ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ
ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬಾಲಿವುಡ್ ಖ್ಯಾತ ನಟಿ ಕತ್ರಿನಾ ಕೈಫ್ ಸ್ನೇಹಿತರೊಂದಿಗೆ ಮಂಗಳವಾರ ಆಗಮಿಸಿದರು. ಕ್ಷೇತ್ರದಲ್ಲಿ ಮಂಗಳವಾರ ಹಾಗೂ ಬುಧವಾರ ಉಳಿದುಕೊಳ್ಳಲಿರುವ ಅವರು, ಸರ್ಪ ಸಂಸ್ಕಾರ ಸೇವೆ ಹಾಗೂ ನಾಗಪ್ರತಿಷ್ಠೆ ಪೂಜೆಗಳಲ್ಲಿ ಭಾಗಿಯಾಗಲಿದ್ದಾರೆ.ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ ಕತ್ರಿನಾ ಕೈಫ್ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಸೇವೆ ನೆರವೇರಿಸಲಿದ್ದಾರೆ. ಮಂಗಳವಾರ ಮುಂಜಾನೆ ಆದಿ ಸುಬ್ರಹ್ಮಣ್ಯದ ಸರ್ಪ ಸಂಸ್ಕಾರ ಯಾಗಶಾಲೆಯಲ್ಲಿ ಮೊದಲ ದಿನದ ಸರ್ಪಸಂಸ್ಕಾರ ಪೂಜೆಯಲ್ಲಿ ಪಾಲ್ಗೊಂಡರು. ಕುಕ್ಕೆ ಸುಬ್ರಹ್ಮಣ್ಯದ ಖಾಸಗಿ ವಸತಿ ಗೃಹದಲ್ಲಿ ವಾಸ್ತವ್ಯ ಮಾಡಿರುವ ಅವರು ಬುಧವಾರ ಮುಂಜಾನೆ ೬ ಗಂಟೆಗೆ ಎರಡನೇ ದಿನದ ಪೂಜೆಯನ್ನು ನೆರವೇರಿಸಲಿದ್ದಾರೆ. ಬಳಿಕ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಧ್ಯಾಹ್ನದ ಮಹಾಪೂಜೆಯ ನಂತರ ನಡೆಯುವ ನಾಗಪ್ರತಿಷ್ಠೆ ಸೇವೆ ನೆರವೇರಿಸಲಿದ್ದಾರೆ. ಬಳಿಕ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ, ಪ್ರಾರ್ಥನೆ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.
ಸರ್ಪಸಂಸ್ಕಾರ ಮೊದಲ ದಿನದ ಪೂಜೆಯ ಮೊದಲು ಕತ್ರಿನಾ ಸಂತಾನ ಪ್ರಾಪ್ತಿ, ವೃತ್ತಿ ಜೀವನದ ಅಭಿವೃದ್ಧಿ ಸೇರಿದಂತೆ ಕುಟುಂಬಕ್ಕೆ ಒಳ್ಳೆಯದಾಗಲಿ ಎಂಬಂತೆ ಅರ್ಚಕರ ಮುಖಾಂತರ ಸಂಕಲ್ಪ ನೆರವೇರಿಸಿದ್ದಾರೆ ಎನ್ನಲಾಗಿದೆ. ಸರ್ಪಸಂಸ್ಕಾರದ ಪ್ರಧಾನ ಅರ್ಚಕ ನಂದಕಿಶೋರ್ ಹಾಗೂ ಕ್ರಿಯಾಕರ್ತೃ ಸುಧೀರ್ ಭಟ್ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ. ತಮಿಳು ಚಿತ್ರರಂಗದ ನಿರ್ದೇಶಕರೋರ್ವರ ನಿರ್ದೇಶನದಂತೆ ಅವರಿಂದ ಮಾಹಿತಿ ಪಡೆದು ಕುಕ್ಕೆಗೆ ಕತ್ರಿನಾ ಕೈಫ್ ಭೇಟಿ ನೀಡಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.ಮಾಸ್ಕ್, ತಲೆಗೆ ದುಪ್ಪಟ್ಟ:
ಕುಕ್ಕೆಗೆ ಆಗಮಿಸಿದ ಕತ್ರಿನಾ ಕೈಫ್ ಖಾಸಗಿ ವಸತಿ ಗೃಹದಿಂದ ಕಾರಿನಲ್ಲಿ ದೇವಸ್ಥಾನದ ವರೆಗೆ ಆಗಮಿಸಿದ್ದು, ಈ ವೇಳೆ ಅವರು ಮುಖಕ್ಕೆ ಮಾಸ್ಕ್, ತಲೆಗೆ ದುಪ್ಪಟ್ಟ ಹಾಕಿಕೊಂಡೇ ಓಡಾಟ ನಡೆಸಿದ್ದು, ಪೂಜೆಯಲ್ಲೂ ಭಾಗವಹಿಸಿದ ಸಂದರ್ಭದಲ್ಲೂ ಮಾಸ್ಕ್, ತಲೆಗೆ ದುಪ್ಪಟ್ಟ ಧರಿಸಿರುವುದು ಕಂಡುಬಂದಿದೆ. ಮಾಧ್ಯಮದರಿಂದ ಅಂತರ ಕಾಯ್ದುಕೊಂಡಿದ್ದ ಕತ್ರಿನಾ ಮಾಧ್ಯಮದರಿಗೆ ಮುಖ ತೋರಿಸುವುದರಲ್ಲೂ ಹಿಂದೇಟು ಹಾಕಿದರು. ಮಧ್ಯಾಹ್ನ ದೇವಸ್ಥಾನದ ಭೋಜನ ಶಾಲೆಯಲ್ಲಿ (ವಿಐಪಿ) ಪ್ರಸಾದ ಸ್ವೀಕರಿಸುವ ಸಂದರ್ಭದಲ್ಲೂ ಕೆಲ ಹೊತ್ತು ಕಾದು ಮಾಧ್ಯಮದವರ ಕಣ್ಣು ತಪ್ಪಿಸಿಯೇ ತೆರಳಿದ ಘಟನೆಯೂ ನಡೆದಿದೆ. ಕತ್ರಿನಾ ಕೈಫ್ ಜೊತೆಗೆ ಮಹಿಳಾ ಪೊಲೀಸ್ ಸಿಬ್ಬಂದಿ ನಿಯೋಜನೆಯಲ್ಲಿದ್ದರು.ಕುಕ್ಕೆಗೆ ಕತ್ರಿನಾ ಕೈಫ್ ಆಗಮಿಸುತ್ತಿರುವ ಮಾಹಿತಿ ತಿಳಿದ ಪತ್ರಕರ್ತರು, ಟಿವಿ ಮಾಧ್ಯಮದವರು ಕುಕ್ಕೆಗೆ ಆಗಮಿಸಿ ಕತ್ರಿನಾ ಕೈಫ್ ಚಿತ್ರೀಕರಣ ಆರಂಭಿಸಿದ ವೇಳೆ ಕತ್ರಿನಾ ಕೈಫ್ ಅವರೊಂದಿಗಿದ್ದವರು ವಿಡಿಯೋ ಪೋಟೊ ತೆಗೆಯದಂತೆ ತಿಳಿಸಿದ್ದು, ಮಾಧ್ಯಮದವರೊಂದಿಗೆ ವಾಗ್ವಾದ ನಡೆಸಿದ ಘಟನೆಯೂ ನಡೆಯಿತು. ವಿಡಿಯೋ ಮಾಡಿದ ಪತ್ರಕರ್ತರೋರ್ವರ ಮೊಬೈಲ್‌ನ್ನು ಕತ್ರಿನಾ ಕೈಫ್ ಜೊತೆಗಿದ್ದ ಮಹಿಳೆಯೋರ್ವರು ಕಸಿದುಕೊಂಡ ಘಟನೆಯೂ ನಡೆದಿದೆ. ಒಟ್ಟಿನಲ್ಲಿ ಮಾಧ್ಯಮದವರಿಂದ ಕತ್ರಿನಾ ಕೈಫ್ ದಿನದ ಕೊನೆವರೆಗೂ ಅಂತರ ಕಾಯ್ದುಕೊಂಡಿದ್ದರು. ಕತ್ರಿನಾ ಕೈಫ್ ಜೊತೆಗಿದ್ದವರು ಮಾಧ್ಯಮದವರೊಂದಿಗೆ ವರ್ತಿಸಿದ ನಡೆಯ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ.