ರಾಜಿಯಾಗದೆ ಬರೆದಂತೆ ಬದುಕಿದರು ಕಟ್ಟೀಮನಿ

KannadaprabhaNewsNetwork |  
Published : Aug 09, 2026, 03:00 AM IST
ಸಂಕೇಶ್ವರದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ಡಿ.ಎಸ್‌.ಕಾಂಬಳೆ ಮಾತನಾಡಿದರು | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಸಮಾಜದೊಳಗಿನ ಸಣ್ಣತನಗಳನ್ನು ತಮ್ಮ ಕಥೆ ಕಾದಂಬರಿಗಳಲ್ಲಿ ಒತ್ತುಕೊಟ್ಟು ಚಿತ್ರಿಸುವ ಬಸವರಾಜ ಕಟ್ಟೀಮನಿಯವರು ಸಮಾಜವನ್ನು ಎಚ್ಚರಿಸುವ ಭಾಗವಾಗಿ ಜರತಾರಿ ಜಗದ್ಗುರು ಎಂಬ ಕಾದಂಬರಿ ರಚಿಸಿ ಕ್ರಾಂತಿಕಾರಿ ಬದಲಾವಣೆಗೆ ಮುನ್ನುಡಿ ಬರೆದರು ಎಂದು ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಯಲ್ಲಪ್ಪ ಹಿಮ್ಮಡಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸಮಾಜದೊಳಗಿನ ಸಣ್ಣತನಗಳನ್ನು ತಮ್ಮ ಕಥೆ ಕಾದಂಬರಿಗಳಲ್ಲಿ ಒತ್ತುಕೊಟ್ಟು ಚಿತ್ರಿಸುವ ಬಸವರಾಜ ಕಟ್ಟೀಮನಿಯವರು ಸಮಾಜವನ್ನು ಎಚ್ಚರಿಸುವ ಭಾಗವಾಗಿ ಜರತಾರಿ ಜಗದ್ಗುರು ಎಂಬ ಕಾದಂಬರಿ ರಚಿಸಿ ಕ್ರಾಂತಿಕಾರಿ ಬದಲಾವಣೆಗೆ ಮುನ್ನುಡಿ ಬರೆದರು ಎಂದು ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಯಲ್ಲಪ್ಪ ಹಿಮ್ಮಡಿ ಹೇಳಿದರು.

ಕರ್ನಾಟಕ ಸರ್ಕಾರದ ಬೆಳಗಾವಿಯ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದಿಂದ ಸಂಕೇಶ್ವರದ ಎಸ್‌ಡಿವಿಎಸ್ ಸಂಘದ ಎಸ್.ಎಸ್ ಕಲಾ ಹಾಗೂ ಟಿ.ಪಿ ವಿಜ್ಞಾನ ಮಹಾವಿದ್ಯಾಲಯದ ಐಕ್ಯೂಎಸಿ ಘಟಕ ಹಾಗೂ ಕನ್ನಡ ವಿಭಾಗಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಜರತಾರಿ ಜಗದ್ಗುರು ಸಾಮಾಜಿಕ ಧಾರ್ಮಿಕ ವ್ಯವಸ್ಥೆಯ ಸೂಕ್ಷ್ಮತೆಗಳು ಎಂಬ ವಿಷಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜರತಾರಿ ಜಗದ್ಗುರು ಒಂದು ಚಾರಿತ್ರಿಕ ಸಂಗತಿಯನ್ನಾಧರಿಸಿ ಬರೆದ ಕಾದಂಬರಿ. ಇದನ್ನು ರಚಿಸುವುದರ ಮೂಲಕ ಸಮಾಜ ಪೀಡಕ ಪ್ರಭಾವಿ ಧಾರ್ಮಿಕ ಮುಖ್ಯಸ್ಥನನ್ನು ಎದುರು ಹಾಕಿಕೊಂಡ ಪರಿಣಾಮವಾಗಿ ಕಟ್ಟೀಮನಿಯವರು ತಮ್ಮ ಜೀವಕ್ಕೂ ಅಪಾಯ ತಂದುಕೊಂಡರು. ಆದರೂ ಅವರು ವೈಯಕ್ತಿಕ ಬಾಳಿನಲ್ಲಿ ಎಂದಿಗೂ ರಾಜಿಯಾಗದೆ ಬರೆದಂತೆ ಬದುಕಿದರು ಎಂದು ಹೇಳಿದರು.

ವಿಶೇಷ ಉಪನ್ಯಾಸ ನೀಡಿದ ವಿಮರ್ಶಕ ಪ್ರಕಾಶ ಗಿರಿಮಲ್ಲನವರ, ಬಸವರಾಜ ಕಟ್ಟೀಮನಿಯವರ ಸಮಾಜಮುಖಿ ಕಾದಂಬರಿಗಳಲ್ಲಿ ಜರತಾರಿ ಜಗದ್ಗುರು ಕೃತಿ ಸತ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಸಮಾಜದಲ್ಲಿ ನಡೆಯುವ ಅನೈತಿಕ ವ್ಯವಸ್ಥೆಯನ್ನು ಜನರೆದುರಿಗೆ ತೆರೆದಿಡುವ ಪ್ರಗತಿಶೀಲ ಲೇಖಕರಾದ ಬಸವರಾಜ ಕಟ್ಟೀಮನಿಯವರು ಧಾರ್ಮಿಕ ನಂಬಿಕೆಯಲ್ಲಿ ಜಗದ್ಗುರು ಸ್ಥಾನದಲ್ಲಿರುವ ಒಬ್ಬ ಮುಖ್ಯ ವ್ಯಕ್ತಿ ತನ್ನ ಒಂದು ಇಂದ್ರಿಯ ದೌರ್ಬಲ್ಯದಿಂದ ಸಾಮಾಜಿಕ ಸ್ವಾಸ್ಥ್ಯವನ್ನು ಹೇಗೆ ಕದಡಬಲ್ಲ ಎಂಬ ಆಶಯವನ್ನು ಚಾರಿತ್ರಿಕ ಘಟನೆಯನ್ನಾದರಿಸಿ ಬರೆದು ಪ್ರಗತಿಶೀಲತೆಗೆ ಮಾದರಿಯಾದರು ಎಂದು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಡಿ.ಎಸ್.ಕಾಂಬಳೆ ಮಾತನಾಡಿ, ವಿದ್ಯಾರ್ಥಿಗಳಾದವರು ಬದುಕಿನಲ್ಲಿ ಜ್ಞಾನ ಗಳಿಸಬೇಕು. ಹಾಗೆಯೇ ಪ್ರಜ್ಞಾವಂತರಾಗಿ ಬಾಳಬೇಕು. ಬಸವರಾಜ ಕಟ್ಟೀಮನಿಯವರ ಸಾಹಿತ್ಯ ಓದಿದರೆ ಜ್ಞಾನ ಮತ್ತು ಪ್ರಜ್ಞೆ ಗುಣಗಳು ನಮ್ಮನ್ನು ಆವರಿಸುತ್ತವೆ ಎಂದು ಹೇಳಿದರು. ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಸದಸ್ಯರಾದ ಪ್ರೊ.ಎಸ್‌.ಜಿ.ಚಿಕ್ಕನರಗುಂದ, ಬಿಸಿಎ ಕಾಲೇಜು ಪ್ರಾಂಶುಪಾಲ ಡಾ.ರವೀಂದ್ರ ಕಾಂಬಳೆ, ಐಕ್ಯೂಎಸಿ ಸಂಯೋಜಕ ಪ್ರೊ. ಎಂ.ಆರ್.ಪಾಟೀಲ್, ಡಾ.ಮಹಾನಂದ ಹಿರೇಮಠ, ಪ್ರೊ.ರುದ್ರಪ್ಪ ಬಡಿಗೇರ, ಡಾ.ಶ್ರೀಶೈಲ ಮಠಪತಿ, ಡಾ.ಸುನೀಲಕುಮಾರ್, ಯರಗಟ್ಟಿಯ ರಾಜು ಗಸ್ತಿ, ಪ್ರಜ್ವಲ್ ಕಟ್ಟಿ, ರಮ್ಯಾ ಗಸ್ತಿ, ವೈಷ್ಣವಿ ಪಾಟೀಲ, ರಾಜು ಹಲಗಿ ಮುಂತಾದವರು ಉಪಸ್ಥಿತರಿದ್ದರು.

ಪ್ರತಿಷ್ಠಾನದ ಸದಸ್ಯ ಸಂಚಾಲಕ ಹಮೀದಾ ಬೇಗಂ ದೇಸಾಯಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಲಕ್ಷ್ಮೀ ಗಡಕರಿ ಕ್ರಾಂತಿ ಗೀತೆ ಹಾಡಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ವಿಜಯಮಾಲಾ ನಾಗನೂರಿ ಸ್ವಾಗತಿಸಿದರು. ಪ್ರಾಧ್ಯಾಪಕ ದೇಮಣ್ಣ ಸೊಗಲದ ವಂದಿಸಿದರು. ಕುಮಾರಿ ವಚನಶ್ರೀ ಚೌಗಲಾ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಪೌಷ್ಟಿಕತೆಯಿಂದ ಮಕ್ಕಳಲ್ಲಿ ರಕ್ತಹೀನತೆ, ಕಬ್ಬಿಣಾಂಶ ಕೊರತೆ: ಸದ್ಗುರು ಮಧುಸೂದನ ಸಾಯಿ
ಕಾಂಗ್ರೆಸ್‌ನದು ಪೇಮೆಂಟ್ ಸೀಟ್‌ ಸರ್ಕಾರ: ಗೋವಿಂದ ಕಾರಜೋಳ