮಟಾ, ಕಡತೋಕಾಗಳಲ್ಲಿ ನಡೆದಿದೆ ಎಂದರು.
ಯಕ್ಷಗಾನದ ವೇಷಭೂಷಣ ತಜ್ಞ ಲಕ್ಷ್ಮಣ ನಾಯ್ಕ ಮಂಕಿ ಹಾಗೂ ಹಿರಿಯ ಪತ್ರಕರ್ತ ಗಣಪತಿ ಶಿರಳಗಿ ಅವರನ್ನು ಕಡತೋಕಾ ಕೃತಿ ಸ್ಮೃತಿ ಪುರಸ್ಕಾರವನ್ನು ನೀಡಿ ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ನಂತರ ಕಾರ್ತವೀರ್ಯಾಜುನ ಎಂಬ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದರು.
ನ. 24ರಂದು ಬೆಳಗ್ಗೆ ೧೦ ಗಂಟೆಗೆ ತಾಳಮದ್ದಳೆ ಅರ್ಥಗಾರಿಕೆಯ ಕುರಿತು ವಿನೂತನವಾದ ಚಿಂತನ ಕಮ್ಮಟ ನಡೆಯಲಿದೆ. ತಾಳಮದ್ದಳೆ ಅರ್ಥಚಿಂತನ ಕಮ್ಮಟ ಎಂಬ ಶೀರ್ಷಿಕೆಯಡಿಯಲ್ಲಿ ನಡೆಯುವ ಕಮ್ಮಟವನ್ನು ಯಕ್ಷಗಾನ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಡಾ. ಜಿ.ಎಲ್. ಹೆಗಡೆ ಉದ್ಘಾಟಿಸುವರು.ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಅಧ್ಯಕ್ಷತೆಯಲ್ಲಿ ನಡೆಯುವ ಕಮ್ಮಟದಲ್ಲಿ ಖ್ಯಾತ ಅರ್ಥಧಾರಿಗಳಾದ ನಾರಾಯಣ ಯಾಜಿ ಸಾಲೆಬೈಲು, ಹಿರಣ್ಯ ವೆಂಕಟೇಶ ಭಟ್, ವಾಸುದೇವ ರಂಗಾಭಟ್ ಹಾಗೂ ಮೋಹನ ಹೆಗಡೆ ಹೆರವಟ್ಟಾ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಉತ್ಸವದ ಕೊನೆಯಲ್ಲಿ ಪ್ರಸಿದ್ಧ ಅರ್ಥಧಾರಿ ಡಾ. ಎಂ. ಪ್ರಭಾಕರ ಜೋಶಿ, ವಿದ್ವಾನ್ ಉಮಾಕಾಂತ ಭಟ್ ಕೆರೆಕೈ, ಹಿರಣ್ಯ ವೆಂಕಟೇಶ ಭಟ್ ಹಾಗೂ ವಾಸುದೇವ ರಂಗಾ ಭಟ್ ಅವರು ಅರ್ಥಧಾರಿಗಳಾಗಿ ವಾಮನ ಚರಿತ್ರೆ ಎಂಬ ತಾಳಮದ್ದಳೆಯನ್ನು ನಡೆಸಿಕೊಡುವರು ಎಂದು ನ್ಯಾಯವಾದಿ ಸತೀಶ ಭಟ್ ಮಾಹಿತಿ ನೀಡಿದರು.ಯಕ್ಷರಂಗದ ಸಂಪಾದಕ ಕಡತೋಕಾ ಗೋಪಾಲಕೃಷ್ಣ ಭಾಗವತ, ನಾರಾಯಣ ಹೆಗಡೆ ನವಿಲಗೋಣ ಉಪಸ್ಥಿತರಿದ್ದರು.